ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ: ಜ.18: ರೈತರಿಗೆ ಮತ್ತು ಕಾರ್ಮಿಕರಿಗೆ ಮಾರಕವಾಗುವ ಭೂ ಸುಧಾರಣಾ ಕಾಯ್ದೆ ಎ.ಪಿ.ಎಂ.ಸಿ., ವಿದ್ಯುತ್, ಅಗತ್ಯ ಸರಕುಗಳ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳನ್ನು ವಾಪಸ್ಸು ಪಡೆದು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿಪಡಿಸಬೇಕು ಮತ್ತು ಸಂಕಷ್ಠದಲ್ಲಿರುವ ರೈತ ಕುಲವನ್ನು ರಕ್ಷಣೆ ಮಾಡಬೇಕು ಮತ್ತು ದೆಹಲಿ ಚಲೋ ರೈತ ಮಹಿಳೆಯರ ಹೋರಾಟವನ್ನು ಬೆಂಬಲಿಸಿ ಕೋಲಾರ ಜಿಲ್ಲೆಯ ರೈತ ಮಹಿಳೆಯರು ಹಾಗೂ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಒತ್ತಾಯಿಸಿ ನಚೀಕೇತನ ನಿಲಯದಲ್ಲಿ ಆಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೈತ ಮಹಿಳೆಯರು ನಚೀಕೇತನ ನಿಲಯದಿಂದ ತಾಲ್ಲೂಕು ಕಚೇರಿಯವರೆಗೂ ರ್ಯಾಲಿ ಮಾಡಿ ದೆಹಲಿ ಚಲೋ ರೈತ ಮಹಿಳೆಯರ ಹೋರಾಟಕ್ಕೆ ಬೆಂಬಲ ನೀಡಲಾಯಿತು.
ಇದೇ ಸಂದರ್ಭದಲ್ಲಿ ಜಾನಪದ ಕಲಾವಿದರಿಂದ ರೈತರ ಸಮಸ್ಯೆಗಳನ್ನು ಬಿಂಬಿಸುವ ಕಿರುನಾಟಕ ಪ್ರದರ್ಶನ ನಡೆಯಿತು.
ರೈತ ಸಂಘದ ನಳಿನಿಗೌಡ ಮಾತನಾಡಿ ದೆಹಲಿ ಚಲೋ ರೈತರು ಸುಮಾರು ಸತತ 54ದಿನಗಳಿಂದ ಚಳಿ ಗಾಳಿಯೆನ್ನದೆ ರೈತರು ಮಹಿಳೆಯರು, ಮಕ್ಕಳು ಸಮೇತ ಹೋರಾಟ ಮಾಡುತ್ತಿದ್ದರು, ಈ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೇ ರೈತ ವಿರೋದಿ ದೋರಣೆ ಅನುಸರಿಸುತ್ತಿರುವುದು ಖಂಡನೀಯ
ಈ ವಿದ್ಯುತ್ ಕಾಯ್ದೆಯಲ್ಲಿ ದೇಶದ ಬಡ ಜನರಿಗೆ ಬೆಳಕು ಸಿಗಲಿ ಎಂದು ಭಾಗ್ಯಜ್ಯೋತಿ ಕುಟೀರ ಜ್ಯೋತಿ ಎಂದು ಯೋಜನೆಗಳನ್ನು ತರಲಾಗಿತ್ತು. ಈ ಯೋಜನೆಗಳು ಇನ್ನು ಮುಂದೆ ಇರುವುದಿಲ್ಲ. ರೈತರ ಪಂಪ್ಸೆಟ್ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ನಿಲ್ಲುತ್ತದೆ. ರೈತರು ಕೃಷಿ ಮಾಡಲು ಕಷ್ಟಗಳನ್ನು ಸೃಷ್ಟಿಸಿ ಒಕ್ಕಲುತನದಿಂದ ಹೊರಹಾಕಿ ಕೃಷಿಯನ್ನು ಕಾರ್ಪೋರೆಟ್ರ ಕಂಪನಿಗಳಿಗೆ ವಹಿಸುವ ವ್ಯವಸ್ಥೆ ಸೃಷ್ಟಿಸುತ್ತಿದೆ. ಭಾರತ ಸರ್ಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯ ಸರ್ಕಾರವು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತಂದಿದೆ. ಇನ್ನು ಮುಂದೆ ವ್ಯಾಪಾರಸ್ಥರು ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ, ಯಾರಿಂದ ಬೇಕಾದರೂ ಖರೀದಿಸಬಹುದು, ಬೆಂಬಲ ಬೆಲೆಗೆ ಯಾವುದೇ ಖಾತ್ರಿಯಿಲ್ಲ, ಬೆಲೆಯಲ್ಲೂ, ತೂಕದಲ್ಲೂ ಹಣ ಪಾವತಿಯಲ್ಲೂ ರೈತರು ಮೋಸ ಹೋದರೆ ಯಾವುದೇ ಕ್ರಮ ಜರುಗಿಸಲು ಸಾಧ್ಯವಿಲ್ಲ. ಅವರು ನ್ಯಾಯಾಲಯಕ್ಕೆ ಹೋಗುವಂತಿಲ್ಲ. ಅವರು ಎ.