ಶ್ರೀನಿವಾಸಪುರ: ಮನಸ್ಸು ಮತ್ತು ಆಹಾರ ನಿಯಂತ್ರಣದ ಮೂಲಕ ಕಾಯಿಲೆ ನಿಯಂತ್ರಣ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ಎಸ್‍ವಿ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಧುಮೇಹ ಜಾಗೃತಿ ಶಿಬಿರದಲ್ಲಿ ಮಾತನಾಡಿದ ಅವರು, ಪ್ರಾರಂಭದ ಹಂತದಲ್ಲಿ ಎಚ್ಚರಕೆ ವಹಿಸಿದರೆ ಮಧುಮೇಹ ನಿಯಂತ್ರಣ ಸುಲಭಸಾಧ್ಯ ಎಂದು ಹೇಳಿದರು.
ಆರೋಗ್ಯ ಕಾಳಜಿ ಕಡಿಮೆ ಇರುವ ಗ್ರಾಮೀಣ ಪ್ರದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಎಷ್ಟೋ ಜನಕ್ಕೆ ತಾವು ಮಧುಮೇಹ ರೋಗಿಗಳೆಂಬ ಕಲ್ಪನೆಯೇ ಇಲ್ಲ. ಕಾಯಿಲೆ ಲಕ್ಷಣ ಕಂಡುಬಂದರೂ ನಿರ್ಲಕ್ಷಿಸುವುದು ಸಾಮಾನ್ಯವಾಗಿದೆ. ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಾಗ ವೈದ್ಯರ ಬಳಿ ಹೋಗುತ್ತಾರೆ. ಆಗ ನಡೆಸುವ ಪರೀಕ್ಷೆಯಿಂದ ಮಧುಮೇಹ ಇರುವುದು ಪತ್ತೆಯಾಗುತ್ತದೆ ಎಂದು ಹೇಳಿದರು.
ಬದಲಾದ ಪರಿಸ್ಥಿತಿಯಲ್ಲಿ ಜನರನ್ನು ರೋಗಕ್ಕಿಂತ ರೋಗದ ಭಯ ಹೆಚ್ಚಾಗಿ ಕಾಡುತ್ತಿದೆ. ಎಷ್ಟೋ ಜನ ತಮಗೆ ಯಾವುದೇ ರೋಗ ಇಲ್ಲದಿದ್ದರೂ, ರೋಗದ ಭಯದಿಂದ ಆಸ್ಪತ್ರೆಗೆ ಹೋಗುತ್ತಾರೆ. ಬಲವಂತವಾಗಿ ಚಿಕಿತ್ಸೆ ಪಡೆಯುತ್ತಾರೆ. ಈ ಪರಿಸ್ಥಿತಿ ಬದಲಾಗಬೇಕು. ತಮ್ಮ ದೇಹ ಸ್ಥಿತಿ ಬಗ್ಗೆ ಕಾಳಜಿ ಹೊಂದಬೇಕು. ಅನಗತ್ಯ ಭಯದಿಂದ ದೂರವಿದ್ದು ವಾಸ್ತವ ಸ್ಥಿತಿಗೆ ಹತ್ತಿರವಾಗಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು.
ಸಕ್ಕರೆ ಕಾಯಿಲೆ ಇರುವವರು ತಜ್ಞ ವೈದ್ಯರ ಸಲಹೆ ಪಡೆದು ಆಹಾರ ಸೇವನೆ ಮಾಡಬೇಕು. ಹಾಗೆಂದ ಮಾತ್ರಕ್ಕೆ ಅಧಿಕ ಬೆಲೆಯ ಆಹಾರ ಸೇವನೆ ಎಂದಲ್ಲ. ಮನೆಯಲ್ಲಿ ಲಭ್ಯವಿರುವ ಆಹಾರ ಪದಾರ್ಥಗಳಿಂದ ತಯಾರಿಸಿದ ಆಹಾವರ ಹಾಗೂ ಸ್ಥಳೀಯ ಪರಿಸರದಲ್ಲಿ ದೊರೆಯುವ ಹಣ್ಣು ಹಾಗೂ ತರಕಾರಿ ಹಾಗೂ ಸೊಪ್ಪುಗಳ ಸೇವನೆಯಿಂದ ಕಾಯಿಲೆ ನಿಯಂತ್ರಿಸಬಹುದು. ನಿಗದಿತ ಮಿತಿಯಲ್ಲಿ ಆಹಾರ ಸೇವನೆ ಮಾಡುವುದೂ ಸಹ ಆರೋಗ್ಯ ರಕ್ಷಣೆಯ ಒಂದು ಮಾರ್ಗ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ತಾಲ್ಲೂಕಿನ ಸಂತೆಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವುದರ ಮೂಲಕ ಗ್ರಾಮೀಣ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ಕಿರು ಹೊತ್ತಿಗೆ, ಕರಪತ್ರಗಳ ಮೂಲಕವೂ ವಿವಿಧ ರೋಗಗಳು ಹಾಗೂ ಅವುಗಳ ನಿಯಂತ್ರಣ ಕುರಿತು ತಿಳುವಳಿಕೆ ಉಂಟುಮಾಡಲಾಗುತ್ತಿದೆ. ತಾಲ್ಲೂಕಿನ ಗೌನಿಪಲ್ಲಿಯಲ್ಲಿ ಆರೋಗ್ಯ ಮಾಹಿತಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಕ್ಕರೆ ಕಾಯಿಲೆ ಕುರಿತು ಸಂವಾದ ಏರ್ಪಡಿಸಲಾಗಿತ್ತು. ರೋಗಿಗಳ ಪ್ರಶ್ನೆಗಳಿಗೆ ಡಾ. ವೈ.ವಿ.ವೆಂಕಟಾಚಲ ಹಾಗೂ ಡಾ. ಶಿವಕುಮಾರ್ ಉತ್ತರಿಸಿದರು.
ಪ್ರಾಂಶುಪಾಲ ಸೀನಪ್ಪ, ಉಪನ್ಯಾಸಕ ಬಿ.ಶ್ರೀನಿವಾಸ್ ಇದ್ದರು.