ಕುಂದಾಪುರ: “ನಾಡಿಗೆ ಸಮರ್ಪಣಾ ಭಾವದಿಂದ ತನ್ನನ್ನು ಅರ್ಪಿಸಿಕೊಂಡು ಮಾದರಿಯಾದ ಗಿಳಿಯಾರು ಕುಶಲ ಹೆಗ್ಡೆಯವರ ಸ್ಮರಣೆಯಲ್ಲಿ ದತ್ತಿ ನಿಧಿ ಮೂಲಕ ವಿದ್ಯಾರ್ಥಿಗಳಿಗೆ, ಅಸಹಾಯಕರಿಗೆ 23 ವರ್ಷಗಳಿಂದ ಮಾಡುವ ಸಹಾಯ ಒಂದು “ಪವಿತ್ರ ಯಜ್ಞ” ಎಂದು ಕರೆಯಬಹುದಾಗಿದೆ. ಕೆಲವೇ ಮನುಷ್ಯರು ನಿಧನರಾದ ನಂತರ ಬದುಕಿದಂತೆ ಇರುತ್ತಾರೆ. ಅವರಲ್ಲಿ ಗಿಳಿಯಾರು ಕುಶಲ ಹೆಗ್ಡೆಯವರು ಪ್ರಮುಖರು. ಇಂದು ವಿಸ್ಮತಿಯ ಕಾಲ. ಜನರು ಕೆಲವೇ ವರ್ಷಗಳಲ್ಲಿ ಹಿರಿಯರನ್ನು, ಸಾಧಕರನ್ನು ಮರೆತು ಬಿಡುತ್ತಾರೆ. ಆದರೆ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ನವರು, ಕುಶಲ ಹೆಗ್ಡೆಯವರ ಕುಟುಂಬ ಸದಸ್ಯರ ಸಹಕಾರದಿಂದ ನೆಲದ ಋಣ ತೀರಿಸುವ ಸತ್ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ” ಎಂದು ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಎ. ವಿ. ನಾವಡ ಹೇಳಿದರು.
ಕುಂದಾಪುರದ ಸರಕಾರಿ ಪ. ಪೂ. ಕಾಲೇಜಿನ “ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರ”ದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಬೆಂಗಳೂರಿನ ಕಾನೂನು ಸಲಹೆಗಾರ ಹಾಗೂ ಖ್ಯಾತ ಲೆಕ್ಕ ಪರಿಶೋಧಕ, ಸಿಎ ನಾಗರಾಜ ಆಚಾರ್ ವಿದ್ಯಾರ್ಥಿ ಜೀವನವನ್ನು ಲಘುವಾಗಿ ಪರಿಗಣಿಸದಂತೆ ಕಿವಿ ಮಾತು ಹೇಳಿದರು.
ಶಿಸ್ತು, ಸಮಯದ ಸದುಪಯೋಗ, ಆರೋಗ್ಯದ ಬಗ್ಗೆ ಕಾಳಜಿ, ಗುರಿ ಸಾಧನೆಯ ಕನಸು, ಸತತ ಶ್ರಮ, ಮೌಲ್ಯಯುತ ಜೀವನ ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು. “ಆರ್ಥಿಕವಾಗಿ ಸದೃಢವಾದರೂ, ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆ ಇಂದು ಸಮಾಜವನ್ನು ಕಾಡುತ್ತಿದೆ. ಈ ಪರಿಸ್ಥಿತಿ ಮುಂದುವರೆಯದಂತೆ ಗಮನಿಸಬೇಕು” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿ ನಿಧಿ ಅಧ್ಯಕ್ಷ ಬಿ. ಪ್ರಕಾಶ್ಚಂದ್ರ ಶೆಟ್ಟಿ ವಹಿಸಿ, ಕುಶಲ ಹೆಗ್ಡೆಯವರ ಜೀವನದ ಸಾಧನೆ ವಿವರಿಸಿದರು.
ಕುಂದಾಪುರ-ಬೈಂದೂರು ತಾಲೂಕಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ಪಡೆದ 60 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿಗೆ ಸೇರ್ಪಡೆಗೊಂಡ ಅರ್ಹ 400 ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.
ಸಂಸ್ಥೆಯ ವಿಶ್ವಸ್ಥರಾದ ಉದಯ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಯು. ಎಸ್. ಶೆಣೈ ಸ್ವಾಗತಿಸಿದರು.
ವಿಶ್ವಸ್ಥರಾದ ಕೆ. ನಾರಾಯಣ, ಜಿ. ಸಂತೋಷ ಕುಮಾರ್ ಶೆಟ್ಟಿ, ಖಜಾಂಚಿ ಸ್ನೇಹಪ್ರಭಾ ರೈ ಸಾಧಕ ವಿದ್ಯಾರ್ಥಿಗಳಿಗೆ ವಿವರ ನೀಡಿದರು.
ಹಂದಕುಂದ ಸೋಮಶೇಖರ ಶೆಟ್ಟಿ ರ್ಯಾಂಕ್ ವಿಜೇತರನ್ನು ಪರಿಚಯಿಸಿದರು. ಪಿ. ಜಯವಂತ ಪೈ ವಂದಿಸಿದರು.