ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಕುರಿತು ಭಯ ಪಡುವ ಅಗತ್ಯವಿಲ್ಲ, ಪರೀಕ್ಷೆಗೆ ಇನ್ನೂ 103 ದಿನ ಬಾಕಿ ಇದೆ, ಹೀಗಿನಿಂದಲೇ ಕಷ್ಟಪಟ್ಟು ಓದಿ, ಇಲಾಖೆ ನೀಡಿರುವ ಪ್ರಶ್ನೆಕೋಠಿಗಳನ್ನು ನಿರಂತರವಾಗಿ ಅಭ್ಯಾಸ ಮಾಡಿ ಎಂದು ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಕರೆ ನೀಡಿದರು.
ಜಿಲ್ಲೆಯ ಬೂದಿಕೋಟೆ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ ಈ ಭಾಗದ 7 ಶಾಲೆಗಳ 400ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ, ಮಕ್ಕಳ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡುತ್ತಿದ್ದರು.
ನಿಮ್ಮ ವಿದ್ಯಾರ್ಥಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆ ಎಂಬ ಆತಂಕ ಬೇಡ, ಎಲ್ಲಾ ಪರೀಕ್ಷೆಗಳೂ ಒಂದೇ, ನೀವು ಕಲಿಕೆಯಲ್ಲಿ ಯಶ ಸಾಧಿಸಿದ್ದರೆ ಪ್ರಶ್ನೆಗಳಿಗೆ ಉತ್ತರಿಸಲು ಭಯ ಬೇಕಾಗಿಲ್ಲ, ಪ್ರಶ್ನೆ ಪತ್ರಿಕೆ ಓದಲು ನಿಮಗೆ 15 ನಿಮಿಷ ಕಾಲಾವಕಾಶ ಸಿಗುವುದರಿಂದ ಆತಂಕವಿಲ್ಲದೇ, ಶಾಂತ ಚಿತ್ತದಿಂದ ಪರೀಕ್ಷಾ ಕೊಠಡಿಯಲ್ಲಿ ಬರೆಯಲು ಮುಂದಾಗಿ ಎಂದರು.
ಬರವಣಿಗೆ ಉತ್ತಮವಾಗಿದ್ದರೆ ನಿಮಗೆ ಹೆಚ್ಚಿನ ಅಂಕ ಬರುವ ಸಾಧ್ಯತೆ ಇದು ಮೌಲ್ಯಮಾಪಕರು ಓದುವಂತಿದ್ದರೆ ಅಂಕ ನೀಡಿಕೆಯಲ್ಲೂ ಅವರಲ್ಲಿ ಧಾರಾಳತನ ಇರುತ್ತದೆ ಆದ್ದರಿಂದ ನೀವು ಬರವಣಿಗೆ ಉತ್ತಮಪಡಿಸಿಕೊಳ್ಳಲು ಮುಂದಾಗಿ ಎಂದರು.
ಈಗಾಗಲೇ ಹಲವಾರು ಶಾಲೆಗಳಲ್ಲಿ ಸಿಲಬಸ್ ಮುಗಿಸಲಾಗಿದೆ, ಕೆಲವು ಕಡೆ ಇನ್ನೇನು ಈ ತಿಂಗಳ ಕೊನೆ ವೇಳೆಗೆ ಮುಗಿಸುತ್ತಾರೆ, ನಂತರ ಗುಂಪು ಅಧ್ಯಯನಕ್ಕೆ ಆದ್ಯತೆ ನೀಡಲಾಗುತ್ತದೆ, ಇಲಾಖೆಯ ಕ್ರಿಯಾ ಯೋಜನೆಯಂತೆ ಚಟುವಟಿಕೆಗಳು ನಡೆಯುತ್ತಿವೆ,ಜತೆಗೆ ನಿಮಗೆ ಈಗಾಗಲೇ ಅಧ್ಯಾಯವಾರು ಪ್ರಶ್ನೆಪತ್ರಿಕೆ ನೀಡಲಾಗಿದೆ ಮತ್ತು ಈ ಬಾರಿ `ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೇಕೋಠಿಯಾಗಿರದೇ ಪ್ರಶ್ನೋತ್ತರ ಕೋಠಿ ನೀಡಲು ಶ್ರಮವಹಿಸಲಾಗಿದೆ ಎಂಧರು.
