ಕೋಲಾರ : ಕೊನೆಗೂ ಜಿಲ್ಲೆಯ ಸ್ಪರ್ಧಾಕಾಂಕ್ಷೆಗಳಿಗೆ ಒಂದು ಸಂತೋಷದ ಸುದ್ದಿ. ಕೋಲಾರ ಜಿಲ್ಲೆಯಲ್ಲಿ ಐಎಎಸ್, ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಸಲುವಾಗಿ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಲಕ್ಷಗಟ್ಟಲೆ ಹಣವನ್ನು ಸುರಿದು ಬೆಂಗಳೂರಿನ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಸ್ಪರ್ಧಾಕಾಂಕ್ಷೆಗಳಿಗೆ ಒಂದು ಉತ್ತಮ ಗುಣಮಟ್ಟದ ಮತ್ತು ಉಚಿತ ತರಬೇತಿಯನ್ನು ಜಿಲ್ಲೆಯಲ್ಲಿ ಏಕೆ ಆರಂಭಿಸಬಾರದು ಎಂಬ ಆಲೋಚನೆಯಿಂದ ಬಂದ ಫಲಪ್ರದವೇ ವಿಷನ್ ಕೋಲಾರ. ಈ ಯೋಜನೆ ಅಡಿಯಲ್ಲಿ ಜಿಲ್ಲೆಯ ಪ್ರತಿಭಾನ್ವಿತ ಆರ್ಥಿಕವಾಗಿ ಹಿಂದುಳಿದವರ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿಯೇ ರಾಜ್ಯದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ದಿವಂಗತ ಡಿ. ದೇವರಾಜ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗಿದ್ದು, ದೇವರಾಜ್ ಅರಸು ಜನ್ಮದಿನ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಕೋಲಾರ ಶಾಸಕರಾದಂತಹ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಗಳಾದ ಅನಿಲ್ ಕುಮಾರ್ ರವರಿಂದ ಈ ಕೇಂದ್ರವು ಉದ್ಘಾಟನೆಗೊಂಡಿದ್ದು ಇಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ರವರು ಆಗಮಿಸಿ ಪ್ರಾರಂಭಿಸುವ ಸಿದ್ಧತೆಯ ಬಗ್ಗೆ ಪರಿಶೀಲಿಸಿದರು.
ಜಿಲ್ಲಾಧಿಕಾರಿಯವರ ಕನಸಿನ ಕೂಸಾದ ಈ ಯೋಜನೆಯ ಅಕ್ಟೋಬರ್ ಮಾಹೆಯಲ್ಲಿ ಪ್ರಾರಂಭಗೊಳ್ಳಲಿದೆ.
ಏನಿದು ಯೋಜನೆ?
ಕೋಲಾರ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಉಚಿತವಾಗಿ ಆರಂಭಿಸುವುದು. ಜಿಲ್ಲೆಯ ಪ್ರತಿಭಾನ್ವಿತ 70 ವಿದ್ಯಾರ್ಥಿಗಳಿಗೆ ಅವಕಾಶ.
ಆಯ್ಕೆ ಹೇಗೆ??
ಜಿಲ್ಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ, ರೋಸ್ಟರ್ ಮತ್ತು ಮೆರಿಟ್ ಪದ್ಧತಿ ಅನ್ವಯ ಪ್ರವೇಶ ಪರೀಕ್ಷೆಯನ್ನು ನಡೆಸಿ 70 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು.
ತರಭೇತಿ ಹೇಗೆ??
ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ದೇವರಾಜ್ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಅಧ್ಯಯನ ಕೇಂದ್ರವನ್ನು ಬಳಸಿಕೊಳ್ಳುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾದ ಪುಸ್ತಕಗಳನ್ನು ಒಳಗೊಂಡಿರುವ ಗ್ರಂಥಾಲಯ ಬಳಸಿಕೊಳ್ಳುವುದು, ಹಾಗೂ ಪ್ರತಿನಿತ್ಯ ಜಿಲ್ಲೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಕಂಡು ಇರುವಂತಹ ಅಧಿಕಾರಿ ವರ್ಗದವರಾದ ಜಿಲ್ಲಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿಗಳು ತಹಸಿಲ್ದಾರ್ಗಳು, ಜಿಲ್ಲಾ ಮಟ್ಟದ ಮತ್ತು ವಿವಿಧ ತಾಲೂಕು ಮಟ್ಟದ ಅಧಿಕಾರಿಗಳಿಂದ, ಉಪನ್ಯಾಸಕರು ಮತ್ತು ಪ್ರಾಧ್ಯಾಪಕರುಗಳಿಂದ ದಿನನಿತ್ಯ ಮಾರ್ಗದರ್ಶನ ಮತ್ತು ತರಗತಿಗಳನ್ನು ನಡೆಸುವುದು.
ಇದಲ್ಲದೆ ರಾಜ್ಯದ ಹೆಸರಾಂತ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸಾಮಾನ್ಯ ಅಧ್ಯಯನ, ಇತಿಹಾಸ ಭೂಗೋಳ, ಮೆಂಟಲ್ ಎಬಿಲಿಟಿ, ತಾರ್ಕಿಕ ಸಾಮರ್ಥ್ಯ, ಪ್ರಚಲಿತ ಘಟನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಮತ್ತು ಕಾರ್ಯಕ್ರಮಗಳು ಇಂತಹ ಮತ್ತು ಅನೇಕ ವಿಷಯಗಳಿಗೆ ತರಗತಿಗಳನ್ನು ನಡೆಸುವುದು.
“ವಿಷನ್ ಕೋಲಾರ ಎಂಬುದು ಜಿಲ್ಲೆಯ ಒಂದು ವಿನೂತನ ಪ್ರಯತ್ನವಾಗಿದ್ದು, ಜಿಲ್ಲೆಯ ಸ್ಪರ್ಧಾಕಾಂಕ್ಷೆಗಳಿಗೆ ಅತ್ಯದ್ಭುತ ಮತ್ತು ಪರಿಣಾಮಕಾರಿ ಉಪಕ್ರಮವಾಗಲಿದೆ. ಇದರಿಂದಾಗಿ ಜಿಲ್ಲೆಯ ಸ್ಪರ್ಧಾ ಕಾಂಶಿ ವಿದ್ಯಾರ್ಥಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೇವೆಗಳಲ್ಲಿ ಹೆಚ್ಚೆಚ್ಚು ತೆರ್ಗಡೆಗೊಂಡು ಜಿಲ್ಲೆಯ ಕೀರ್ತಿಪತಾಕೆ ಹಾರಿಸಲಿದ್ದಾರೆ ಎಂಬ ಆಶಾಭಾವನೆಯನ್ನು ಹೊಂದಿದ್ದೇವೆ ۲۲
ಅಕ್ರಂಪಾಷ ಜಿಲ್ಲಾಧಿಕಾರಿ
” ದೇವರಾಜ್ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವು ವರ್ಷದಲ್ಲಿ ನಿರಂತರವಾಗಿ ನಡೆಯಲಿದ್ದು ಮೂರು ತಿಂಗಳಿಗೆ 70 ವಿದ್ಯಾರ್ಥಿಗಳ ಒಂದು ಬ್ಯಾಟ್ನಂತೆ ವರ್ಷದಲ್ಲಿ ಮೂರು ಬ್ಯಾಟ್ಗಳನ್ನು ತರಬೇತಿಗಾಗಿ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯದ ಶ್ರೀ ಮುರಳಿರವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯದ ಶ್ರೀಮತಿ ಗೀತಾ ರವರು ಮಾತನಾಡಿ ದೇವರಾಜ್ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವು ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನವಾಗಿರಲಿದ್ದು ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಬಳಸಿಕೊಳ್ಳಲು ಕೋರಿದರು.