ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕುಂದಾಪುರ : ಪಾರ್ಕಿಂಗ್ ಸಮಸ್ಯೆಯಿಂದ ಬಳಲುತ್ತಿರುವ ನಗರದ ನಟ್ಟ ನಡುವೆ ಖಾಸಗಿ ಸಾರಿಗೆ ಸಂಸ್ಥೆಯೊಂದು ಸಾರ್ವಜನಿಕ ಸ್ಥಳದಲ್ಲಿ ತಳ್ಳುಗಾಡಿ,ಬ್ರಹತ್ ಗಾತ್ರದ ಟಯರ್ ಗಳನ್ನು ಇರಿಸಿ ಸಾರ್ವಜನಿಕ ಪಾರ್ಕಿಂಗ್ ಗೆ ದಿಗ್ಭಂದನ ಹೇರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.ಅತ್ಯಂತ ಜನ ನಿಬಿಡ ಪ್ರದೇಶವಾಗಿರುವ ಹೊಸ ಬಸ್ ನಿಲ್ದಾಣದ ಸಮೀಪ ಮುಖ್ಯ ರಸ್ತೆಯಲ್ಲಿ ಕೆನರಾಗೂಡ್ಸ್ ಹೆಸರಿನ ಖಾಸಗಿ ಸಾರಿಗೆ ಸಂಸ್ಥೆಗೆ ಸೇರಿದ ಕಛೇರಿಯೊಂದಿದೆ. ಕಚೇರಿಯ ಮುಂಭಾಗ ಪುರಸಭೆ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾದ ವಿಶಾಲ ಸ್ಥಳವಿದೆ. ಆದರೆ ಅದು ತಮ್ಮ ಸಂಸ್ಥೆಗೆ ಸೇರಿದ ಸಾರಿಗೆ ವಾಹನಗಳನ್ನು ಮಾತ್ರ ಪಾರ್ಕಿಂಗ್ ಮಾಡುವ ತಮ್ಮದೇ ಖಾಸಗಿ ಜಾಗ ಎಂದು ಜಿದ್ದಿಗೆ ಬಿದ್ದಂತಿರುವ ಮಾಲೀಕರು ಸುಖಾ ಸುಮ್ಮನೆ ಟಯರ್,ತಳ್ಳುಗಾಡಿ ಸಹಿತ ತಮಗೆ ಸೇರಿದ ಕಾರೊಂದನ್ನು ಇರಿಸಿ ಸಾರ್ವಜನಿಕ ವಾಹನಗಳ ಪಾರ್ಕಿಂಗ್ ಗೆ ಬೆದರಿಕೆ ಹಾಕುವಂತಹ ಘಟನೆಗಳು ದಿನಂಪ್ರತಿ ಜರಗುತ್ತಿದೆ.
ಹೇಳಿಕೇಳಿ ಸಂಚಾರಿ ಠಾಣೆಗೆ ಹತ್ತಿರವಿರುವ ಈ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಠಾಣೆಯ ಜೀಪುಗಳು, ಸಂಚಾರಿ ಪೊಲೀಸರು ಕಮ್ಮಿಯೆಂದರೂ ದಿನಕ್ಕೆಹತ್ತು ಹಲವು ಬಾರಿ ರೌಂಡ್ ನಲ್ಲಿರುತ್ತಾರೆ. ಆದರೆ ಕಣ್ಣಿಗೆ ರಾಚುವಂತೆ,ಅಕ್ರಮವಾಗಿ ದಿಗ್ಭಂದಿಸಲ್ಪಟ್ಟ ಈ ಸಾರ್ವಜನಿಕ ಸ್ಥಳ ಅವರ ದ್ರಷ್ಟಿಗೆ ಗೋಚರಿಸದಂತೆ ಮಾಡಿರುವ ಅಗೋಚರ ಶಕ್ತಿಯ ಬಗ್ಗೆಯೇ ಸಾರ್ವಜನಿಕ ಚರ್ಚೆಯಾಗುತ್ತಿದೆ.
ರಸ್ತೆಯ ಅಂಚಿನಲ್ಲಿ ಪಾರ್ಕಿಂಗ್ ಮಾಡಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಅಪರಾಧವೆಂಬಂತೆ ವಾಹನಗಳಿಗೆ ಕೊಳ ಜಡಿದು ಬೇಕಾಬಿಟ್ಟಿ ದಂಡ ವಿಧಿಸುವ ಟ್ರಾಫಿಕ್ ಗಳು ಸಾರ್ವಜನಿಕ ಸ್ಥಳವನ್ನು ಆಕ್ರಮಿಸಿರುವ ಸಾರಿಗೆ ಸಂಸ್ಥೆಯ ಬಗ್ಗೆ ಸೊಲ್ಲೆತ್ತದಿರುವುದು ವಿಚಿತ್ರವಾಗಿದೆ. ಸಾರಿಗೆಯ ವಾಹನಗಳು ಹಗಲುಹೊತ್ತಿನಲ್ಲಿ ನಗರದೊಳಗೆ ಪ್ರವೇಶಿಸಿ ಲೋಡ್ ಆನ್ ಲೋಡ್ ಮಾಡುವಂತಿಲ್ಲ, ಹಾಗಂತ ರೂಲ್ಸ್ ಹೇಳುತ್ತಿದೆ, ಆದರೆ ಕೆನರಾಗೂಡ್ಸ್ ಮಟ್ಟಿಗೆ ತಮ್ಮ ಸಾರಿಗೆ ವಾಹನಗಳು ಹಗಲುಹೊತ್ತಿನಲ್ಲಿ ಯಾವಾಗಲೂ ಬರಲಿ ತಮಗೆ ಯಾವುದೇ ಕಾನೂನು ಬಾಧಿಸದು ಎನ್ನುವಷ್ಟರ ಮಟ್ಟಿಗೆ ಸಾರ್ವಜನಿಕ ಸ್ಥಳಕ್ಕೆ ನಿರ್ಬಂಧ ಹೇರಿದ್ದಾರೆ.ಈಗಾಗಲೇ ಇಲಾಖೆಗಳ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಈ ಆಕ್ರಮ ಪ್ರಸ್ತಾವಿಸಲ್ಪಟ್ಟು ಇಲಾಖೆಯವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ, ಇಷ್ಟರ ತನಕ ತಳ್ಳುಗಾಡಿ ಟಯರ್ ಗಳು ಮಾತ್ರ ಯಥಾಸ್ಥಿತಿಯಲ್ಲಿದ್ದು ವ್ಯವಸ್ಥೆ ಯನ್ನು ಅಣಕಿಸುತ್ತವೆ.