ಸೋಂಕು,ಸಾವಿನ ಭಯದಲ್ಲಿರುವ ನಮ್ಮ ಸಾಲದ ಕಂತು ಮುಂದೂಡಿ ಇಲ್ಲದಿದ್ದರೆ ಶಾಪ ತಟ್ಟೀತು-ಸರ್ಕಾರಕೆ ಮಹಿಳಾ ಸಂಘಗಳ ಎಚ್ಚರಿಕೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್‍ಲಾಕ್‍ಡೌನ್‍ನಿಂದ ಒಂದೊತ್ತಿನ ಊಟಕ್ಕೂ ಪರದಾಟ,ಸೋಂಕು, ಸಾವಿನ ಆತಂಕದಲ್ಲಿ ಜೀವನ ನಡೆಸುತ್ತಿರುವ ನಮ್ಮ ಸಾಲದ ಕಂತು ಪಾವತಿ ಮೂರು ತಿಂಗಳು ಮುಂದೂಡಲು ಅಧಿಕಾರದಲ್ಲಿರುವವರಿಗೆ ತಿಳಿಸಿ, ಇಲ್ಲವಾದರೆ ನೋವಿನಿಂದಿರುವ ನಮ್ಮ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಎಂದು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ತಾಯಂದಿರು ಎಚ್ಚರಿಸಿದರು.
ಸಾಲದ ಕಂತು ಮರುಪಾವತಿಗೆ ಕರೆ ಹೋದ ಹಿನ್ನಲೆಯಲ್ಲಿ ಬ್ಯಾಂಕಿನತ್ತ ದೌಡಾಯಿಸಿದ ನಗರದ ವಿವಿಧ ವಾರ್ಡುಗಳ ಸ್ತ್ರೀಶಕ್ತಿ ಮಹಿಳಾ ಸಂಘಗಳ ಮಹಿಳೆಯರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಮನವಿ ಮಾಡಿ ಸಾಲದ ಕಂತು ಪಾವತಿ 3 ತಿಂಗಳು ಮುಂದೂಡಲು ಮನವಿ ಮಾಡಿದರು.
ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳಲ್ಲಿ ಒಬ್ಬರಾದ ಗಾಂಧಿನಗರದ ಕೃಷ್ಣಮ್ಮ ಮಾತನಾಡಿ, `ಸ್ವಾಮಿ ನಾವು ಈಗಾಗಲೇ 3 ಬಾರಿ ಸಾಲ ಪಡೆದಿದ್ದೇವೆ, ಒಂದೂ ಕಂತು ಬಾಕಿ ಉಳಿಸಿಕೊಳ್ಳದೇ ಪಾವತಿಸುವ ಮೂಲಕ ಗೌರವ ಉಳಿಸಿಕೊಂಡಿದ್ದೇವೆ’ ಎಂದರು.


ಸಾಲ ಮನ್ನಾಬೇಡ ಕಂತು ಮುಂದೂಡಿ
ಕೋವಿಡ್ ಮಾರಿಯಿಂದ ಲಾಕ್‍ಡೌನ್ ಆಗಿದೆ ಇಂತಹ ಸಂದರ್ಭದಲ್ಲಿ ನಮ್ಮ ಕುಟುಂಬ ಕಾಪಾಡಿಕೊಳ್ಳುವುದೇ ಕಷ್ಟವಾಗಿದೆ, ಈ ನೋವಿನ ಸಮಯದಲ್ಲೂ ಸಾಲ ಮರುಪಾವತಿಸಿ ಎಂದರೆ ಹೇಗೆ ಎಂದು ಮಹಿಳೆಯರು ಪ್ರಶ್ನಿಸಿ ತಮ್ಮ ಅಳಲು ತೋಡಿಕೊಂಡರು.
ನಾವೇನು ನಿಮ್ಮನ್ನು ಸಾಲ ಮನ್ನಾ ಮಾಡಿ ಎಂದು ಕೇಳುತ್ತಿಲ್ಲ, ನಮಗೆ ಸ್ವಾಭಿಮಾನವಿದೆ, ನಮ್ಮ ಸಾಲದ ಕಂತು ಪಾವತಿಯನ್ನು ಸೋಂಕು ಕಡಿಮೆಯಾಗುವವರೆಗೂ 3 ತಿಂಗಳು ಮುಂದೂಡಿ, ನಮಗೆ ನೆರವಾಗಿ ಎಂದು ಆಗ್ರಹಿಸಿದರು.
ನೆರೆಹೊರೆಯ ಮನೆಗಳಲ್ಲಿ ಸಾವನ್ನು ನೋಡುತ್ತಿದ್ದೇವೆ, ಕೋವಿಡ್ ಮಹಾಮಾರಿ ಭಯದ ವಾತಾವರಣ ಸೃಷ್ಟಿಸಿದೆ, ಸಾವಿನ ಆತಂಕ ಇಣುಕಿ ನೋಡುತ್ತಿದೆ, ಇಂತಹ ಸಂದರ್ಭದಲ್ಲಿ ನಾವು ಪ್ರತಿವಾರದ ಸಭೆ ನಡೆಸುವುದು ಹೇಗೆ? ಮೊದಲು ನಮ್ಮನ್ನು ಬದುಕಲು ಬಿಡಿ, ಸಾಲದ ಕಂತು ಪಾವತಿ 3 ತಿಂಗಳು ಮುಂದೂಡಿ ಎಂದು ಮನವಿ ಮಾಡಿದರು.
ಕೋವಿಡ್ ಸಂಕಷ್ಟದಲ್ಲಿ ಯಾವ ಧೈರ್ಯದ ಮೇಲೆ ವಾರದ ಸಭೆ ನಡೆಸೋದು, ಹೇಗೆ ಕಂತಿನ ಹಣ ಸಂಗ್ರಹಿಸುವುದು, ಎಂಬ ಸತ್ಯವನ್ನು ಅರಿತು ನಮ್ಮ ನೋವನ್ನು ಸರ್ಕಾರಕ್ಕೆ ಮುಟ್ಟಿಸಿ, ನೋವಿನಿಂದ ನರಳುತ್ತಿರುವ ನಮಗೆ ನೆರವಾಗದಿದ್ದರೆ ನಮ್ಮ ಕಣ್ಣೀರಿನ ತಾಪ ಸರ್ಕಾರಕ್ಕೆ ತಗಲುತ್ತದೆಯೆಂದು ತಿಳಿಸಿ ಎಂದು ತಾಕೀತು ಮಾಡಿದರು.


ಅಪೆಕ್ಸ್‍ಬ್ಯಾಂಕಿನಿಂದ ಸರ್ಕಾರಕ್ಕೆ ಮನವಿ
ಮಹಿಳೆಯರ ಮನವಿಗೆ ಉತ್ತರಿಸಿದ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಸಾಲದ ಕಂತು ಮುಂದೂಡುವ ಅಧಿಕಾರ ಡಿಸಿಸಿ ಬ್ಯಾಂಕಿಗಿಲ್ಲ, ಅದನ್ನು ಕೇಂದ್ರ,ರಾಜ್ಯ ಸರ್ಕಾರಗಳೇ ಮಾಡಬೇಕು ಎಂದು ತಿಳಿಸಿದರು.
ನಿಮ್ಮ ಆತಂಕ,ನೋವನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಅಪೇಕ್ಸ್ ಬ್ಯಾಂಕ್ ಮೂಲಕ ಮತ್ತೊಮ್ಮೆ ಮನವರಿಕೆ ಮಾಡಿಕೊಡುತ್ತೇವೆ ಆದರೆ ಸರ್ಕಾರ ಕಂತು ಮುಂದೂಡದಿದ್ದರೆ ಬ್ಯಾಂಕ್ ಏನೂ ಮಾಡಲು ಸಾಧ್ಯವಿಲ್ಲ, ನೀವು ಕಂತು ಪಾವತಿಸಲೇಬೇಕು ಇಲ್ಲವಾದರೆ ಬಡ್ಡಿಯ ಹೊರೆ ನಿಮ್ಮ ಮೇಲೆ ಬೀಳುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಲ್ಲಿನ ಗಾಂಧಿನಗರ, ಕಠಾರಿಪಾಳ್ಯದ ವಾಸವಿ ಸ್ತ್ರೀಶಕ್ತಿ ಸಂಘದ ಧನಲಕ್ಷ್ಮಿ,ಕವಿತಾ, ಗಲ್‍ಪೇಟೆಯ ಓಂಶಕ್ತಿ ಸಂಘದ ರೆಡ್ಡಮ್ಮ, ಚಾಮುಂಡೇಶ್ವರಿ ಮಹಿಳಾ ಸಂಘದ ಕೆ.ಎನ್.ಕುಮಾರಿ ಮತ್ತಿತರ ಮಹಿಳೆಯರು ಕಂತು ಪಾವತಿ 3 ತಿಂಗಳು ಮೂಂದೂಡಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಅಂಬರೀಷ್, ಸೂಪರ್ ವೈಸರ್ ಅಮೀನಾ ಮತ್ತಿತರರಿದ್ದರು
.