ವರದಿ: ಫಾ| ಅನಿಲ್ ಫೆರ್ನಾಂಡಿಸ್, ಚಿತ್ರಗಳು: ಸ್ಟಾನ್ಲಿ ಬಂಟ್ವಾಳ
ಮಂಗಳೂರು, ಏಪ್ರಿಲ್ ೨೦: ಮಂಗಳೂರಿನ ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ನಗರದ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ೨೦೨೩ರ ಏಪ್ರಿಲ್ ೨೦ರ ಗುರುವಾರದಂದು ಮೂವರು ಯಾಜಕ ಉಮೇದ್ವಾರಾರಿಗೆ ಯಾಜಕ ದೀಕ್ಷೆ ನೀಡಿದರು. ಈ ದೀಕ್ಷಾವಿಧಿಯು ನೆರೆದ ನೂರಾರು ಧರ್ಮಗುರುಗಳ, ಧಾರ್ಮಿಕ ಭಗಿನಿಯರ ಹಾಗೂ ವಿಶ್ವಾಸಿಗಳ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಕಾಟಿಪಳ್ಳ ಚರ್ಚಿನ ವಂದನೀಯ ಅವಿನಾಶ್ ಲೆಸ್ಲಿ ಪಾಯ್ಸ್, ವೇಣೂರು ಚರ್ಚಿನ ವಂದನೀಯ ಲೋಹಿತ್ ಅಜಯ್ ಮಸ್ಕರೇನ್ಹಸ್, ಮತ್ತು ನೀರುಡೆ ಚರ್ಚಿನ ವಂದನೀಯ ರಾಬಿನ್ ಜಾಯ್ಸನ್ ಸಾಂತುಮಾಯರ್ ಅವರು ನೂತನವಾಗಿ ದೀಕ್ಷೆ ಸ್ವೀಕರಿಸಿದರು. ಮಂಗಳೂರು ಧರ್ಮಕ್ಷೇತ್ರದ ಸಮಸ್ತರು ಹೊಸದಾಗಿ ದೀಕ್ಷೆ ಪಡೆದ ಈ ಮೂವರು ನವ ಯಾಜಕರೊಂದಿಗೆ ಭಗವಂತನಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಬಲಿಪೂಜೆಯ ಧರ್ಮೋಪದೇಶದಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು, “ಯಜಕತ್ವವು ಒಂದು ಕೊಡುಗೆ ಹಾಗೂ ರಹಸ್ಯವು. ದೇವರು ಈ ಭಾಗ್ಯವನ್ನು ಉಚಿತವಾಗಿ ನೀಡುವುದರಿಂದ ಆದು ಒಂದು ಕೊಡುಗೆ. ದೇವರು ಯಾಜಕರ ಆಯ್ಕೆ ಮತ್ತು ಕರೆಯನ್ನು ಹೇಗೆ ಮಾಡುತ್ತಾನೆ ಎಂದು ಯಾರಿಗೂ ತಿಳಿದಿಲ್ಲ. ಆದುದ್ದರಿಂದ ಅದು ನಿಗೂಢವಾಗಿದೆ” ಎಂದರು. “ಪ್ರತಿಯೊಬ್ಬ ದೀಕ್ಷೆ ಪಡೆದ ಯಜಕನು ಪವಿತ್ರತೆಗಾಗಿ ಕರೆಯಲ್ಪಟ್ಟವನು. ಯಜಕರು ಸಂಸ್ಕಾರಗಳನ್ನು ಆಚರಿಸುವ ಮೂಲಕ ಪವಿತ್ರರಾಗುತ್ತಾರೆ. ಯಜಕರ ಪವಿತ್ರತೆಯು ಅವನ ದೌರ್ಬಲ್ಯಗಳನ್ನು