ರೇಷ್ಮೆ ಇಲಾಖೆ ವಿಲೀನದ ಸರ್ಕಾರದ ಅವೈಜ್ಞಾನಿಕ ನಿರ್ಧಾರ ಕೈಬಿಡಲು ಆಗ್ರಹ
ರೈತರ ಬದುಕಿನ ಜತೆ ಚೆಲ್ಲಾಟಬೇಡ,ಇಲಾಖೆ ಬಲಪಡಿಸಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಬಯಲುಸೀಮೆಯ ರೈತರ ಜೀವನಾಡಿಯಾಗಿರುವ ರೇಷ್ಮೆಕೃಷಿಯನ್ನು ಇತರೆ ಇಲಾಖೆಗಳೊಂದಿಗೆ ವಿಲೀನ ಮಾಡುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದ್ದು, ಅನ್ನದಾತನ ಬದುಕಿನೊಂದಿಗೆ ಚೆಲ್ಲಾಟವಾಡುವ ಪ್ರಯತ್ನ ಕೈಬಿಟ್ಟು ಇಲಾಖೆಯ ಬಲವರ್ಧನೆಗೆ ಕ್ರಮವಹಿಸುವಂತೆ ಸರ್ಕಾರವನ್ನು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರೇಷ್ಮೆ ಇಲಾಖೆಯಲ್ಲಿನ 2346 ಹುದ್ದೆಗಳ ರದ್ದತಿ ಜತೆಗೆ ಇಲಾಖೆಯನ್ನು ಮತ್ತೊಂದು ಇಲಾಖೆ ಜತೆ ವಿಲೀನ ಮಾಡುವ ನಿರ್ಧಾರ ಕೈಬಿಡಿ ಎಂದು ಆಗ್ರಹಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಕರೆಯ ಸಂದರ್ಭದಲ್ಲಿ ಲಕ್ಷಾಂತರ ಮಂದಿಗೆ ಸ್ವಾವಲಂಬನೆಯ ಬದುಕು ನೀಡಿರುವ ಉದ್ಯಮವನ್ನು ವಿನಾಶದೆಡೆಗೆ ತರುತ್ತಿರುವ ರಾಜ್ಯ ಸರ್ಕಾರದ ಪ್ರಯತ್ನ ಖಂಡನೀಯ ಎಂದಿದ್ದಾರೆ.
ಅತಿವೃಷ್ಟಿ,ಅನಾವೃಷ್ಟಿಯಿಂದಾಗಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದಾಗ ಕಾಪಾಡಿದ್ದೇ ರೇಷ್ಮೆ ಮತ್ತು ಹಾಲು ಎಂಬುದನ್ನು ಸರ್ಕಾರ ಮರೆತಂತಿದೆ, ಬಯಲುಸೀಮೆಯ ಅನ್ನದಾತರನ್ನು ಆತ್ಮಹತ್ಯೆಯತ್ತ ಆಲೋಚನೆಯೂ ಮಾಡದಂತೆ ಆತ್ಮಸ್ಥೈರ್ಯ ತುಂಬಿದ ರೇಷ್ಮೆ ಉದ್ಯಮವನ್ನು ಉಳಿಸಿ ಅಭಿವೃದ್ದಿಪಡಿಸಬೇಕಾದ ಸಂದರ್ಭದಲ್ಲಿ ಸರ್ಕಾರ ಕತ್ತುಹಿಚುಕುವ ಕೃತ್ಯಕ್ಕೆ ಕೈಹಾಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ಅರಸರ ಕಾಲದಲ್ಲಿಯೇ ಆರಂಭವಾಗಿ 108 ವರ್ಷಗಳ ಇತಿಹಾಸ ಹೊಂದಿರುವ ಇಲಾಖೆ ಮುಚ್ಚುವ ಹುನ್ನಾರ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಬಯಲು ಸೀಮೆಯ ರೈತರ ಬದುಕು ಕಷ್ಟಕ್ಕೆ ಸಿಲುಕಲಿದೆ, ಚೀನಾ ರೇಷ್ಮೆ ಪೈಪೊಟಿಗೆ ಅನುಗುಣವಾಗಿ ಇದೀಗ ರೈತರು ಬೈವೋಲ್ಟೈನ್ ರೇಷ್ಮೆ ಉತ್ಪಾದನೆಗೆ ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಪ್ರೋತ್ಸಾಹ ನೀಡುವ ಬದಲಿಗೆ ಇಲಾಖೆ ಮುಚ್ಚುವ ಪ್ರಯತ್ನ ಸರಿಯೇ ಎಂದು ಪ್ರಶ್ನಿಸಿದ್ದಾರೆ.

