ಕುಂದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯನ್ನು ಕೇವಲ ಸಾಲ ನೀಡುವ ಅಥವಾ ಲಾಭ ಮಾಡುವ ಉದ್ದೇಶದಿಂದ ಪ್ರಾರಂಭಿಸಿದ್ದಲ್ಲ. ಸಮುದಾಯದ ಜನರ ಸರ್ವಾಂಗೀಣ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಪರಿಚಯಿಸಲು ಮತ್ತು ಆ ಮೂಲಕ ಗ್ರಾಮೀಣ ಜನರನ್ನು ಸ್ವಾವಲಂಬಿಗಳು ಮತ್ತು ಸಶಕ್ತರಾಗಿಸುವ ಉದ್ದೇಶದಿಂದ ಯೋಜನೆ ರೂಪುಗೊಂಡಿದೆ. ಈ ಎಲ್ಲಾ ಅನುಷ್ಠಾನಗಳಿಗೆ ಸಾಲದ ಬೆಂಬಲವೂ ಅಗತ್ಯವಿರುವುದರಿಂದ ಸಾಲ ಯೋಜನೆ ಪರಿಚಯಿಸಲಾಗಿದೆ. ಆದರೆ, ಕ್ಷೇತ್ರದ ವತಿಯಿಂದ ಸಾಲ ನೀಡುವುದಿಲ್ಲ. ಬ್ಯಾಂಕ್ ಒದಗಿಸುವ ಸಾಲಗಳಿಗೆ ಕ್ಷೇತ್ರದ ದೃಢೀಕರಣವಿರುತ್ತದಷ್ಟೇ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರದೀಪ್ ಶೆಟ್ಟಿ ಹೇಳಿದರು.
ಯೋಜನೆಯ ಬಿ ಸಿ ಟ್ರಸ್ಟ್ ಅಂತರ್ಗತ ಕೋಟೇಶ್ವರ ವಲಯ ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಕೋಟೇಶ್ವರದಲ್ಲಿ ನಡೆದ ವಲಯದ ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಯ ಪ್ರಗತಿ ಮತ್ತು ಗ್ರಾಮೀಣ ಜನರ ಆಶಯಗಳನ್ನು ಪರಿಗಣಿಸಿ ಇದೀಗ ಕೇಂದ್ರ ಸರ್ಕಾರವು ರಾಜ್ಯದಾದ್ಯಂತ ಆಧಾರ್, ಇ-ಶ್ರಮ್ ಇತ್ಯಾದಿ ಕಾರ್ಡುಗಳನ್ನು ನೀಡುವ ಸಿ ಎಸ್ ಸಿ ಸೇವಾ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ. ಇದರಿಂದ ಯೋಜನೆಯ ಪರಿಣಾಮಕಾರಿಯಾದ ಅನುಷ್ಠಾನಕ್ಕೆ ಬಲ ಬಂದಿದೆ. ಮಹಿಳಾ ಸಬಲೀಕರಣದ ಜ್ಞಾನವಿಕಾಸ ಕಾರ್ಯಕ್ರಮಗಳು, ಅನಾಥರು, ಅಶಕ್ತರಿಗೆ ಚೈತನ್ಯ ತುಂಬುವ ಕಾರ್ಯಗಳು ವೇಗ ಪಡೆದಿವೆ. ತಾಲೂಕುಗಳೂ ಜಾಸ್ತಿಯಾಗಿದ್ದರಿಂದ ಯೋಜನೆಯ ಎರಡನೇ ಕೇಂದ್ರವನ್ನು ಕೋಟೇಶ್ವರದಲ್ಲೇ ತೆರೆಯಲಾಗಿದೆ ಎಂಬ ವಿವರಗಳನ್ನವರು ನೀಡಿದರು.
ವಲಯದ ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಒಟ್ಟು ಒಂಭತ್ತು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ದಾಖಲೆಗಳ ಹಸ್ತಾಂತರದ ಮೂಲಕ ನೆರವೇರಿಸಲಾಯಿತು. ಸಭೆಯ ಮುನ್ನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ನಡೆಸಲಾಯಿತು.
ಕುಂದಾಪುರದ ಆಪ್ತ ಸಮಾಲೋಚಕಿ ಸ್ವರ್ಣ ಧಾರ್ಮಿಕ ಉಪನ್ಯಾಸ ನೀಡಿ, ಶ್ರೀ ಸತ್ಯನಾರಾಯಣ ಪೂಜಾ ಮಹತ್ವವನ್ನು ವಿಷದಪಡಿಸುತ್ತಾ ನಮ್ಮ ವೇದ, ಉಪನಿಷತ್ತು, ಪುರಾಣಗಳ ಒಳ್ಳೆಯ ಅಂಶಗಳನ್ನು ನಾವಿಂದು ಅನುಸರಿಸದೆ, ಕಿರಿಯ ಜನಾಂಗಕ್ಕೆ ವರ್ಗಾಯಿಸುವಲ್ಲಿ ಸೋತು, ಕಾಲ ಕೆಟ್ಟಿದೆ ಎಂದು ಹಲುಬುತ್ತೇವೆ. ಆದರೆ ವಾಸ್ತವವಾಗಿ ಕಾಲ ಕೆಟ್ಟಿಲ್ಲ, ಮನುಷ್ಯನ ಸ್ವಾರ್ಥದಿಂದ ಬುದ್ಧಿ ಕೆಟ್ಟಿದೆ ಎಂದರು.
ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಗೋಪಾಡಿ ಗ್ರಾ. ಪಂ. ಅಧ್ಯಕ್ಷೆ ಸರೋಜಾ, ದೊಡ್ಡೋಣಿ ನೀರೇಶ್ವಾಲ್ಯ ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕೆ. ಸುರೇಶ್, ಕೋಟೇಶ್ವರ ವಲಯ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಕುಂದಾಪುರ ಕೇಂದ್ರ ಸಮಿತಿ ಅಧ್ಯಕ್ಷೆ ಶೋಭಾ ಚಂದ್ರ ಇವರುಗಳು ಮುಖ್ಯ ಅತಿಥಿಗಳಾಗಿದ್ದು ಶುಭ ಹಾರೈಸಿದರು.
ಕೋಟೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಾಗಿಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟಗಳ ಪದಾಧಿಕಾರಿಗಳು, ವಲಯ ಮೇಲ್ವಿಚಾರಕ ನಾಗರಾಜ್ ಎಚ್., ಸೇವಾ ಪ್ರತಿನಿಧಿಗಳು, ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಸುಶೀಲಾ ಶೇಟ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಜಯಂತಿ ಶೆಟ್ಟಿ ವರದಿ ವಾಚಿಸಿದರು. ಪ್ರಸನ್ನ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ಸೇವಾ ಪ್ರತಿನಿಧಿ ಸುಶೀಲಾ ಕೆ. ಎಸ್. ವಂದಿಸಿದರು.