ಡಿಸಿಸಿ ಬ್ಯಾಂಕ್ ಶಾಖೆಯಿಂದ ಸಾಲ ಪಡೆಯಲು ಕೆಲವು ರೈತರು ನಕಲಿ ದಾಖಲೆಗಳನ್ನು ನೀಡಿ ಸಿಕ್ಕಿಬಿದ್ದಿದ್ದಾರೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಡಿಸಿಸಿ ಬ್ಯಾಂಕ್ ಶಾಖೆಯಿಂದ ಸಾಲ ಪಡೆಯಲು ಕೆಲವು ರೈತರು ನಕಲಿ ದಾಖಲೆಗಳನ್ನು ನೀಡಿ ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲಿ ಕೆಲವರು ಬ್ಯಾಂಕ್ ಸಾಲ ಪಡೆಯಲು ನೀಡಲಾಗಿದ್ದ ನಕಲಿ ದಾಖಲೆ ಪತ್ರಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ಬಂಗವಾದಿ ಗ್ರಾಮದ ಬಿ.ಎಂ.ಶಂಕರೇಗೌಡ, ಬಿ.ಎಂ.ಶಿವರಾಮೇಗೌಡ ಎಂಬುವವರು ಕುರಿ ಸಾಕಾಣಿಕೆಗೆ ರೂ.6 ಲಕ್ಷ ಸಾಲ ಪಡೆಯಲು ಹಾಗೂ ಶೇಷಾಪುರ ಗ್ರಾಮದ ವೆಂಕಟಮ್ಮ, ನಂಜುಂಡಪ್ಪ, ಮಂಜುನಾಥ ಎಂಬುವವರು ರೂ.10 ಲಕ್ಷ ಬೆಳೆ ಸಾಲ ಪಡೆಯಲು ನಕಲಿ ದಾಖಲೆ ಪತ್ರಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಸಾಲಕ್ಕಾಗಿ ಬ್ಯಾಂಕ್‍ಗೆ ಸಲ್ಲಿಸಲಾಗಿದ್ದ ದಾಖಲೆ ಪತ್ರಗಳನ್ನು ಬ್ಯಾಂಕ್ ಸಿಬ್ಬಂದಿ ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲಿಸಿದಾಗ ಪ್ರಕರನ ಬೆಳಕಿಗೆ ಬಂದಿತು. ಉಪ ನೋಂದಣಾಧಿ ಕಚೇರಿಯಲ್ಲಿ ಬ್ಯಾಂಕ್‍ಗೆ ನೀಡಲಾಗಿರುವ ದಾಖಲೆಗಳ ದಾಖಲಾತಿಯೇ ಆಗಿಲ್ಲ. ದಾಖಲೆ ಪತ್ರಗಳ ಮೇಲೆ ಉಪ ನೋಂದಣಾಧಿಕಾರಿ ಕಚೇರಿ ಸೀಲ್ ಹಾಕಲಾಗಿದೆ. ಉಪ ನೋಂದಣಾಧಿಕಾರಿ ಸಹಿಯನ್ನು ನಕಲು ಮಾಡಲಾಗಿದೆ. ನಕಲಿ ಜಮೀನು ಪರಿವರ್ತನಾ ಪತ್ರವನ್ನೂ ಸಹ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.
ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ಸಾಲಕ್ಕಾಗಿ ಅಡ ಇಡುವ ಕಾಗದ ಪತ್ರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಅನುಮಾನ ಬಂದಲ್ಲಿ ಕಡ್ಡಾಯವಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಿ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸಲಹೆ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡಿ,್ಡ ಮುಖಂಡ ಪಾಳ್ಯ ಗೋಪಾಲರೆಡ್ಡಿ ಇದ್ದರು
.