ಶೇ.100 ಫಲಿತಾಂಶದ ಗುರಿಯೊಂದಿಗೆ ನಿಮ್ಮ ಸಾಧನೆ ಇರಲಿ, ಜಿಲ್ಲಾವಾರು ಫಲಿತಾಂಶ ತುಲನೆಯಲ್ಲೂ ಒಟ್ಟು ಪಾಸಾದವರ ಸಂಖ್ಯೆಯನ್ನು ಪರಿಗಣಿಸದೇ ಗುಣಾತ್ಮಕ ಅಂಕಕಗಳ ಆಧಾರದ ಮೇಲೆ ಜಿಲ್ಲೆಗೆ ರ್ಯಾಂಕ್ ನೀಡುವ ಸಾಧ್ಯತೆ ಇರುವುದರಿಂದ ನೀವು ಎ ಮತ್ತು ಎ+ ಶ್ರೇಣಿ ಪಡೆಯುವತ್ತ ಚಿತ್ತ ಹರಿಸಿ ಎಂದರು.
ಪರೀಕ್ಷೆಗೆ ಅಗತ್ಯವಾದ ಮಾಹಿತಿಯನ್ನು ನಿಮಗೆ ನೀಡುತ್ತಿದ್ದು, ಗೊಂದಲ ಪರಿಹರಿಸಿಕೊಳ್ಳಿ, ಸಮಸ್ಯೆಗಳಿದ್ದರೆ ಧೈರ್ಯದಿಂದ ಎದ್ದು ನಿಂತು ಪ್ರಶ್ನೆ ಕೇಳಿ ಎಂದರು.
ಯುದ್ದಕಾಲದಲ್ಲಿ ಶಸ್ತ್ರಭ್ಯಾಸ ಎನ್ನದೇ ಇಂದಿನಿಂದಲೇ ಪರೀಕ್ಷೆಗೆ ಸಿದ್ದತೆ ನಡೆಸಿ, ಗುಂಪು ಚರ್ಚೆ,ಸಂವಾದ, ಪುನರ್ಮನನದ ಮೂಲಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಪರೀಕ್ಷೆಗೆ ಖುಷಿಯಿಂದ ಹೋಗುವಂತಾಗಬೇಕು ಎಂದರು.
ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಮಾತನಾಡಿ, ಧ್ಯಾನ,ಯೋಗದ ಮೂಲಕ ಮನಸ್ಸನ್ನು ಕಲಿಕೆಯತ್ತ ಬಾಗಿಸಿ ಶೇ.10 ರಷ್ಟು ಮಾತ್ರವೇ ಪ್ರೇರಣೆ, ಉಳಿದ ಶೇ.90 ರಷ್ಟು ನಿಮ್ಮ ಪರಿಶ್ರಮವಿದ್ದರೆ ಮಾತ್ರ ಉತ್ತಮ ಅಂಕ ಗಳಿಕೆ ಸಾಧ್ಯ, ಈ ಬಾರಿ ನಮ್ಮ ತಾಲ್ಲೂಕು ಮೊದಲಾಗಬೇಕು ಎಂದರು.
ಏಕಾಗ್ರತೆ, ಆಸಕ್ತಿ, ಶ್ರದ್ದೆ ಇದ್ದರೆ ಕಲಿಕೆಯಲ್ಲಿ ಸಾಧನೆ ಮಾಡುವುದು ಸುಲಭ, ನಿಮ್ಮಲ್ಲಿ ಸ್ವಯಂ ಕಲಿಕೆಯ ಮನೋಭಾವ ಬರಬೇಕು, ಪಠ್ಯಪುಸ್ತಕ ಓದುವ ಅಭ್ಯಾಸ ಮಾಡಿ ಎಂದು ತಿಳಿಸಿದರು.
ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಬಂಗಾರಪೇಟೆ ಎಸ್ಸೆಸ್ಸೆಲ್ಸಿ ತಾಲ್ಲೂಕು ನೋಡಲ್ ಅಧಿಕಾರಿ ಇಸಿಒ ಸಿ.ಎಂ.ವೆಂಕಟರಮಣಪ್ಪ, ಪರೀಕ್ಷಾ ಭಯ, ಗೊಂದಲಗಳ ಪರಿಹಾರಕ್ಕೆ ಇದೊಂದು ಉತ್ತಮ ವೇದಿಕೆ, ಇಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳು ಬಂದಿದ್ದಾರೆ, ಅವರು ಹೇಳುವುದನ್ನು ಕೇಳಿ ಪರಿಹಾರ ಕಂಡುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಬೂದಿಕೋಟೆ ಕ್ಲಸ್ಟರ್ ವ್ಯಾಪ್ತಿಯ 7 ಶಾಲೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.