ಶ್ರೀ ನರಸಿಂಹರಾಜ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಅನುದಾನದಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆ ರೈತಸಂಘದಿಂದ ಆಗ್ರಹ

ಕೋಲಾರ; ಜು.15: ಶ್ರೀ ನರಸಿಂಹರಾಜ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 – 1ನೇ, 2ನೇ ಅಲೆಯ ಅನುದಾನದಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಿ ಆಸ್ಪತ್ರೆಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ರೈತಸಂಘದಿಂದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್‍ಕುಮಾರ್‍ಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಖಾಸಗಿ ಆಕ್ಸಿಜನ್, ಔಷಧಿ ಸಿಗದೆ ಕುಟುಂಬಸ್ಥರ ಕಣ್ಣ ಮುಂದೆಯೇ ಪ್ರಾಣ ಕಳೆದುಕೊಂಡು ಅವರನ್ನೇ ನಂಬಿದ್ದ ಕುಟುಂಬ ಬೀದಿಗೆ ಬೀಳುತ್ತಿದ್ದರೆ ಸಮರ್ಪಕವಾಗಿ ಸರ್ಕಾರದ ಅನುದಾನವನ್ನು ಅಕ್ರಮ ದಾಖಲೆಗಳನ್ನು ಕೋವಿಡ್ ಸೋಂಕಿತರ ಹೆಸರಿನಲ್ಲಿ 8 ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಿಕೊಂಡಿರುವುದು ಮಾಹಿತಿ ಹಕ್ಕಿನಡಿಯಲ್ಲಿ ಸಿಕ್ಕಿರುವ ದಾಖಲೆಯಲ್ಲಿ ಸಾಭೀತಾಗಿದೆ.
ಕೊರೊನಾ ಸೋಂಕಿತರ ಸಾವಿನಲ್ಲೂ ಹಣ ಮಾಡಿರುವ ಸಿಬ್ಬಂದಿ ಹಾಗೂ ವೈದ್ಯರಿಗೆ ನೊಂದ ಕುಟುಂಬಗಳ ಶಾಪ ತಟ್ಟದೇ ಇರುವುದಿಲ್ಲ. ಹಿಂದೆ ಆಸ್ಪತ್ರೆಯ ವೈದ್ಯರು ಕೆಲವು ಸಿಬ್ಬಂದಿಗಳು ಕೋಟಿಕೋಟಿ ಹಣವನ್ನು ತಮ್ಮ ಖಾತೆಗಳಿಗೆ ಜಮಾ ಮಾಡಿಕೊಂಡು ಅದಕ್ಕೆ ಯಾವುದೇ ದಾಖಲೆಯಿಲ್ಲದೆ ಡ್ರಾ ಮಾಡಿಕೊಂಡಿರುವ ಮೂಲಕ ಸರ್ಕಾರ ನಿಯಮವನ್ನು ಉಲ್ಲಂಘನೆ ಮಾಡಿರುವುದು ದಾಖಲೆಗಳಿವೆ ಎಂದು ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಅವ್ಯವಸ್ಥೆ ಹಾಗೂ ಆಸ್ಪತ್ರೆಯ ಅಕ್ರಮ ದಾಖಲೆಗಳ ಸಮೇತ ದೂರು ನೀಡಿದರು.
ಕೊರೊನಾ ಸೋಂಕಿತರ ಹಾಜರಾತಿಯಿಂದ ಊಟ, ಔಷಧಿ, ಕೊರೊನಾ ವಾರಿಯರ್ಸ್ ನೇಮಕಾತಿ ಹಾಗೂ ರಕ್ತ ಪರೀಕ್ಷಾ ನಡೆಸಲು ಮೆಡಲ್ ಮತ್ತು ಔಷಧಿ ವಿತರಣೆ ಮಾಡಲು ತುಳಸಿ ಮೆಡಿಕಲ್‍ಗೆ ಅಕ್ರಮವಾಗಿ ಪರವಾನಗಿ ನೀಡಿ ನಕಲಿ ರಕ್ತ ಪರೀಕ್ಷಾ ವರದಿಗಳ ತಯಾರಿ ಜೊತೆಗೆ ಔಷಧಿ ವಿತರಣೆ ಮಾಡದೆ ಕೋಟಿಕೋಟಿ ಹಣವನ್ನು ಮೇಲ್ಕಂಡ ಸಮಸ್ಯೆಗೆ ನೀಡುವ ಮುಖಾಂತರ ರಾಜ್ಯ ಸರ್ಕಾರ 8 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ದಾಖಲೆಗಳ ಸಮೇತ ದೂರು ನೀಡಿ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲಾಸ್ಪತ್ರೆ ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ದಲ್ಲಾಳರಿಗೆ ಚಿನ್ನದ ಮೊಟ್ಟೆ ಇಡುವ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದವರೆಗೆ ಆಸ್ಪತ್ರೆಯಲ್ಲಿ ಕೆಲಸವಾಗುತ್ತಿಲ್ಲವೆಂದು ಅವ್ಯವಸ್ಥೆಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಕೋವಿಡ್ 19 ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗೆ 30 ಕೋಟಿಗೂ ಅಧಿಕ ಅನುದಾನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಿಡುಗಡೆಯಾಗಿದ್ದರೂ ಖರ್ಚು ವೆಚ್ಚಗಳಿಗೆ ಲೆಕ್ಕವಿಲ್ಲ. ಜೊತೆಗೆ ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವ ಗ್ರಾಮೀಣ ಪ್ರದೇಶದ ಬಡ ಕೂಲಿಕಾರ್ಮಿಕರನ್ನು ಶೋಷಣೆ ಮಾಡುವ ಸಿಬ್ಬಂದಿ ವಿರುದ್ಧ ಕ್ರಮಕೈಗೊಂಡು ಕೋವಿಡ್ ಅವಧಿಯಲ್ಲಿ ನಡೆದಿರುವ ಹಗರಣವನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಮನವಿ ನೀಡುವ ಮುಖಾಂತರ ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕರು, ದಾಖಲೆಗಳ ಸಮೇತ ದೂರು ನೀಡಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತನಿಖೆ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್,ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಗೌಡ, ಯಾರಂಗಟ್ಟ ಗಿರೀಶ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ತೆರ್ನಹಳ್ಳಿ ಆಂಜಿನಪ್ಪ ಮುಂತಾದವರಿದ್ದರು.