ತೆಗೆದುಹಾಕುವುದಿಲ್ಲ. ಆದ್ದರಿಂದ, ಅವನು ತನ್ನನ್ನು ತಾನು ದೇವರಿಗೆ ಒಪ್ಪಿಸುವ ಮೂಲಕ ಮತ್ತು ದೇವರ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ಮೂಲಕ ತನ್ನ ದೌರ್ಬಲ್ಯಗಳಲ್ಲಿ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ಪವಿತ್ರತೆಯ ಹಾದಿಯಲ್ಲಿರುವ ಪ್ರತಿಯೊಬ್ಬ ಯಾಜಕನ ವೈಯಕ್ತಿಕ ಧ್ಯೇಯವಾಗುತ್ತದೆ” ಎಂದು ಬಿಷಪ್ ಹೇಳಿದರು,
ಬಲಿಪೂಜೆಯ ಕೊನೆಯಲ್ಲಿ ಜೆಪ್ಪು ಸಂತ ಜೋಸೆಫ್ ಸೆಮಿನರಿ ಪ್ರಾಧ್ಯಾಪಕ ವಂದನೀಯ ಡಾ. ರಾಜೇಶ್ ರೊಸಾರಿಯೊ ನೂತನವಾಗಿ ದೀಕ್ಷೆ ಪಡೆದ ಯಜಕರನ್ನು ಅಭಿನಂದಿಸಿದರು. ನವಯಾಜಕರಲ್ಲಿ ಒಬ್ಬರಾದ ವಂದನೀಯ ರಾಬಿನ್ ಸಾಂತುಮಾಯರ್ ಅವರು, “ನನ್ನ ಜೀವನದ ಈ ಮಹತ್ತರ ದಿನಕ್ಕೆ ಸಾಕ್ಷಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ಯಾಜಕಾಭಿಷೇಕ ನನ್ನ ಜೀವನದಲ್ಲಿ ನಾನು ಪಡೆದ ದೊಡ್ಡ ವರ. ನನ್ನನ್ನು
ತನ್ನದಾಗಿಸಿಕೊಂಡ ಸರ್ವಶಕ್ತ ದೇವರಿಗೆ ಕೋಟ್ಯಂತರ ಧನ್ಯವಾದಗಳು. ನಾನು, ನನ್ನ ಸಹ ದೀಕ್ಷೆ ಪಡೆದ ಯಜಕರೊಂದಿಗೆ, ಬಿಷಪ್ ಮತ್ತು ಸಮಸ್ತ ಧರ್ಮಕ್ಷೇತ್ರಕ್ಕೆ ಕೃತಜ್ಞರಾಗಿರುತ್ತೇನೆ. ನನ್ನ ಸಂಪೂರ್ಣ ಜೀವನವನ್ನು ಯೇಸುವಿಗೆ ಮುಡಿಪಾಗಿಸುತ್ತೇನೆ.” ಬಿಷಪ್ ಪೀಟರ್ ಪೌಲ್ ಸಲ್ಡಾನ್ಹಾ ಅವರು ನವ ಯಾಜಕರ ಪೋಷಕರಿಗೆ, ತರಭೇತಿ ನೀಡಿದ ಗುರುಮಠದ ಪ್ರಾದ್ಯಪಕರಿಗೆ ಎಲ್ಲರಿಗೂ ಧನ್ಯವಾದ ಹೇಳಿದರು. ಧರ್ಮಕ್ಷೇತ್ರದ ಶ್ರೇಷ್ಠಗುರು ಮ್ಯಾಕ್ಸಿಮ್ ಎಲ್ ನೊರೊನ್ಹಾ, ಕುಲಾಧಿಪತಿ ಆತೀ ವಂದನೀಯ ಡಾ| ವಿಕ್ಟರ್ ಜಾರ್ಜ್ ಡಿಸೋಜಾ,
ಸೆಮಿನರಿ ರೆಕ್ಟರ್ ಅತೀ ವಂದನೀಯ ಡಾ. ರೊನಾಲ್ಡ್ ಸೆರಾವೊ, ಕ್ಯಾಥೆಡ್ರಲ್‌ನ ರೆಕ್ಟರ್ ವಂದನೀಯ ಆಲ್ಫ್ರೆಡ್ ಜೆ. ಪಿಂಟೊ, ಗುರುವೃಂದ ಹಾಗೂ ಮತ್ತಿತರರು ಉಪಸ್ಥಿತರಿದ್ದರು.