ದೇಶದ ರೇಷ್ಮೆಯಲ್ಲಿ ಕೋಲಾರ ಸಿಂಹಪಾಲು


ದೇಶದಲ್ಲೇ ಅತಿಹೆಚ್ಚು ರೇಷ್ಮೆ ಉತ್ಪಾದಿಸುವ ಮೂಲಕ ಕರ್ನಾಟಕ ಪ್ರಥಮ ಸ್ಥಾನ ಗಳಿಸಿದ್ದರೆ, ರಾಜ್ಯದಲ್ಲಿ ಕೋಲಾರ ಜಿಲ್ಲೆ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ರೇಷ್ಮೆಕೃಷಿಯನ್ನು ರಾಜ್ಯದ 1.35 ಲಕ್ಷ ಕುಟುಂಬಗಳು ಹಾಗೂ 7059 ನೂಲು ಬಿಚ್ಚಾಣಿಕೆದಾರರ ಕುಟುಂಬಗಳು ನಂಬಿಕೊಂಡಿವೆ ಎಂದು ತಿಳಿಸಿದ್ದಾರೆ.
2346 ಹುದ್ದೆಗಳ ರದ್ದತಿ ಹಾಗೂ ಇಲಾಖೆ ವಿಲೀನಕ್ಕೆ ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿರುವುದು ಆಘಾತಕಾರಿ ವಿಷಯವಾಗಿದ್ದು, ಅಧಿಕಾರಿಗಳ ಮಾತು ಕೇಳಿ ಸರ್ಕಾರ ಈ ಕೆಲಸಕ್ಕೆ ಮುಂದಾದರೆ ರೈತರ ತೀವ್ರ ವಿರೋಧ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.
ರಾಜ್ಯದ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೇಸಾಯ ಮಾಡಲಾಗುತ್ತಿದೆ, ವಾರ್ಷಿಕ 12 ಕೋಟಿ ರೇಷ್ಮೆ ಮೊಟ್ಟೆಗಳನ್ನು ಉತ್ಪಾದಿಸಿ 12 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಗೂಡು ಹಾಗೂ 8 ಸಾವಿರ ಮೆಟ್ರಿಕ್ ಟನ್ ಕಚ್ಚಾರೇಷ್ಮೆ ಉತ್ಪಾದಿಸಲಾಗುತ್ತಿದ್ದು, ಇಷ್ಟೊಂದು ವಿಸ್ತಾರವಾಗಿ ಹರಡಿರುವ ರೇಷ್ಮೆ ಉದ್ಯಮವನ್ನು ಉಳಿಸಿ ಬೆಳೆಸುವ ಮೂಲಕ ರೈತರಿಗೆ ನೆರವಾಗುವಂತೆ ಒತ್ತಾಯಿಸಿದ್ದಾರೆ.
