ಶ್ರೀನಿವಾಸಪುರ : ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ವಿಮಾ ಗ್ರಾಮ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಶ್ರೀನಿವಾಸಪುರ, ಹಾಗೂ ಭಾರತೀಯ ಜೀವ ವಿಮಾ ನಿಗಮ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಗೌನಿಪಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮವನ್ನು ಟಿ ಎ ಪಿ ಎಂ ಸಿ ನಿರ್ದೇಶಕರಾದ ಭಕ್ಷು ಸಾಬ್ ರವರು ನೆರವೇರಿಸಿ ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆಯ ಪ್ರತಿಯೊಂದು ಕಾರ್ಯಕ್ರಮಗಳು ಸಮಾಜಮುಖಿ ಕಾಳಜಿಯಿಂದ ಕೂಡಿದ್ದು ಈ ಸಂಸ್ಥೆಯ ನಿತ್ಯ ನಿರಂತರ ಕಾರ್ಯಕ್ರಮಗಳಲ್ಲಿ ನಾನು ಕೂಡಾ ಸಂತೋಷದಿಂದ ಭಾಗವಹಿಸುತ್ತೇನೆ.
ಇವತ್ತು ಈ ಸಂಸ್ಥೆಯಿಂದ ಸಾವಿರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಸಂಸ್ಥೆಯ ಜೊತೆ ನನ್ನ ಸಹಕಾರ ಯಾವತ್ತು ಇರುತ್ತದೆ ಎಂದು ಶುಭ ಹಾರೈಸಿದರು.
ಜಿಲ್ಲಾ ನಿರ್ದೇಶಕರಾದ ಪದ್ಮಯ್ಯರವರು ಮಾತನಾಡುತ್ತ, ಧರ್ಮಸ್ಥಳದ ಪೂಜ್ಯರು ಬಡ ಜನರ ಉದ್ಧಾರಕ್ಕಾಗಿ ನೂರಾರು ಯೋಜನೆಗಳನ್ನು ಹಳ್ಳಿ ಹಳ್ಳಿಗಳಿಗೆ ನೀಡಿದ್ದಾರೆ. ಒಂದು ಕಾಲದಲ್ಲಿ ಶ್ರೀಮಂತರ ಕೈಯಲ್ಲಿ ಮಾತ್ರ ಇದ್ದ ಎಲ್ ಐ ಸಿ ಪಾಲಿಸಿ ಇವತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕೈಯಲ್ಲೂ ಇದೆ ಎಂದರೆ ಅದಕ್ಕೆ ಕಾರಣ ಧರ್ಮಸ್ಥಳ ಸಂಸ್ಥೆ.
ಸಮಾಜದ ಅರ್ಥಿಕವಾಗಿ ದುರ್ಬಲನಾದ ವ್ಯಕ್ತಿಯೂ ಕೂಡಾ ಒಂದಷ್ಟು ಉಳಿತಾಯವನ್ನು ಮಾಡ್ಬೇಕು ಆಕಸ್ಮಿಕವಾಗಿ ಜೀವಕ್ಕೆ ಅಪಾಯ ಆದಾಗ ಆ ಕುಟುಂಬಕ್ಕೆ ಆಧಾರವಾಗ್ಬೇಕು ಎನ್ನುವ ದೃಷ್ಟಿಯಲ್ಲಿ ಪೂಜ್ಯರು ಮಾಡಿದ ಈ ಕಾರ್ಯಕ್ರಮದಿಂದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಒಂದಷ್ಟು ಮಂದಿ ಪಾಲಿಸಿ ಮಾಡಿ ಆ ಗ್ರಾಮ ವಿಮಾ ಗ್ರಾಮವಾದಾಗ ಭಾರತೀಯ ಜೀವ ವಿಮಾ ಸಂಸ್ಥೆಯಿಂದ ಅವಶ್ಯಕತೆ ಇರುವ ಸ್ಥಳೀಯ ಶಾಲೆಯೊಂದನ್ನು ಗುರುತಿಸಿ ಆ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಿದ್ದು ಇದರಿಂದ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಸಿಕ್ಕಂತಾಗಿದೆ ಎಂದು ಶುಭ ಹಾರೈಸಿದರು.
ಎಲ್ ಐ ಸಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಪ್ರಭಂಧಕರಾದ ರವೀಂದ್ರರವರು ಮಾತನಾಡುತ್ತಾ ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ರಾಜ್ಯದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ದುರ್ಬಲ ವರ್ಗದ ಸದಸ್ಯರಿಗೆ ಅರ್ಥಿಕ ಶಿಸ್ತಿನ ಜೊತೆ ಸ್ವಾವಲಂಬಿ ಬದುಕನ್ನು ಕಲಿಸಿಕೊಟ್ಟಿದೆ.
ಭಾರತೀಯ ಜೀವ ವಿಮಾ ನಿಗಮ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವೆರಡು ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಗಳು. ಈ ಸಂಸ್ಥೆಯಿಂದ ಲಕ್ಷಾಂತರ ಮಂದಿ ಜೀವ ವಿಮೆಯನ್ನು ಮಾಡಿ ಅವರ ಸಂಕಷ್ಟದ ಸಂದರ್ಭದಲ್ಲಿ ಅವರಿಗೆ ನೆರವಾಗಿದೆ. ಇವತ್ತು ಎರಡು ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾಲೆಗೆ ನೀಡುತ್ತಿರುವ ಈ ಘಟಕ ಮಕ್ಕಳಿಗೆ ಉಪಯೋಗವಾಗಲಿ ಮಕ್ಕಳ ಆರೋಗ್ಯ ವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶಾಂತಮ್ಮ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಜಿಲ್ಲಾ ಎಂ ಐ ಎಸ್ ಯೋಜನಾಧಿಕಾರಿ ಗಿರೀಶ್ ವಿಮಾ ಸಮನ್ವಯಾಧಿಕಾರಿ ಕಿಟ್ಟಿ ನೀರು ಉಳಿಸಿ ಕಾರ್ಯಕ್ರಮದ ಸಮನ್ವಯಾಧಿಕಾರಿ ಮಧು ಹಾಗೂ ವಲಯ ಮೇಲ್ವಿಚಾರಕರಾದ ಆನಂದ್ ಶಾಲಾ ಶಿಕ್ಷಕರು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.