ಡಿಸಿಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಸೇವೆಯ ಅನಾವರಣ ಸಮಾಜದ ಕಟ್ಟಕಡೆ ವ್ಯಕ್ತಿಗೂ ಸೇವೆ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ತಲುಪಿಸುವ ಸಂಕಲ್ಪದೊಂದಿಗೆ ಡಿಜಟಲೀಕರಣದ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮುನ್ನುಡಿ ಬರೆದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಬುಧವಾರ ಬ್ಯಾಂಕಿನ ಸಭಾಂಗಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಮಂಜೂರಾಗಿರುವ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿ, ವಾಣಿಜ್ಯ ಬ್ಯಾಂಕುಗಳಿಗಿಂತ ಅತ್ಯುತ್ತಮ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುವ ಧ್ಯೇಯ ನಮ್ಮದಾಗಿದ್ದು, ಗ್ರಾಹಕರು ಠೇವಣಿ ಇಡುವ ಮೂಲಕ ಬ್ಯಾಂಕಿಗೆ ಶಕ್ತಿ ತುಂಬಬೇಕು ಎಂದರು.
ಸಹಕಾರಿ ವ್ಯವಸ್ಥೆ ಎಂದರೆ ಬುಕ್ ಅಡ್ಜೆಸ್ಟ್‍ಮೆಂಟ್ ಎಂಬ ಅಪವಾದವಿದ್ದು, ಇದನ್ನು ದೂರ ಮಾಡುವ ಮೂಲಕ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಟಲೀಕರಣಗೊಳಿಸಲಾಗಿದೆ, ನಮ್ಮ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರವಾನಗಿಯೊಂದಿಗೆ ಸೇವೆ ಸಲ್ಲಿಸುತ್ತಿದ್ದು, ಪಾರದರ್ಶಕತೆ ಕಾಪಾಡಲಾಗಿದೆ ಎಂದರು.

ಇಂಟರ್‍ನೆಟ್ ಬ್ಯಾಂಕಿಂಗ್ ಶೀಘ್ರ ಅನುಷ್ಟಾನ

ಕಳೆದ ಏಳೂವರೆ ವರ್ಷಗಳ ಹಿಂದೆ ನಬಾರ್ಡ್ ಕಚೇರಿಗೆ ಹೋದರೆ ನಮ್ಮನ್ನು ನೋಡಿ ನಗುತ್ತಿದ್ದರು, ಒಂದು ಸಭೆಯಲ್ಲಿ 30 ಲಕ್ಷ ರೂ ಡಿಸಿಸಿ ಬ್ಯಾಂಕಿಗೆ ನೀಡಲು ನಬಾರ್ಡ್ ಹೆದರಿತ್ತು ಇಂತಹ ಅವಮಾನವನ್ನು ಸವಾಲಾಗಿ ಸ್ವೀಕರಿಸಿ 25 ದಿನಗಳಲ್ಲಿ ಕೋರ್ ಬ್ಯಾಂಕಿಂಗ್ ಮಾಡಿ ನಮ್ಮ ಸಾಮಥ್ರ್ಯವನ್ನು ತೋರಿಸಿದೆವು ಎಂದು ಸ್ಮರಿಸಿದರು.
ದಿವಾಳಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಿಸಿಸಿ ಬ್ಯಾಂಕಿನೊಂದಿಗೆ ವಿಲೀನದ ಪ್ರಸ್ತಾಪ ಹೊಂದಿದ್ದ ಕೋಲಾರ ಡಿಸಿಸಿ ಬ್ಯಾಂಕನ್ನು ನಮ್ಮ ಆಡಳಿತ ಮಂಡಳಿ ಸಹಕಾರದೊಂದಿಗೆ ಉಳಿಸಿ ಇಷ್ಟೊಂದು ಎತ್ತರಕ್ಕೆ ಬೆಳೆಸಿದ್ದೇವೆ, ನಾನು ಅಧ್ಯಕ್ಷನಾದಾಗ ದಿವಾಳಿ ಬ್ಯಾಂಕಿನ ಅಧ್ಯಕ್ಷನೆಂದು ನಗುತ್ತಿದ್ದವರು ಇಂದು ಗೌರವದಿಂದ ಕೂರಿಸಿ ಮಾತನಾಡುವಂತೆ ಮಾಡಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಬ್ಯಾಂಕ್ ನೆಫ್ಟ್, ಆರ್‍ಟಿಜಿಎಸ್ ಪೇಮೆಂಟ್ ಸಿಸ್ಟಮ್, ಬೆನಿಫಿಟ್ ಟ್ರಾನ್ಸ್‍ಫರ್, ಆಧಾರ್ ಬೇಸ್‍ಡ್ ಪೇಮೆಂಟ್, ಎಸ್‍ಎಂಎಸ್ ಅಲರ್ಟ್, ರೂಪೆಕಾರ್ಡ್ ನೀಡಿಕೆ, ಚೆಕ್ ಟ್ರಾನ್ಸಕ್ಷನ್ ಸಿಸ್ಟಮ್, ಮೈಕ್ರೋ ಎಟಿಎಂ, ಮೊಬೈಲ್ ಎಟಿಎಂ ವ್ಯಾನ್ ಸೇರಿದಂತೆ ಎಲ್ಲಾ ಸೌಲಭ್ಯ ಹೊಂದಿದೆ ಎಂದು ತಿಳಿಸಿದರು.
ಇಂಟರ್‍ನೆಟ್ ಬ್ಯಾಂಕಿಂಗ್ ಅನುಷ್ಟಾನ ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ ಎಂದ ಅವರು, ನಮ್ಮದು ಬಡವರ ಬ್ಯಾಂಕ್, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಶುಭಘಳಿಗೆಯಾಗಿದ್ದು, ರೈತರ ನೆರವಿಗೆ ನಮ್ಮ ಆಡಳಿತ ಮಂಡಳಿ, ಸಿಬ್ಬಂದಿ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
5 ಲಕ್ಷ ಮಹಿಳೆಯರು, 35 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಸಾಲ ಸೌಲಭ್ಯ ಒದಗಿಸಿದ ಹೆಮ್ಮೆ ನಮಗಿದೆ, ಇದೀಗ ಡಿಜಟಲೀಕರಣದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ತಲುಪಿಸಲು ಧಾಪುಗಾಲು ಇಡುತ್ತಿದ್ದೇವೆ ಎಂದರು.
ಸಹಕಾರಿ ಬ್ಯಾಂಕ್ ಮಾತ್ರ ಬಡವರು,ರೈತರ ಕೈಹಿಡಿಯುತ್ತದೆ ಎಂಬ ಸತ್ಯ ಅರಿತು ಇಲ್ಲೇ ಠೇವಣಿ ಇಡಿ ಎಂದು ಮನವಿ ಮಾಡಿದ ಅವರು, ಕೆಲವರು ಠೇವಣಿ ಇಡಲು ವಾಣಿಜ್ಯ ಬ್ಯಾಂಕ್, ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್ ಎಂಬ ಮನಸ್ಥಿತಿಯಲ್ಲಿದ್ದಾರೆ ಅಂತಹ ಮನೋಭಾವದಿಂದ ಹೊರಬನ್ನಿ, ಠೇವಣಿ ಸಂಗ್ರಹ ಹೆಚ್ಚಿದಷ್ಟು ಮತ್ತಷ್ಟು ಬಡವರು,ರೈತರಿಗೆ ಸಾಲ ಸೌಲಭ್ಯ ವಿಸ್ತರಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ನಾಗನಾಳ ಸೋಮಣ್ಣ, ಅನಿಲ್ ಕುಮಾರ್,ಹನುಮಂತರೆಡ್ಡಿ, ಕೆ.ವಿ.ದಯಾನಂದ್, ವೆಂಕಟರೆಡ್ಡಿ, ನಾಗಿರೆಡ್ಡಿ, ಗೋವಿಂದರಾಜ್,ವೃತ್ತಿಪರ ನಿರ್ದೇಶಕ ಮಹಮದ್ ಇಲಿಯಾಸ್, ಬ್ಯಾಂಕಿನ ಎಂಡಿ ವೆಂಕಟೇಶಪ್ಪ, ಮುಖಂಡ ಎಸ್.ವಿ.ಸುಧಾಕರ್, ