ಸಮಾಜದ ಕಟ್ಟಕಡೆ ವ್ಯಕ್ತಿಗೂ ಸಾಲ ನೀಡಿರುವ ಡಿಸಿಸಿ ಬ್ಯಾಂಕ್‍ನಲ್ಲೇ ಸ್ವಯಂಪ್ರೇರಿತನಾಗಿ 50 ಲಕ್ಷ ಠೇವಣಿ ಇಟ್ಟಿರುವೆ-ಡಾ.ಜಯರಾಮರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲೆಯ ರೈತರು,ಮಹಿಳೆಯರಿಗೆ ಬಡ್ಡಿರಹಿತ ಸಾಲಸೌಲಭ್ಯ ಕಲ್ಪಿಸಿ ಸ್ವಾವಲಂಬಿ ಬದುಕಿಗೆ ದಾರಿಮಾಡಿಕೊಟ್ಟು ಜನರ ಮನೆ ಮಾತಾಗಿರುವ ಡಿಸಿಸಿ ಬ್ಯಾಂಕಿನಲ್ಲೇ ಉಳಿತಾಯದ ಹಣ ಠೇವಣಿ ಇಡಲು ನಿರ್ಧರಿಸಿದ್ದೇನೆ ಎಂದು ನಿವೃತ್ತ ಅಸೋಸಿಯೇಟ್ ಪ್ರೊಫೇಸರ್ ಡಾ.ಜಯರಾಮರೆಡ್ಡಿ ತಿಳಿಸಿದರು.
ಅವರು ಶುಕ್ರವಾರ ಸ್ವಯಂಪ್ರೇರಿತರಾಗಿ ನಿವೃತ್ತಿ ಸಂದರ್ಭದಲ್ಲಿ ಬಂದ ಉಳಿತಾಯದ ಹಣ 50 ಲಕ್ಷ ರೂಗಳನ್ನು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಸಂದರ್ಭದಲ್ಲಿ ಬ್ಯಾಂಕಿನಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನಾನು ಬೆಂಗಳೂರು ಜಿಲ್ಲೆಯ ವರ್ತೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತನಾದೆ ಆದರೆ ಮೂಲತಃ ಕೋಲಾರ ತಾಲ್ಲೂಕಿನ ಗೌಡಹಳ್ಳಿಯ ನಿವಾಸಿಯಾಗಿದ್ದೇನೆ, ನಮ್ಮೂರಿನ ಯಾವುದೇ ತಾಯಂದಿರನ್ನು ಕೇಳಿದರೂ ಡಿಸಿಸಿ ಬ್ಯಾಂಕಿನಿಂದ ಭದ್ರತೆ ಇಲ್ಲದೇ ಬಡ್ಡಿರಹಿತ ಸಾಲ ಪಡೆದಿರುವುದಾಗಿ ತಿಳಿಸುತ್ತಾರೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ನೀಡುವ ಡಿಸಿಸಿ ಬ್ಯಾಂಕಿನ ಧ್ಯೇಯ ಶ್ಲಾಘನೀಯ, ಕೇವಲ ಶ್ರೀಮಂತರು,ಉದ್ಯಮಿಗಳಿಗೆ ಮಣೆಹಾಕುವ ವಾಣಿಜ್ಯ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿಗಟ್ಟಲೆ ಮುಳುಗಿಸುವವರು ಇರುತ್ತಾರೆ ಆದರೆ ಡಿಸಿಸಿ ಬ್ಯಾಂಕಿನಲ್ಲಿ ಮಾನ,ಮರ್ಯಾದೆಗೆ ಅಂಜಿ ಬದುಕುವ ಗ್ರಾಮೀಣ ಬಡವರಿಗೆ ಸಾಲ ನೀಡಿರುವುದರಿಂದ ಇಂದು ಸಮಾಜದಲ್ಲಿನ ಆರ್ಥಿಕ ಅಸಮಾನತೆ ಹೋಗಲು ಕಾರಣವಾಗಿದೆ ಎಂದರು.
ಇಂತಹ ಬಡವರನ್ನು ಗುರುತಿಸಿ, ಯಾವುದೇ ಭದ್ರತೆ ಇಲ್ಲದೇ ಅವರ ಸ್ವಾಭಿಮಾನಿ ಬದುಕಿಗೆ ನೆರವಾಗುವ ನಮ್ಮದೇ ಬ್ಯಾಂಕಿನಲ್ಲಿ ಠೇವಣಿ ಇಡಲು ನಿರ್ಧರಿಸಿದೆ, ನನಗೆ ನಿವೃತ್ತಿ ಅಂಚಿನಲ್ಲಿ ಬಂದ ಉಳಿತಾಯದ ಹಣ ವಾಣಿಜ್ಯ ಬ್ಯಾಂಕಿಗೆ ಬಂದರೂ ಅಲ್ಲಿಂದ ವಾಪಸ್ಸು ಪಡೆದು ಇಲ್ಲಿ ಠೇವಣಿ ಇಟ್ಟಿರುವುದಾಗಿ ತಿಳಿಸಿದರು.
