ಕೋಲಾರ ಜಿಲ್ಲಾ ನೌಕರರ ಕ್ರೀಡಾಕೂಟದ ಸಮಾರೋಪ-ಬಹುಮಾನ ವಿತರಣೆ
ಜಿಲ್ಲಾಡಳಿತದ ಯಶಸ್ಸಿಗೆ ನೌಕರರ ಕಾರ್ಯದಕ್ಷತೆ, ಶ್ರದ್ಧೆ ಅಗತ್ಯ-ವೆಂಕಟ್‍ರಾಜಾ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲಾಡಳಿತದ ಯಶಸ್ಸು ಹಾಗೂ ಜಿಲ್ಲೆಯ ಅಭಿವೃದ್ದಿಗೆ ನೌಕರರು ಕಾರ್ಯದಕ್ಷತೆ, ಶ್ರದ್ಧೆಯಿಂದ ತಂಡೋಪಾದಿಯಲ್ಲಿ ಕೆಲಸ ಮಾಡಿದರೆ ಯಶಸ್ಸು ಖಚಿತ, ಹುದ್ದೆ ಯಾವುದೇ ಇರಲಿ ಆ ಕೆಲಸದಲ್ಲಿ ನಿಮ್ಮ ತಲ್ಲೀನತೆ ಮುಖ್ಯ ಎಂದು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಕರೆ ನೀಡಿದರು.
ಜಿಲ್ಲಾಡಳಿತ,ಜಿಪಂ, ಯುವಸಬಲೀಕರಣ,ಕ್ರೀಡಾ ಇಲಾಖೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ನೌಕರರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಳುಗಳಿಗೆ ಬಹುಮಾನ ವಿತರಿಸಿ, ಕ್ರೀಡಾಕೂಟಕ್ಕೆ ಸಹಕರಿಸಿದವರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ನಾವು ಒಳ್ಳೆಯ ಕೆಲಸ ಮಾಡುತ್ತೇವೆ, ಜನಸೇವೆಯ ಮೂಲಕ ಜಿಲ್ಲಾಡಳಿತಕ್ಕೆ ಗೌರವ ತರುತ್ತೇವೆ ಎಂಬ ಸಂಕಲ್ಪದೊಂದಿಗೆ ಕರ್ತವ್ಯ ನಿರ್ವಹಿಸಿರಿ, ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ತಿಳಿಸಿದರು.
ಕೋಲಾರ ಸೂಕ್ಷ್ಮ ಜಿಲ್ಲೆ ಆದರೂ ಹಳೆ ಜಿಲ್ಲೆ, ಬಂಗಾರ ಕೊಟ್ಟ ಇಲ್ಲಿನ ನೌಕರರು ಜನರ ಕೆಲಸ ಮಾಡುವ ಮೂಲಕ ಬಡವರಿಂದ ಗೌರವ ಪಡೆದುಕೊಳ್ಳಬೇಕು ಎಂದರು.

ನೌಕರರು ಹಕ್ಕು ಕರ್ತವ್ಯ ಪಾಲಿಸಿ


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ, ಕಾಲಮಿತಿ ಸೇವೆಯ ಮೂಲಕ ಜನರಿಗೆ ಹತ್ತಿರವಾದರೆ, ಎಂತಹ ಒತ್ತಡಗಳೇ ಬಂದರೂ ನಿಮ್ಮಲ್ಲಿ ಆತ್ಮಬಲ ಇರುತ್ತದೆ, ನೊಂದು ಬಂದವರ ನೋವು ನೀಗಿಸುವ ಕೆಲಸವನ್ನು ನಿಮ್ಮ ವೃತ್ತಿ ಜೀವನದಲ್ಲಿ ಪಾಲಿಸಿ ಎಂದು ಕರೆ ನೀಡಿ, ನೌಕರರಿಗೆ ಹಕ್ಕು ಮತ್ತು ಕರ್ತವ್ಯಗಳು ಇವೆ ಎಂದರು.
ಜಿಲ್ಲೆಯಲ್ಲಿ ಒತ್ತಡದಲ್ಲೇ ನೌಕರರು ಕೆಲಸ ಮಾಡಬೇಕಾಗಿದೆ, ಆದರೆ ನೀವು ಹೆದರದಿರಿ, ಸರ್ಕಾರಿ ಅಧಿಕಾರಿಗಳ,ನೌಕರರ ಮೇಲೆ ಮೇಲಾಧಿಕಾರಿ ಅನುಮತಿ ಇಲ್ಲದೇ ಕ್ರಿಮಿನಲ್ ಕೇಸ್ ಹಾಕುವಂತಿಲ್ಲ ಎಂಬುದನ್ನು ನನ್ನ ಪ್ರಕರಣದಲ್ಲೇ ಸುಪ್ರೀಂ ಐತಿಹಾಸಿಕ ತೀರ್ಪು ನೀಡಿದೆ ಎಂದರು.
