

ವಿದ್ಯಾರ್ಥಿಗಳಿಗಿಂದು ಪ್ರೇರಣೆ ನೀಡುವ ಉತ್ತಮವಾದ ಸೌಲಭ್ಯಗಳು ದೊರಕುತ್ತಿವೆ. ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ಚಾರಿಟೆಬಲ್ ಟ್ರಸ್ಟ್‍ನವರು ಎರಡು ದಶಕಗಳಿಂದ ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬುತ್ತಿದ್ದಾರೆ. ವಿದ್ಯಾರ್ಥಿಗಳು ಮುಂದೆ ಉತ್ತಮ ಗೌರವದ ಸ್ಥಾನ ಪಡೆದು ಸಂಪಾದನೆ ಮಾಡಿದಾಗ ಇದೇ ರೀತಿ ಅರ್ಹರಿಗೆ ಸಹಾಯ ನೀಡಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ವಾತಾವರಣದಲ್ಲಿ ವಿಮರ್ಶಾತ್ಮಕವಾದ ಚಿಂತನಾ ಶಕ್ತಿ ಬೆಳೆಸಿಕೊಳ್ಳಬೇಕು. ಯಾರು ಹೆಚ್ಚು ಪ್ರಶ್ನೆ ಕೇಳುವ ಪ್ರಯತ್ನ ಮಾಡುತ್ತಾರೋ ಅವರು ಅಧ್ಯಯನ ಮಾಡುತ್ತಿದ್ದಾರೆ ಎಂದು ಅರ್ಥ. ಏನು, ಏಕೆ, ಯಾವುದು, ಎಲ್ಲಿ, ಹೇಗೆ… ಹೀಗೆ ವಿಷಯದ ಬಗ್ಗೆ ನಮ್ಮ ಚಿಂತನೆ ಜೀವನದಲ್ಲಿ ರೂಢಿಯಾದರೆ ಯಾವುದೇ ಸಿದ್ಧ ಚೌಕಟ್ಟನ್ನು ಮುರಿದು ಬೆಳೆಯಬಹುದು. ಸೃಜನಾತ್ಮಕ ಚಿಂತನೆ ವಿದ್ಯಾರ್ಥಿಗಳಿಗೆ ಅಗತ್ಯ” ಎಂದು ಶಿಕ್ಷಣ ತಜ್ಞ, ನಿವೃತ್ತ ಪ್ರಾಂಶುಪಾಲ ಡಾ| ಎಂ. ಮಹಾಬಲೇಶ್ವರ ರಾವ್ ಹೇಳಿದರು.
ಕುಂದಾಪುರದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‍ನಿಂದ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆದ ವಿದ್ಯಾರ್ಥಿ ಸಹಾಯಧನ ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಎಸ್.ಎಸ್.ಎಲ್.ಸಿ.ಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿದ ಅವರು “ಕಷ್ಟಗಳು ಬಂದಾಗ ಎದುರಿಸುವ ತಾಳ್ಮೆ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಕಡಿಮೆ ಅಂಕ, ಫೈಲಾಗುವುದು ಜೀವನದ ಸಂಕಷ್ಟ ಅಲ್ಲ, ಇನ್ನೂ ಅವಕಾಶವಿದೆ. ಜೀವನ ಧೀರ್ಘವಾಗಿದೆ. ಬದುಕು ಬದುಕಲು ಯೋಗ್ಯವಾಗಿದೆ ಎಂದು ತಿಳಿಯಬೇಕು. ನಾವು ತಂತ್ರಜ್ಞಾನದ ಗುಲಾಮರಾಗಬಾರದು. ಅಂತರ್ಜಾಲ ಬಳಕೆಯ ಮೌಲ್ಯ ಅರಿತಿರಬೇಕು. ಪೌರಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದ ಅವರು ಹೆತ್ತವರು ಮಕ್ಕಳು ನಮ್ಮಂತೆ ಕಷ್ಟ ಪಡಬಾರದು ಎಂಬ ಕಾರಣಕ್ಕೆ ಅವರನ್ನು “ಪರಪುಟ್ಟ”ರನ್ನಾಗಿ ಮಾಡಬಾರದು ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಮಾರಂಭವನ್ನು ಉದ್ಘಾಟಿಸಿ, ಪಿಯುಸಿ ರ್ಯಾಂಕ್ ವಿಜೇತರನ್ನು ಗೌರವಿಸಿದರು.
“ಗಿಳಿಯಾರು ಕುಶಲ ಹೆಗ್ಡೆ ಓರ್ವ ಸರಳ, ಸಜ್ಜನ ವ್ಯಕ್ತಿ. ಅವರು ಜೀವನದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಹಕಾರ, ಸೇವಾ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದವರು. ಅವರ ಹೆಸರಲ್ಲಿ ಕುಟುಂಬದವರು, ಹಿತೈಷಿಗಳು ದತ್ತಿ ಸಂಸ್ಥೆ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಹಲವು ಸಮಾಜ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ. ಕೋವಿಡ್ ಸಮಸ್ಯೆಯ ಕಾಲದಲ್ಲೂ ಉತ್ತಮವಾಗಿ ಸ್ಪಂದಿಸಿ ಜನರಿಗೆ ನೆರವಾದವರು. ಇಂತಹ ಸೇವೆ ನಿರಂತರವಾಗಿ ಮುಂದುವರೆಯಲಿ” ಎಂದರು.
ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಬಿ. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ, ಗಿಳಿಯಾರು ಕುಶಲ ಹೆಗ್ಡೆಯವರ ಸಾಧನೆ ವಿವರಿಸಿದರು.
ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್‍ನ ವಿಶ್ವಸ್ಥರಾದ ಹಿರಿಯ ಗುತ್ತಿಗೆದಾರ, ಇಂಜಿನಿಯರ್ ಉದಯ ಹೆಗ್ಡೆ, ಗಿಳಿಯಾರು ಕುಶಲ ಹೆಗ್ಡೆ ದತ್ತಿನಿಧಿ ಯೋಜನೆ, ಸಾಧನೆ ವಿವರಿಸಿದರು.
ಟ್ರಸ್ಟ್‍ನ ವಿಶ್ವಸ್ಥ ಹಿರಿಯ ವಕೀಲ ಸಂತೋಷ್ ಕುಮಾರ್ ಶೆಟ್ಟಿ, ಹಂದಕುಂದ ಸೋಮಶೇಖರ ಶೆಟ್ಟಿ, ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಪರಿಚಯಿಸಿದರು.
ವಿಶ್ವಸ್ಥ ಕೆ. ನಾರಾಯಣ ಸಹಾಯಧನ ಪಡೆದ ವಿದ್ಯಾರ್ಥಿಗಳ ವಿವರ ನೀಡಿದರು.
ಖಜಾಂಚಿ ಸ್ನೇಹಾ ರೈ, ವಿಶ್ವಸ್ಥರಾದ ಕಿಶೋರ್ ಹೆಗ್ಡೆ, ಸ್ವರೂಪ್ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು.
ಯು.ಎಸ್.ಶೆಣೈ ಕಾರ್ಯಕ್ರಮ ನಿರೂಪಿಸಿದರು.