ರೇಷ್ಮೆ ಮೊಟ್ಟೆ,ಚಾಕಿ ಹುಳು ನೀಡಿಕೆಯಲ್ಲಿ ಖಾಸಗಿಯವರ ದರ್ಬಾರು ಕಡಿಮೆ ಮಾಡಿ ಸರ್ಕಾರವೇ ಇಲಾಖೆ ಮೂಲಕ ರೈತರಿಗೆ ಅಗತ್ಯವಾದ ಪ್ರಮಾಣದಲ್ಲಿ ಮೊಟ್ಟೆ, ಚಾಕಿಹುಳು ನೀಡುವ ಕೆಲಸ ಮಾಡಬೇಕು, ಕೃಷಿ,ತೋಟಗಾರಿಕಾ ಉತ್ಪನ್ನಗಳಿಗೆ ಬೆಲೆ ಸಿಗದೇ ಕೈಕೊಟ್ಟ ಸಂದರ್ಭದಲ್ಲೂ ಬಯಲುಸೀಮೆಯ ಜಿಲ್ಲೆಯ ರೈತರನ್ನು ಕಾಪಾಡಿದ್ದು ರೇಷ್ಮೆ ಮತ್ತು ಹಾಲು ಎಂಬ ಸತ್ಯದ ಅರಿವು ಈ ಭಾಗದಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳಿಗೆ ಇರಬೇಕು, ಅನ್ನದಾತರ ಕೈಹಿಡಿದಿರುವ ಈ ಇಲಾಖೆಯನ್ನು ಉಳಿಸುವ ನಿಟ್ಟಿನಲ್ಲಿ ಶಾಸಕರು ಪಕ್ಷಬೇಧ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.
ರೇಷ್ಮೆ ಮಾರುಕಟ್ಟೆಗಳಲ್ಲಿ ವಾರ್ಷಿಕವಾಗಿ 2500 ರಿಂದ 3 ಸಾವಿರ ಕೋಟಿ ರೂಗಳ ಮೌಲ್ಯದ ರೇಷ್ಮೆ ಗೂಡು ವಹಿವಾಟು ನಡೆಸುತ್ತಿದ್ದು ಸರ್ಕಾರಕ್ಕೆ ಆದಾಯವೂ ಇದೆ, ವಿದೇಶಿ ವಿನಿಮಯಕ್ಕೂ ನೆರವಾಗಿದೆ, ವಿಶ್ವಬ್ಯಾಂಕಿನಿಂದ ನೂರಾರು ಕೋಟಿ ಸಾಲ ತಂದು ಇಲಾಖೆಯನ್ನು ಅಭಿವೃದ್ದಿಪಡಿಸಲಾಗಿದೆ.
ಈಗ ಏಕಾಏಕಿ ಮುಚ್ಚುವ ನಿರ್ಧಾರ ಸರಿಯಲ್ಲ ಎಂದ ಅವರು, ಈ ಹಿಂದೆ ರೇಷ್ಮೆ ಗೂಡು ಬೆಲೆ ಕಳೆದುಕೊಂಡಾಗ ಅಂದು ರೇಷ್ಮೆ ಸಚಿವರಾಗಿದ್ದ ವಿ.ಮುನಿಯಪ್ಪ ಅವರು ಪ್ರತಿ ಕೆಜಿಗೆ 10 ರೂ ಪ್ರೊತ್ಸಾಹಧನ ಕೊಟ್ಟು ಕೈಹಿಡಿದಿದ್ದನ್ನು ಸ್ಮರಿಸಿದ್ದಾರೆ.
2024-25ರ ವೇಳೆಗೆ 1.25 ಲಕ್ಷ ಹೆಕ್ಟೇರ್ ಹಿಪ್ಪುನೇರಳೆ ತೋಟ ನಿರ್ಮಾಣ ಹಾಗೂ 1.05 ಲಕ್ಷ ಮೆಟ್ರಿಕ್ ಟನ್ ರೇಷ್ಮೆ ಗೂಡು ಉತ್ಪಾದನೆ ಹಾಗೂ 0.15 ಲಕ್ಷ ಮೆಟ್ರಿಕ್ ಟನ್ ಕಚ್ಚಾರೇಷ್ಮೆ ಉತ್ಪಾದನೆ ಗುರಿ ಸಾಧನೆಗೆ ಇಲಾಖೆ ಉಳಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.