

ಕುಂದಾಪುರ : ಇಂದು ಬುಧವಾರ ( ಏ 16)ನಡೆದ ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆ ಗಾಗಿ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೇಟ್ ನಲ್ಲಿ ಸೂಚಿಸಲಾದ ಕೋಟೇಶ್ವರದ ಸಿ ಇ ಟಿ ಪರೀಕ್ಷಾ ಕೇಂದ್ರವನ್ನು ಹುಡುಕುವುದರಲ್ಲಿ ಸುಸ್ತು ಹೊಡೆದು ಹೋಗಿದ್ದಾರೆ.
ಇಲಾಖೆಯಿಂದ ವಿದ್ಯಾರ್ಥಿ ಗಳಿಗೆ ನೀಡಲಾಗಿದ್ದ ಹಾಲ್ ಟಿಕೇಟ್ ಗಳಲ್ಲಿ ಕೋಟೇಶ್ವರದ ಪರೀಕ್ಷಾ ಕೇಂದ್ರದ ವಿಳಾಸವು ಗವರ್ನಮೆಂಟ್ ಪಿ ಯು ಕಾಲೇಜು, ಏನ್ ಎಚ್ 66, ಕೋಟೇಶ್ವರ.ಎಂದು ನಮೂದಿಸಲಾಗಿತ್ತು. ಆದರೆ ಇಡೀ ಕೋಟೇಶ್ವರ ಜಾಲಾಡಿದರೂ ಅಂತಹ ಹೆಸರಿನ ಯಾವುದೇ ಪರೀಕ್ಷಾ ಕೇಂದ್ರವು ಪತ್ತೆಯಾಗದೆ ವಿದ್ಯಾರ್ಥಿಗಳು ಅಕ್ಷರಶ: ಪಡಿಪಾಟಲು ಪಡುವಂತಾಯಿತು. ಬಹುತೇಕ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಕೋಟೇಶ್ವರದ ಕಾಳಾವರ ವರದರಾಜ್ ಶೆಟ್ಟಿ ಪದವಿ ಕಾಲೇಜಿಗೆ ಹೋಗಿ ನಿರಾಶ ರಾಗಿ ಹಿಂತಿರುಗಬೇಕಾಯಿತು. ಕಟ್ಟ ಕಡೆಗೆ ಗೂಗಲ್ ಅನ್ನು ಜಾಲಾಡಿದರೂ ಅಂತಹ ಹೆಸರಿನ ಕೇಂದ್ರವು ಲಭ್ಯವಾಗದೇ ವಿದ್ಯಾರ್ಥಿಗಳು ಇನ್ನಷ್ಟು ಆತಂಕ ಪಡುವಂತಾಯಿತು. ಈ ಸಂದರ್ಭ ವಿದ್ಯಾರ್ಥಿಗಳ ನೆರವಿಗೆ ಸ್ಥಳೀಯರು ಬಂದರಾದರೂ ಹಾಲ್ ಟಿಕೇಟ್ ನಲ್ಲಿದ್ದ ವಿಳಾಸವನ್ನು ನೋಡಿ ಅವರು ಸಹಾ ಅನುಮಾನ ಪಡುವಂತಾಗಿತ್ತು. ಅಸಲಿಗೆ ವಿದ್ಯಾರ್ಥಿಗಳಿಗೆ ಸೂಚಿಸಲಾದ ರಾಷ್ಟ್ರೀಯ ಹೆದ್ದಾರಿಯ ಸಮೀಪವೂ ಸೇರಿದಂತೆ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಸುತ್ತಮುತ್ತಲಿನ ನಾಮಫಲಕಗಳ ತುಂಬಾ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಬರೆಯಲ್ಪಟ್ಟಿದ್ದೇ ಈ ಎಲ್ಲಾ ಅವಾಂತರ ಗಳಿಗೆ ಕಾರಣವಾಗಿತ್ತು. ಕಡೇ ಪಕ್ಷ ಕೋಟೇಶ್ವರ ಸಿ ಇ ಟಿ ಪರೀಕ್ಷಾ ಕೇಂದ್ರವನ್ನು ಸೂಚಿಸಿ ದ್ವಾರಗಳಲ್ಲಿ ಒಂದೆರಡು ಫ್ಲೆಕ್ಸ್ ಗಳನ್ನು ತೂಗುಹಾಕಿದ್ದಾರಾದರೂ ವಿದ್ಯಾರ್ಥಿಗಳು ಪರದಾಡುವುದು ತಪ್ಪುತ್ತಿತ್ತೆಂದು ವಿದ್ಯಾರ್ಥಿಗಳ ಪೋಷಕರು, ಸ್ಥಳೀಯರು ಇಲಾಖೆಯ ಅಸಡ್ಡೆಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.



