ಶ್ರೀನಿವಾಸಪುರ 1 : ಕ್ಷೇತ್ರದ ಅಭಿವೃದ್ದಿಯೇ ನನ್ನ ಮೂಲ ಮಂತ್ರ, ನನಗೆ ಮತ ಹಾಕಿದ ಜನತೆಯ ಅಭಿವೃದ್ದಿಯೇ ನನ್ನ ಗುರಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಮಂಗಳವಾರ ಪಟ್ಟಣ ಹಾಗು ತಾಲೂಕಿಗೆ ಸಂಬಂದಿಸಿದಂತೆ ಕುಂದುಕೊರತೆ ಸಭೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದರು.
ಜನತೆ ನನ್ನ ಮೇಲಿನ ಪ್ರೀತಿ ವಿಶ್ವಾಸಕ್ಕೆ ಮತ ಹಾಕಿ ನನ್ನನ್ನು ಗೆಲ್ಲಿಸಿಕೊಟ್ಟಿದ್ದಾರೆ ಅದಕ್ಕಾಗಿ ಇಂದು ನಾನು ಅವರ ಋಣ ತೀರಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ಬಡವರಿಗೆ ಮನೆಗಳ ನಿರ್ಮಾಣ, ಶುದ್ದ ಕುಡಿಯುವ ನೀರಿನ ಸೌಲಭ್ಯ, ಸುಸಜ್ಜಿತ ರಸ್ತೆಗಳು ಸೇರಿದಂತೆ ಸಾರ್ವಜನಿಕರ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತಿದ್ದೇನೆ ಎಂದರು.
ಕುಂದು ಕೊರತೆ ಸಭೆಯಲ್ಲಿ ಸುಮಾರು 100 ಅರ್ಜಿಗಳಷ್ಟು ಶಾಸಕರು ಪರಿಶೀಲಿಸಿ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅರ್ಜಿದಾರರ ಸಮಸ್ಯೆಗಳನ್ನು ಪರಿಹಾರ ಮಾಡಿಕೊಡುವಂತೆ ಸೂಚಿಸಿದರು. ಇತ್ತೀಚಿಗೆ ಅರಣ್ಯ ಇಲಾಖೆಯು ಒತ್ತುವರಿ ಮಾಡಿರುವ ಭೂಮಿಗೆ ಸಂಬಂದಿಸಿದಂತೆ ಹಾಗೂ ಕಂದಾಯ ಇಲಾಖೆಗೆ ಹೆಚ್ಚು ಅರ್ಜಿಗಳು ಬಂದಿದ್ದವು. ಹಾಗೂ ಪಟ್ಟಣದಲ್ಲಿನ ಉರ್ದು ಸರ್ಕಾರಿ ಶಾಲೆಗಳಿಗೆ ಬೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ಹಾಗೂ ಶಾಲೆಗಳ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು.
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ, ಎಪಿಎಂಸಿ ಮಾಜಿ ಸದಸ್ಯ ನಕ್ಕಲಗಡ್ಡ ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹಾಗೂ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.