ಪ್ರತಿಭಟನೆ,ತನಿಖಾ ಸಂಸ್ಥೆಗಳಿಗೆ ದೂರು ನೀಡುವ ಧಮ್ಕಿ ಇವೆಲ್ಲವನ್ನು ಮೆಟ್ಟಿನಿಂತು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ, ಒತ್ತಡ ಗುಂಪುಗಳಿಗೆ ಹೆದರದಿರಿ, ಕ್ಲಿಷ್ಟ ಪರಿಸ್ಥಿತಿಯಲ್ಲಿ ನಿಮ್ಮೊಂದಿಗೆ ಪೊಲೀಸ್ ಇಲಾಖೆ ಸದಾ ಇರುತ್ತದೆ. ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಜಾಮೀನುರಹಿತ ಪ್ರಕರಣ ಎಂದು ತಿಳಿಸಿದರು.
ನೌಕರರ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿರುವುದು ಸಂತಸ ತಂದಿದೆ, ಸುರೇಶ್‍ಬಾಬು ನೇತೃತ್ವದಲ್ಲಿ ಕ್ರೀಡಾಕೂಟ ಅದ್ದೂರಿಯಾಗಿ ನಡೆಸಿದ್ದೀರಿ, ಉದ್ಘಾಟನೆಗೆ ನಾನು ಬರಲಿಲ್ಲ, ಆದರೆ ಅದ್ದೂರಿ ಕಾರ್ಯಕ್ರಮದ ಕುರಿತು ಕೇಳಿ ತಿಳಿದುಕೊಂಡೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್‍ಕುಮಾರ್ ಮಾತನಾಡಿ, ಸರ್ಕಾರಿ ನೌಕರರ ಸಂಘಕ್ಕೆ ಸ್ವಲ್ಪವೇ ಕಾಲಾವಕಾಶ ನೀಡಿದರೂ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತೀರಿ ಎಂಬುದನ್ನು ಸುರೇಶ್‍ಬಾಬು ಸಾಕ್ಷೀಕರಿಸಿದ್ದಾರೆ ಎಂದರು.
ಕೋಲಾರ ಜಿಲ್ಲೆಯಲ್ಲಿ ನೌಕರರಿಗೆ ಒತ್ತಡವೂ ಹೆಚ್ಚು,ಜನರ ನಿರೀಕ್ಷೆಯೂ ಹೆಚ್ಚಿದೆ, ಶೇ.ಸಾಧನೆ ಅಥವಾ ವೈಪಲ್ಯಕ್ಕೆ ನೌಕರರ ಪರಿಶ್ರಮವೇ ಆಧಾರ ಎಂದು ತಿಳಿಸಿ, ನೌಕರರ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಅಭಿನಂದಿಸಿದರು.

ಡಿಸಿ,ಎಸ್ಪಿ ಸಿಇಒರಿಗೆ ಅಭಿನಂದನೆ ಸಲ್ಲಿಕೆ


ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಲು ಮಾರ್ಗದರ್ಶನ ನೀಡಿದ ಜಿಲ್ಲೆಯ ತ್ರೀಮೂರ್ತಿಗಳಾದ ಡಿಸಿ,ಎಸ್ಪಿ,ಜಿಪಂ ಸಿಇಒ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿರುವುದಾಗಿ ತಿಳಿಸಿ, ಪ್ರತಿಹೆಜ್ಜೆಯಲ್ಲೂ ನೀಡಿದ ಸಹಕಾರದಿಂದಲೇ ಇಂದು ಕ್ರೀಡಾಕೂಟ ಯಶಸ್ವಿಯಾಗಿದೆ ಎಂದರು.
