ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮಕ್ಕಳ ಸಾವು:ವೈದ್ಯರು, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ರೈತಸಂಘ ಆಗ್ರಹ

ಕೋಲಾರ;ನ.8: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ-ಮಕ್ಕಳ ಸಾವಿಗೆ ಕಾರಣರಾಗಿರುವ ವೈದ್ಯ-ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ, ಆಸ್ಪತ್ರೆಗಳಲ್ಲಿ ಮುಂದೆ ಇಂತಹ ಅಹಿತಕರ ಘಟನೆ ನಡೆಯದಂತೆ ಜಾಗೃತಿವಹಿಸಬೇಕೆಂದು ಆಗ್ರಹಿಸಿ ರೈತಸಂಘದಿಂದ ಆರೋಗ್ಯಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜನತೆಯ ಹಣದಿಂದ ನಡೆಯುವ ಸರ್ಕಾರಿ ಆಸ್ಪತ್ರೆಗಳಿರುವುದು ಬಡವರಿಗಾಗಿ ಆದರೆ, ಅದೇ ಸರ್ಕಾರಿ ಆಸ್ಪತ್ರೆಗಳಿಂದ ಜಾಗತಿಕ ಮಟ್ಟದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತಿರುವುದು ಎಲ್ಲರೂ ತಳಮಳಪಡಬೇಕಾದ ಸಂಗತಿ ಬೇಸರ ವ್ಯಕ್ತಪಡಿಸಿದರು.
ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರಿಗೆ ತುರ್ತು ಪರಿಸ್ಥಿತಿಯಲ್ಲಿ ಸೂಕ್ತ ಆರೈಕೆ ನೀಡದೆ ತಾಯಿಕಾರ್ಡ್, ಆಧಾರ್ ಕಾರ್ಡ್ ಇಲ್ಲವೆಂದು ನೆಪ ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರ ನಿರ್ಲಕ್ಷ್ಯದಿಂದ ಈ ಪಾಪಿ ಪ್ರಪಂಚಕ್ಕೆ ಅಂಬೆ ಕಾಲಿಡುತ್ತಿದ್ದ ಹಸುಗೂಸುಗಳು ಕಣ್ಣು ಬಿಡುವ ಮುನ್ನವೇ ತಾಯಿ ಮಕ್ಕಳು ಸಾವನ್ನಪ್ಪಿದ್ದು, ಇಡೀ ಮನುಕುಲ ತಲೆ ತಗ್ಗಿಸಬೇಕಾದ ಗಂಭೀರ ವಿಚಾರ ಎಂದು ಹೇಳಿದರು.
ಇದು ಬಡವರನ್ನು ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಷಕಿಯರು ಮಾಡಿದ ಕಗ್ಗೊಲೆಯೆಂದರೆ ತಪ್ಪಿಲ್ಲ. ಎಲ್ಲರೂ ಸಕಾಲಕ್ಕೆ ಆರೋಗ್ಯ ಸೌಕರ್ಯ ಪಡೆಯುವಂತಾಗಲೆಂದು ಆರೋಗ್ಯ ಕರ್ನಾಟಕ ಯೋಜನೆಯನ್ನು ತರಲಾಗಿದೆ. ಆದರೆ, ಸರ್ಕಾರ ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದು ಜನಸಾಮಾನ್ಯರು ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಅಲ್ಲಿನ ವೈದ್ಯರು ವೈದ್ಯಕೀಯ ಶುಲ್ಕ ಭರಿಸಲಾಗದೆಂದು ಸರ್ಕಾರ ಆಯುಷ್ಮಾನ್ ಕಾರ್ಡ್ ರೂಪಿಸಿದೆ.
