ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಸರ್ಕಾರವು ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು , ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದು ತೋಟಗಾರಿಕೆ ಮತ್ತು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು .
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ , ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .
ಸಾರ್ವಜನಿಕರಿಗೆ ಸೇವೆ ಮಾಡುವ ಮನೋಭಾವವನ್ನು ಅಧಿಕಾರಿಗಳು ಇಟ್ಟುಕೊಳ್ಳಬೇಕು . ಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಪ್ರೋತ್ಸಾಹ ನೀಡುವುದು ಸರ್ಕಾರದ ಜವಬ್ದಾರಿ ಅದನ್ನು ನಾವು ಮಾಡುತ್ತೇವೆ.
ಕಾಮಗಾರಿಗಳಲ್ಲಿ ಗುಣಮಟ್ಟ ಹಾಗೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು . ಮುಂದಿನ ದಿನಗಳಲ್ಲಿ ಪ್ರತಿಯೊಂದು ಇಲಾಖೆಯನ್ನು ಕುಲಂಕುಶವಾಗಿ ಪರಿಶೀಲನೆ ಮಾಡಿ ಜಿಲ್ಲೆಗೆ ಬೇಕಾಗಿರುವ ಅನುದಾನವನ್ನು ಮುಂದಿನ ಬಾರಿಯ ಬಜೆಟ್ನಲ್ಲಿ ಕೊಡಿಸಲಾಗುವುದು ಎಂದು ತಿಳಿಸಿದರು .
ಜಿಲ್ಲಾಧಿಕಾರಿಗಳಾದ ವೆಂಕಟರಾಜು ಅವರು ಮಾತನಾಡಿ , ನಾವು ಆರ್ಥಿಕ ವರ್ಷದ ಕೊನೆಯಲ್ಲಿ ಇದ್ದೇವೆ . ಜಿಲ್ಲೆಗೆ ಬಂದಿರುವ ಅನುದಾನ ವಾಪಸ್ ಹೋಗದಂತೆ ಸದ್ಬಳಕೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಸಭೆಯಲ್ಲಿ 25 ಕ್ಕೂ ಹೆಚ್ಚು ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳು ಪ್ರಗತಿ ವರಧಿಯನ್ನು ಸಂಕ್ಷಿಪ್ತವಾಗಿ ಸಭೆಯಲ್ಲಿ ವಿವರಿಸಿದರು .
ಸಭೆಯಲ್ಲಿ ಕೋಲಾರ ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ , ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ದೇವರಾಜ್ , ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಚಿನ್ ಘೋರ್ಪಡೆ , ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ , ಉಪ ವಿಭಾಗಾಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.