ಕೋಲಾರ:- ಆರ್ಥಿಕ ವರ್ಷದ ಅಂತ್ಯಕ್ಕೆ ಕೇವಲ 18 ದಿನಗಳಿವೆ, ಕಳೆದ ಬಾರಿ 2.5 ಇದ್ದ ಎನ್‍ಪಿಎ ಈ ಬಾರಿ ಶೇ.1ಕ್ಕೆ ತರಲು ಬದ್ದತೆಯಿಂದ ಕೆಲಸ ಮಾಡಿ, ಸಾಲ ವಸೂಲಾತಿ,ಠೇವಣಿ ಸಂಗ್ರಹಕ್ಕೆ ನೀಡಿರುವ ಗುರಿ ಸಾಧಿಸಿ, ಅನ್ನನೀಡಿರುವ ಬ್ಯಾಂಕಿನ ಋಣ ತೀರಿಸಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಶನಿವಾರ ನಡೆದ ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ದೇಶವೇ ಡಿಸಿಸಿ ಬ್ಯಾಂಕ್ ಕಡೆ ನೋಡುವಂತೆ ಪ್ರಗತಿ ಸಾಧಿಸಿದ್ದೇವೆ, ಈ ಸಾಧನೆಗೆ ಹಿನ್ನಡೆಯಾದರೆ ಸಹಿಸಲು ಸಾಧ್ಯವಿಲ್ಲ, ನಿಷ್ಕ್ರಿಯ ಆಸ್ತಿಯ ಮೌಲ್ಯ ಎನ್‍ಪಿಎ ಶೇ.1ಕ್ಕೆ ತರಲು ಶ್ರಮಿಸಿ, ನಿಮಗೆ,ನಿಮ್ಮ ಕುಟುಂಬಕ್ಕೆ ಅನ್ನ ನೀಡುತ್ತಿರುವ ಬ್ಯಾಂಕನ್ನು ಉಳಿಸಿ ಎಂದು ಕಿವಿಮಾತು ಹೇಳಿದರು.
ಮಾರ್ಚ್ 31ರೊಳಗೆ ನಿಮಗೆ ನೀಡಿರುವ ಶೇ.100 ಸಾಲ ವಸೂಲಾತಿ,ಠೇವಣಿ ಸಂಗ್ರಹದ ಗುರಿ ಸಾಧನೆ ಮಾಡಿರಬೇಕು, ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಖೆಗಳಿಗೆ ಭೇಟಿ ನೀಡಿದಾಗ ಠೇವಣಿ ತೋರಿಸಬೇಕು. ಗುರಿ ಸಾಧನೆಯಾಗದಿದ್ದರೆ ಸಹಿಸಲ್ಲ. ಉತ್ತಮ ಕೆಲಸ ನಿರ್ವಹಿಸಿದರೆ ನಿಮಗೆ ಹೆಸರು ಬರುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ, ನಿಮ್ಮ ಕುಟುಂಬವನ್ನು ಉಳಿಸಿರುವ ಬ್ಯಾಂಕಿಗೆ ಅನ್ಯಾಯ ಮಾಡಿದರೆ ನಿಮ್ಮನ್ನು ಆ ದೇವರು ಕ್ಷಮಿಸಲ್ಲ ಎಂದರು.
ಬೆಳೆ ಸಾಲ, ಗೃಹ ಸಾಲ, ಚಿನ್ನಾಭರಣ ಸಾಲ, ಸ್ತ್ರೀ ಶಕ್ತಿ ಸಾಲ ಮಾರ್ಚ್ ಅಂತ್ಯದೊಳಗೆ ವಸೂಲಿಯಾಗಬೇಕು. ಅಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಯಾರು ರಜೆ ಹಾಕಬಾರದು, 24*7 ರಡಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಗುರಿ ಸಾಧನೆಯಲ್ಲಿ ವಿಫಲರಾದ, ತಪ್ಪು ಮಾಡಿರುವವರನ್ನು ಅಮಾನತ್ತು, ಡಿಸ್ ಮೀಸ್ ಮಾಡೋದು ದೊಡ್ಡವಿಚಾರವಲ್ಲ. ಆ ಪಾಪ ಕಾಡಬಾರದು ಎಂಬ ಉದ್ದೇಶದಿಂದ ಹಗಲು ಇರುಳು ಶ್ರಮಿಸುತ್ತಿದ್ದೇವೆ. ಬ್ಯಾಂಕಿನ ಸೇವೆ ಇದನ್ನು ನಂಬಿದ ಬಡವರ ಸೇವೆ, ಮೋಸ ಮಾಡಿದರೆ ಜನರ ಶಾಪ ತಟ್ಟುತ್ತದೆ ಅದನ್ನು ನೀವು ತಡೆದುಕೊಳ್ಳಲಾರಿರಿ ಎಂದು ಆಕ್ರೋಶವ್ಯಕ್ತಪಡಿಸಿದರು.