ಆದರೆ, ತಾಯಿ ಕಾರ್ಡ್ ಮಾಡಿಸಿಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ ಮನುಷ್ಯತ್ವ ಅಂತಃಕರಣ ಇರುವವರ್ಯಾರೂ ಪಶುವಿನಂತೆ ವರ್ತಿಸುವುದಿಲ್ಲ. ಆದರೆ, ಸರ್ಕಾರಿ ಆಸ್ಪತ್ರೆಯ ವೈದ್ಯರು, ದಾದಿಯರು ನಡೆದುಕೊಂಡ ರೀತಿ ಅತ್ಯಂತ ಅಮಾನವೀಯವಾದದ್ದು. ಈ ತಾಯಿ-ಮಕ್ಕಳ ಸಾವಿಗೆ ಹೊಣೆ ಯಾರು ಎಂದು ಪ್ರಶ್ನಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ತುಮಕೂರು ಜಿಲ್ಲಾಸ್ಪತ್ರೆಯಲ್ಲಿನ ಘಟನೆಗೆ ಸಂಬಂಧಿಸಿದಂತೆ ಕೇವಲ ವೈದ್ಯರನ್ನು, ಶುಶ್ರೂಷಕಿಯರನ್ನು ಅಮಾನತ್ತಿನಲ್ಲಿಟ್ಟರೆ ಸಾಲದು ಆರೋಗ್ಯ ಇಲಾಖೆಯ ಮುಖ್ಯಸ್ಥರು ಮತ್ತು ಆರೋಗ್ಯ ಮಂತ್ರಿಗಳು ಇದರ ಹೊಣೆ ಹೊರೆಯಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದರೆ ನೇಮಕ ಮಾಡಿಕೊಳ್ಳಬಹುದು. ವೈದ್ಯಕೀಯ ಉಪಕರಣಗಳ ಕೊರತೆಯಿದ್ದರೆ ಒದಗಿಸಿ, ಸರಿಪಡಿಸಿ ಜೊತೆಗೆ ಅವಶ್ಯಕತೆಗೆ ತಕ್ಕಂತೆ ಔಷಧಿಗಳನ್ನು ಪೂರೈಕೆ ಮಾಡಬಹುದು. ಆದರೆ, ಎಲ್ಲಾ ಅನುಕೂಲಗಳಿದ್ದು, ಇಂತಹ ದುರಂತಗಳು ಸಂಭವಿಸುತ್ತಿವೆ ಎಂದರೆ ಕಾರಣ ಮನುಷ್ಯನ ಅಂತಃಕರಣದ ಅಭಾವ. ಮನುಷ್ಯತ್ವವ್ವನ್ನು ಎಲ್ಲಿಂದ ತರುವುದು ಎಂದು ಪ್ರಶ್ನಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸ್ಥಿತಿಯಯಲ್ಲಿ ಬರುವ ರೋಗಿಗಳಿಗೆ ಮೊದಲು ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು. ಆ ನಂತರ ದಾಖಲೆಗಳನ್ನು ಕೇಳಬೇಕು. ಅದನ್ನು ಬಿಟ್ಟು ಲಕ್ಷ ಲಕ್ಷ ಸಂಬಳ ಪಡೆದು ಬಡವರ ಜೀವನದ ಜೊತೆ ಚೆಲ್ಲಾಟವಾಡುವ ಬಡ ರೋಗಿಗಳ ಜೊತೆ ಅಸಭ್ಯವಾಗಿ ವರ್ತನೆ ಮಾಡಿ ಹಣ ಕೊಟ್ಟರೆ ಚಿಕಿತ್ಸೆ ಇಲ್ಲವಾದರೆ ಹೆಣ ಕೊಡುವ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ನರ್ಸ್‍ಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಆಸ್ಪತ್ರೆಗೆ ಬರುವ ರೋಗಿಗಳಿಗೆ ಅವಶ್ಯಕತೆಯಿರುವ ಸರ್ಕಾರದ ಸುತ್ತೋಲೆಯನ್ನು ಕರಪತ್ರದ ಮುಖಾಂತರ ಜಾಗೃತಿ ಮೂಡಿಸಿ ಬೆಲೆ ಕಟ್ಟಲಾಗದ ಅಮೂಲ್ಯ ಜೀವಗಳನ್ನು ಉಳಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಆರೋಗ್ಯಾಧಿಕಾರಿಗಳಾದ ಜಗಧೀಶ್ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ವೈದ್ಯರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಜೊತೆಗೆ ನಿಮ್ಮ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಯಾರಂಘಟ್ಟ ಗಿರೀಶ್, ಕೋಟೆ ಶ್ರೀನಿವಾಸ್, ಮಂಜುಳಾ, ತೆರ್ನಹಳ್ಳಿ ಆಂಜಿನಪ್ಪ, ವೆಂಕಟ್, ಮಂಗಸಂದ್ರ ವೆಂಕಟೇಶಪ್ಪ, ಫಾರೂಖ್‍ಪಾಷ, ಬಂಗಾರಿ ಮಂಜು, ರಾಜೇಶ್, ಸಂದೀಪ್‍ರೆಡ್ಡಿ, ರಾಮಸಾಗರ ವೇಣು, ಸಂದೀಪ್‍ಗೌಡ ಮುಂತಾದವರಿದ್ದರು.