ಸಿ ಅಥವಾ ಡಿ.ಸಿ.ಗೆ ದೂರು ನೀಡಬಹುದು. ಈ ತಿದ್ದುಪಡಿಯು ಸಹ ರೈತ ವಿರೋಧಿಯಾಗಿದೆಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಂತಮ್ಮ ಮತ್ತು ಪುಷ್ಟರವರು ಮಾತನಾಡಿ ರೈತನಿದ್ದರೆ ನಾವೆಲ್ಲರೂ ರೈತನು ಒಕ್ಕಿದರೆ ಮಾತ್ರ ನಾವೆಲ್ಲ ಅನ್ನ ತಿನ್ನಲು ಸಾದ್ಯ, ಅನ್ನ ತಿನ್ನುವ ಪ್ರತಿಯೊಬ್ಬರು ರೈತರ ಪರ ನಿಲ್ಲಬೇಕಾಗಿದೆ.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಾರಿಗೋಳಿಸಿರುವ ನೂತನ ಭೂಸುಧಾರಣಾ ಕಾಯಿದೆಯು ರೈತ ವಿರೋಧಿಯಾಗಿರುವುದು ಅಕ್ಷರಶಹಃ ಸತ್ಯ ಎನ್ನುವ ಬಗ್ಗೆ ದೇಶದ ಮೂಲೆ ಮೂಲೆಯಲ್ಲಿಯೂ ವಿಚಾರಗಳು ಕೇಳಿಬರುತ್ತಿವೆ. ಯಾವುದೇ ಚರ್ಚೆಯಿಲ್ಲದೆ ಏಕಾಏಕಿ ಕಾಯಿದೆಗಳನ್ನು ಜಾರಿಗೆ ಮುಂದಾಗಿರುವುದು ಇಡೀ ಸಂಕುಲವನ್ನು ನಾಶ ಮಾಡಿ ಕಾರ್ಪೋರೇಟ್ ಕಂಪನಿಗಳ ಪರವಾಗಿ ಸರ್ಕಾರಗಳಿರುವುದು ಎನ್ನುವುದನ್ನು ಸಾಭೀತುಪಡಿಸುವುದಕ್ಕೆ ಹೊರತು ರೈತರ ಪರವಾಗಿ ಅಲ್ಲ. ಭೂಸುಧಾರಣಾ ಕಾಯಿದೆ ತಿದ್ದುಪಡಿ ತಂದಿರುವುದನ್ನು ಗಮನಿಸಿದರ ರೈತರಿಗೆ ಭೂಮಿ ಹಂಚಿಕೆಯಿರಲಿ. ಈಗ ಅವರ ಬಳಿ ಇರುವ ಭೂಮಿಯು ಉಳಿಯುವ ಲಕ್ಷಣವಿಲ್ಲ. ಕೃಷಿ ಜಮೀನಿನ ಮೇಲೆ ಕಪ್ಪು ಹಣ ಹೂಡಿಕೆಯಾಗಲಿದೆ. ರೈತರ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ, ಕಾರ್ಮಿಕರ ನೆಪದಲ್ಲಿ ಕೈಗಾರಿಕೋದ್ಯಮಗಳಿಗೆ ಸರ್ಕಾರ ಪರೋಕ್ಷವಾಗಿ ಸಹಾಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅದೇ ರೀತಿ ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಗೆ ಬರುವಂತಾಗಿದ್ದು, ಎಪಿಎಂಸಿಯ ಆಸ್ತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಸ್ಥಳೀಯ ಬಂಡವಾಳಶಾಹಿಗಳಿಗೆ ಹಂಚುವ ಹುನ್ನಾರ ನಡೆಸಲಾಗುತ್ತಿದೆ. ಈ ಕಾಯ್ದೆಗಳಿಂದ ರಾಜ್ಯದಲ್ಲಿ ಸುಮಾರು 80 ರಷ್ಟು ಸಣ್ಣ ರೈತರು ಮೊದಲ ಹಂತದಲ್ಲಿ ಕೃಷಿ ಕ್ಷೇತ್ರದಿಂದ ಕಣ್ಮರೆಯಾಗುತ್ತಾರೆ. 2ನೇ ಹಂತದಲ್ಲಿ ರೈತರ ಭೂಮಿಯನ್ನು ಕರಾರು ಪತ್ರಗಳ ಮೂಲಕ ಕಾರ್ಪೋರೇಟ್ ಕಂಪನಿಗಳು ಒತ್ತೆ ಇಟ್ಟುಕೊಳ್ಳುತ್ತವೆ ತದನಂತರ ರೈತರು ಗೇಣಿದಾರರಾಗಿ ಕೃಷಿಯಿಂದ ವಿಮುಕ್ತಿಗೊಳಿಸುತ್ತವೆ.