ಆರ್ಥಿಕ ವರ್ಷದ ಅಂತ್ಯದೊಳಗೆ ಬ್ಯಾಂಕಿನ ಪ್ರಗತಿ ಚಿತ್ರಣ ಹೊರ ಬರಬೇಕಾಗಿದೆ, ಸಿಬ್ಬಂದಿ ಹಬ್ಬ,ಹರಿದಿನ ಕಾರ್ಯಕ್ರಮಗಳನ್ನು ಮರೆಯಿರಿ, ಇಡೀ ದಿನ ಬ್ಯಾಂಕಿನ ಅಭಿವೃದ್ದಿಯತ್ತ ಚಿತ್ತವಿಡಿ, ಜೀವನಪೂರ್ತಿ ಅನ್ನ ನೀಡುತ್ತಿರುವ ಬ್ಯಾಂಕಿನ ಋಣ ತೀರಿಸುವ ಕಾರ್ಯದಲ್ಲಿ ನಿರ್ಲಕ್ಷ್ಯ ತೋರದಿರಿ ಎಂದರು.
ಚಿಂತಾಮಣಿ ತಾಲ್ಲೂಕು ವ್ಯಾಪ್ತಿಯ ಕೆಲ ಸೋಸೈಟಿಗಳು ಗಣಕೀರಣಗೊಂಡಿಲ್ಲ. ಇದೇ ಮಾರ್ಚ್ 25ರೊಳಗೆ ಪೂರ್ಣಗೊಳ್ಳಬೇಕು ಎಂದು ಸೂಚಿಸಿ, ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಆರ್ಥಿಕವಾಗಿ ಶಕ್ತಿಯುತವಾಗಿ ನಡೆಯುತ್ತಿವೆ. ಇ-ಶಕ್ತಿ ಯೋಜನೆಯಡಿ ಪ್ರತಿ ಮಹಿಳಾ ಸ್ವಸಾಹಯ ಸಂಘಗಳು ನೋಂದಣಿ ಮಾಡಿಸಬೇಕು. ಭಯ ಭಕ್ತಿಯಿಂದ ಕೆಲಸ ಮಾಡಿ, ವಹಿಸಿರುವ ಕೆಲಸ ಸಮರ್ಪಕವಾಗಿ ನಿರ್ವಹಿಸದ ಸಿಬ್ಬಂದಿಗೆ ವೇತನ ತಡೆಹಿಡಿಯಲು ಸೂಚಿಸಿದರು.
ಮೈಕ್ರೋ ಎಟಿಎಂ,ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಇಡೀ ದೇಶದಲ್ಲೇ ನಾವು ಮೊದಲು ನೀಡಿದ ಕೀರ್ತಿಗೆ ಭಾಜನರಾಗಿದ್ದೇವೆ, ಈ ಯೋಜನೆಗಳ ಅನುಷ್ಟಾನದಲ್ಲಿ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಗ್ರಾಹಕರಿಗೆ ಪಾರದರ್ಶಕ ಆರ್ಥಿಕ ವಹಿವಾಟು ನಡೆಯುತ್ತಿದೆ ಎಂಬ ನಂಬಿಕೆ ಬಲಗೊಂಡರೆ ಬ್ಯಾಂಕಿನ ಪ್ರಗತಿಯ ವೇಗವೂ ಹೆಚ್ಚುತ್ತದೆ ಎಂದರು.
ಜನೌಷಧಿ ಮಳಿಗೆ;ಸಿಇಒಗಳಿಗೆ ತರಬೇತಿ
ಫ್ಯಾಕ್ಸ್‍ಗಳ ಅಡಿಯಲ್ಲಿ ಜನೌಷಧಿ ಮಳಿಗೆ ತೆರೆಯಲು ಯೋಜನೆ ರೂಪಿಸಲಾಗಿದೆ. ಈ ಕುರಿತು ಮಾ.17ರಂದು ಸೋಸೈಟಿ ಸಿಇಒಗಳಿಗೆ ತರಬೇತಿ ಕಾರ್ಯಾಗಾರವನ್ನು ರಂಗಮಂದಿರದಲ್ಲಿ ಬೆಳಿಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ. ಸೋಸೈಟಿಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸಿಇಒ ಪಾಲ್ಗೊಳ್ಳಬೇಕು ಎಂದು ಹೇಳಿದರು.