ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮದ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ದಾನಮಯಿ ಶಿಕ್ಷಕ ಧರ್ಮೇಶ್ 71 ವಿದ್ಯಾರ್ಥಿಗಳಿಗೆ, ಸ್ವತಹ ವಿದ್ಯಾರ್ಥಿಗಳೇ ಇಷ್ಟಪಟ್ಟ ಬಟ್ಟೆ ನೀಡಿ ಸಂತ್ರಪ್ತಿ ಪಡಿಸಿದರು.
ಶೈಕ್ಷಣಿಕ ಪ್ರಗತಿಗೆ ದಾನಿಗಳ ನೆರವು ಪೂರಕವಾಗುತ್ತದೆ
ಕೋಲಾರ: ಗ್ರಾಮೀಣ ವಿದ್ಯಾರ್ಥಿಗಳು ದಾನಿಗಳ ನೆರವು ಪಡೆದು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಶಿಕ್ಷಣದ ಮೂಲಕ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಬಿಆರ್‍ಸಿ ರಾಮಕೃಷ್ಣಪ್ಪ ಹೇಳಿದರು.
ತಾಲ್ಲೂಕಿನ ವಕ್ಕಲೇರಿ ಗ್ರಾಮದ ವಿದ್ಯಾವರ್ಧಕ ಪ್ರೌಢ ಶಾಲೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಿಕ್ಷಕ ಹಾಗೂ ದಾನಿ ಧರ್ಮೇಶ್ ಅವರು ಕೊಡಿಸಿದ ಬಟ್ಟೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.
ಶಿಕ್ಷಕ ಧರ್ಮೇಶ್ ಅವರಿಗೆ ವಿದ್ಯಾರ್ಥಿಗಳೇ ಸರ್ವಸ್ವ. ಶಾಲೆಗಳ ನಡುವೆ ಭೇದ ತೋರದೆ, ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೂ, ಅವರು ಇಷ್ಟಪಡುವ ಬಟ್ಟೆ ಕೊಡಿಸುತ್ತಿದ್ದಾರೆ. ಸಮಾಜ ಸೇವಾ ಕಾರ್ಯಗಳ ಮೂಲಕ ಜನರ ಗಮನ ಸೆಳೆದಿದ್ದಾರೆ. ತಮ್ಮ ಸಂಬಳದಲ್ಲಿ ಪ್ರತಿ ತಿಂಗಳು ರೂ.10 ಸಾವಿರ ತೆಗೆದಿರಿಸಿ, ಆ ಹಣವನ್ನು ವಿದ್ಯಾರ್ಥಿಗಳು ಹಾಗೂ ಬಡವರ ಬಳಕೆಗೆ ಬಳಸುತ್ತಿದ್ದಾರೆ. ಇದು ಸ್ತುತ್ಯಾರ್ಹ ನಡೆಯಾಗಿದೆ ಎಂದು ಹೇಳಿದರು.
ಧರ್ಮೇಶ್ ಪ್ರಚಾರ ಬಯಸದೆ ಸೇವೆ ಮಾಡುವ ಅಪರೂಪದ ವ್ಯಕ್ತಿ. ಸಮಾಜ ಅಂಥ ವ್ಯಕ್ತಿಗಳನ್ನು ಗೌರವಿಸಿ ಪ್ರೋತ್ಸಾಹಿಸಬೇಕು. ಅವರನ್ನು ಮಾದರಿಯಾಗಿ ಸ್ವೀಕರಿಸಿ, ಅವರ ಮಾರ್ಗದಲ್ಲಿ ನಡೆಯಬೇಕು. ಆಗ ಹೆಚ್ಚು ಮಕ್ಕಳಿಗೆ ಪ್ರಯೋಜನವಾಗುತ್ತದೆ. ಶೈಕ್ಷಣಿಕ ಪ್ರಗತಿಯ ವೇಗ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಊಟದ ಡಬ್ಬಿ ವಿತರಿಸಲಾಯಿತು.
ದಾನಮಯಿ ಶಿಕ್ಷಕ ಧರ್ಮೇಶ್ ಅವರನ್ನು ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಇಸಿಒ ಆರ್.ಶ್ರೀನಿವಾಸ್, ಬಿಆರ್‍ಸಿ ಸೈಯದ್ ಖಲೀಲುಲ್ಲಾ, ಮುಖ್ಯ ಶಿಕ್ಷಕರಾದ ದಾಸಪ್ಪ, ಮುನೇಗೌಡ ಇದ್ದರು.