ನೌಕರರ ಸಂಘ ಜಿಲ್ಲಾಡಳಿತದ ಜತೆ ಇರುತ್ತದೆ, ಜಿಲ್ಲೆಯ ಅಭಿವೃದ್ದಿಗೆ ಸಂಕಲ್ಪದೊಂದಿಗೆ ಕೆಲಸ ಮಾಡುತ್ತೇವೆ ಎಂದ ಅವರು, ಇತಿಹಾಸದಲ್ಲೇ ಮೊದಲ ಬಾರಿಗೆ ನೌಕರರ ಕ್ರೀಡಾಕೂಟಕ್ಕೆ ಪೊಲೀಸ್ ಬ್ಯಾಂಡ್‍ಸೆಟ್ ಒದಗಸಿದಿ ಎಸ್ಪಿಯವರಿಗೂ, ಸಹಕಾರ ನೀಡಿದ ಎಲ್ಲಾ ಇಲಾಖೆಗಳಿಗೂ ಧನ್ಯವಾದ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಎಸ್ಪಿ, ಜಿಪಂ ಸಿಇಒ ಅವರನ್ನು ನೌಕರರ ಸಂಘದಿಂದ ಸನ್ಮಾನಿಸಲಾಯಿತು.
ಕ್ರೀಡಾಕೂಟದ ಯಶಸ್ವಿಗೆ ಸಹಕಾರ ನೀಡಿದ ಅಬಕಾರಿ ಅಧೀಕ್ಷಕ ರಮೇಶ್‍ಕುಮಾರ್,ಜಿಲ್ಲಾಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್, ಇಇ ಮಂಜುನಾಥ್, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪಾಲಿ, ಯುವಜನಸಬಲೀರಣ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಉತ್ತಮ ಊಟ ಒದಗಿಸಲು ಶ್ರಮಿಸಿದ ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಕ್ರೀಡಾಕೂಟ ಯಶಸ್ಸಿಗೆ ಶ್ರಮಿಸಿದ ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷರಾದ ಪುರುಷೋತ್ತಮ್,ಕ್ರೀಡಾ,ಸಾಂಸ್ಕøತಿಕ ಸಂಘದ ಅಧ್ಯಕ್ಷ ಎಂ.ನಾಗರಾಜ್, ಕಾರ್ಯದರ್ಶಿ ಇಂಚರ ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಸಿ.ಎಲ್.ಶ್ರೀನಿವಾಸಲು ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳು, ಸಾಂಸ್ಕøತಿಕ ಸ್ವರ್ಧೆಗಳಲ್ಲಿಗೆಲುವು ಸಾಧಿಸಿದ ನೌಕರರಿಗೆ ಬಹುಮಾನ ವಿತರಿಸಲಾಯಿತು.
ಮಾಲೂರಿನ ರಂಗವಿಜಯ ಕಲಾ ತಂಡ ಹಾಗೂ ಬಾಲಾಜಿ ನೇತೃತ್ವದ ಡೊಳ್ಳು ಕುಣಿತದ ತಂಡ ಇಡೀ ಕ್ರೀಡಾಕೂಟದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಎಲ್ಲರ ಮನಸೂರೆಗೊಂಡಿತು.
ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌರವಾಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷರಾದ ಅಜಯ್‍ಕುಮಾರ್, ಮುನಿಯಪ್ಪ, ಮಂಜುನಾಥ್, ನಂದೀಶ್‍ಕುಮಾರ್, ಮಾಜಿ ಅಧ್ಯಕ್ಷರಾದ ಕೆ.ಎನ್.ಮಂಜುನಾಥ,ಕೆ.ಬಿ.ಅಶೋಕ್, ಹಾಲಿ ಕಾರ್ಯದರ್ಶಿಗಳಾದ ಶಿವಕುಮಾರ್, ವಿಜಯಮ್ಮ,ರವಿ, ನಾಗಮಣಿ, ನವೀನಾ,ಪದಾಧಿಕಾರಿಗಳಾದ ಅನಿಲ್,ವಿ.ಮುರಳಿಮೋಹನ್, ಪಿಡಿಒ ನಾಗರಾಜ್, ಕ್ರೀಡಾಕಾರ್ಯದರ್ಶಿ ಚಂದ್ರಕಲಾ, ಪ್ರೇಮಾ, ಸುಬ್ರಮಣಿ, ಶ್ರೀರಾಮ್, ತಾಲ್ಲೂಕು ಅಧ್ಯಕ್ಷರುಗಳಾದ ಬಂಗವಾದಿ ನಾಗರಾಜ್, ಅಪ್ಪೇಗೌಡ, ಮುನೇಗೌಡ ಸೇರಿದಂತೆ ನೌಕರರ ಸಂಘದ ಜಿಲ್ಲಾ, ತಾಲ್ಲೂಕು ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು, ವೃಂದ ಸಂಘಗಳ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.