

ಕುಂದಾಪುರ:ಗಂಡ ಹೆಂಡತಿಯ ಜಗಳದ ಕಾರಣ ಕಂಡ್ಲೂರು ಸಮೀಪದ ಸೇತುವೆಯಿಂದ ಮಂಗಳವಾರ ಅಪರಾಹ್ನ ವಾರಾಹಿ ನದಿಗೆ ಹಾರಿ, ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಹರೀಶ್ ಕಾಳಾವರ ಅವರ ಮೃತದೇಹ ಇಂದು ಅಪರಾಹ್ನ 2:30 ರ ವೇಳೆ ಕುಂದಾಪುರ ಸಂಗಮದ ಸಮೀಪ ನದಿ ತೀರದಲ್ಲಿ ಪತ್ತೆಯಾಗಿದೆ.
ಕಂಡ್ಲೂರು ಠಾಣಾ ಎಸ್ಐ ನೂತನ್ ಹಾಗೂ ಸಿಬಂದಿ ಹುಡುಕಾಟ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.ಕುಂದಾಪುರದ ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳೀಯ ಶೌರ್ಯ ತಂಡದ ಸದಸ್ಯರು, ಕಾಳಾವರದ ತಂಡ, ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಎರಡು ದಿನಗಳಿಂದ ಮೃತದೇಹ ಹುಡುಕಾಟದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಗಂಡ- ಹೆಂಡತಿ ನಡುವೆ ಜಗಳ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರ ಜಗಳವನ್ನು ರಾಜಿ ಪಂಚಾಯಿತಿ ಮೂಲಕ ಇತ್ಯರ್ಥಪಡಿಸಲಾಯಿತು.ಮಂಗಳವಾರ ಅಪರಾಹ್ನ ಠಾಣೆಗೆ ಹೋಗಿ ಮರಳಿ ಪತ್ನಿ, ತಾಯಿ, ಅಕ್ಕನೊಂದಿಗೆ ರಿಕ್ಷಾದಲ್ಲಿ ಬರುತ್ತಿದ್ದರು. ಕಂಡ್ಲೂರು ಸೇತುವೆ ಬಳಿ ತಲುಪಿದಾಗ ಕೈಗೆ ಕಟ್ಟಿದ್ದ ತಾಯತವನ್ನು ನದಿಗೆ ಎಸೆದು ಬರುತ್ತೇನೆಂದು ಹೇಳಿ ಹರೀಶ್ ರಿಕ್ಷಾವನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿದರು. ರಿಕ್ಷಾದಿಂದ ಇಳಿದು ಪತ್ನಿ, ತಾಯಿ, ಅಕ್ಕ ನೋಡ ನೋಡುತ್ತಿದ್ದಂತೆ ಸೇತುವೆಯಿಂದ ನದಿಗೆ ಹಾರಿದ್ದರು.