ಈ ರೀತಿ ಎಲ್ಲಾ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸಿ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗೆ ವಹಿಸುವ ವ್ಯವಸ್ತೆಯಾಗಿದೆ. ಕೇಂದ್ರ ಸರ್ಕಾರಿ ಭೂ ಸ್ವಾದೀನ ಕಾಯ್ದೆ ತಂದಿತ್ತು. ರೈತರಿಗೆ ಅಪಾಯಕರವಾಗಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಇನ್ನು ಮುಂದೆ ರೈತರ ಒಪ್ಪಿಗೆ ಇಲ್ಲದೆ ರೈತರಿಂದ ಕೃಷಿ ಭೂಮಿಯನ್ನು ಕಿತ್ತುಕೊಳ್ಳಬಹುದು. ಈ ರೀತಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರೈತರಿಂದ ಭೂಮಿಯನ್ನು ಕಸಿದುಕೊಂಡು ಹೊರದಬ್ಬುವ ಕೆಲಸವಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿರುವುದರಿಂದಾಗಿ ಮಾನ್ಯ ಪ್ರಧಾನಮಂತ್ರಿಗಳು ರೈತವಿರೋಧಿ ಭೂಸುಧಾರಣಾ, ಎಪಿಎಂಸಿ ಹಾಗೂ ವಿದ್ಯುತ್ ಕಾಯಿದೆಗಳ ತಿದ್ದುಪಡಿ ಮತ್ತು ಅಗತ್ಯವಸ್ತುಗಳ ತಿದ್ದುಪಡಿ ಕಾಯ್ದೆಗಳನ್ನು ಈ ಕೂಡಲೇ ರದ್ದು ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ದಾವಿಸಬೇಕೆಂದು ದೆಹಲಿ ಚಲೋ ಹೋರಾಟ ನಿರತ ರೈತರ ರೈತ ಮಹಿಳಾ ದಿನಾಚರಣೆ ಆಚರಣೆ ಮಾಡುವ ಪ್ರಯುಕ್ತ ಕೋಲಾರ ಜಿಲ್ಲೆಯ ಪ್ರಗತಿ ಪರ ರೈತ ಮತ್ತು ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಒತ್ತಾಯಿಸಿದರು
ಮನವಿಯನ್ನು ಸ್ವೀಕರಿಸಿದ ಶಿರಸ್ತೆದಾರ್ ನಿಮ್ಮ ಮನವಿಯನ್ನು ಈಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಈ ಹೋರಾಟದಲ್ಲಿ ಲಕ್ಷಮ್ಮ, ಮಂಜುಳಾ, ಮಲ್ಲಮ್ಮ, ನೇತ್ರಾವತಿ, ಮಹಾಲಕ್ಷೀ, ಪವಿತ್ರ, ಮಲ್ಲಮ್ಮ, ಶಶಿ, ಚಂದ್ರಮ್ಮ, ದಿವ್ಯಾ, ರತ್ನಮ್ಮ, ಭಾಗ್ಯ, ಮತ್ತು ಪ್ರಗತಿಪರ ಮಹಿಳಾ ಸಂಘಟನೆಗಳ ನೂರಾರು ಮಹಿಳೆಯರು ಮತ್ತು ಚಲಪತಿ, ಶಂಕರ್ ಭಾಗವಹಿಸಿದ್ದರು.