ಬ್ಯಾಂಕ್,ಹಣಕಾಸು ಸಂಸ್ಥೆಗಳಲ್ಲಿ ಲೋಪವಾಗೋದು ನಿಜ, ಹಿಂದೆ ಬ್ಯಾಂಕ್ ದಿವಾಳಿಯಾಗಿದ್ದು, ಇನ್ನೂ ಕಪ್ಪುಚುಕ್ಕೆಯಾಗಿ ಕಾಡುತ್ತಿದೆ ಎಂಬುದು ಸರಿಯಲ್ಲ, ರೈತರು ಪಡೆಯುವ ಸಾವಿರಾರು ರೂ ಸಾಲ ವಾಪಸ್ಸಾಗದೇ ಸಂಕಷ್ಟ ಎದುರಾಗಿರಬಹುದು ಎಂದರು.
ಆದರೆ ವಾಣಿಜ್ಯ ಬ್ಯಾಂಕುಗಳಲ್ಲೂ ಮಲ್ಯ,ನೀರವ್ ಮೋದಿಯಂತಹವರು ನಮ್ಮಂತಹ ಮಧ್ಯಮವರ್ಗದವರು, ನಿವೃತ್ತರು ಇಟ್ಟ ಉಳಿತಾಯದ ಹಣ ಸಾವಿರಾರು ಕೋಟಿಗಟ್ಟಲೆ ಸಾಲವಾಗಿ ಪಡೆದು ಓಡಿಹೋಗಿಲ್ಲವೇ ಎಂದು ಪ್ರಶ್ನಿಸಿದರು.
ಬ್ಯಾಂಕ್ ಸದೃಢ
ಅನುಮಾನ ಬೇಡ
ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬ್ಯಾಂಕ್ ಸದೃಢವಾಗಿದೆ, ಸಾವಿರಾರು ಕೋಟಿ ಸಾಲವನ್ನು ರೈತರು, ಮಹಿಳೆಯರಿಗೆ ನೀಡಿದ್ದೇವೆ, ಮರುಪಾವತಿಯಲ್ಲೂ ದೇಶಕ್ಕೆ ನಂ.1 ಆಗಿದ್ದೇವೆ, ಠೇವಣಿ ಇಡಲು ಅನುಮಾನ ಬೇಡ ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲರೊಬ್ಬರೂ ಸ್ವಯಂಪ್ರೇರಿತರಾಗಿ ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ, ಇದು ಮತ್ತಷ್ಟು ಮಂದಿ ಇಲ್ಲಿ ಠೇವಣಿ ಇಡಲು ಪ್ರೇರಣೆ ನೀಡಿದಂತಾಗಿದೆ ಎಂದು ಧನ್ಯವಾದ ಸಲ್ಲಿಸಿದರು.
ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‍ಕುಮಾರ್, ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು ವಾಣಿಜ್ಯ ಬ್ಯಾಂಕುಗಳಲ್ಲಿ ವಹಿವಾಟು ನಡೆಸುವ ಅನೇಕರು ಇರುವಾಗ ಜಯರಾಮರೆಡ್ಡಿಯವರು ಡಿಸಿಸಿ ಬ್ಯಾಂಕಿನ ರೈತರು,ಮಹಿಳೆಯರ ಸ್ವಾವಲಂಬಿ ಬದುಕಿನ ಕಾಳಜಿ ಗಮನಿಸಿ ಇಲ್ಲಿ ಠೇವಣಿ ಇಟ್ಟಿದ್ದಾರೆ ಅವರಿಗೆ ಬ್ಯಾಂಕ್ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ನಿರ್ದೇಶಕ ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ನೀಡುತ್ತದೆ, ಜನ ಉಳಿತಾಯದ ಹಣ ಇಲ್ಲಿ ಇಡುವ ಮೂಲಕ ಮತ್ತಷ್ಟು ತಾಯಂದಿರು,ರೈತರಿಗೆ ಆರ್ಥಿಕ ನೆರವು ಸಿಗಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ, ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಬ್ಯಾಂಕಿನ ಎಜಿಎಂಗಳಾದ ಶಿವಕುಮಾರ್, ಖಲೀಮುಲ್ಲಾ, ನಾಗೇಶ್, ಹುಸೇನ್ ದೊಡ್ಡಮನಿ,ಬ್ಯಾಂಕಿನ ಸಿಬ್ಬಂದಿ ತಿಮ್ಮಯ್ಯ, ಮಂಗಳಗೌರಮ್ಮ,ದೀಪಿಕಾ, ಪದ್ಮಮ್ಮ, ಮಮತಾ, ಶುಭಾ,ರತ್ನಾ,ಸತೀಶ್,ಹ್ಯಾರಿಸ್, ಜಬ್ಬಾರ್,ಸಮೀಉಲ್ಲಾ ಮತ್ತಿತರರು ಹಾಜರಿದ್ದರು.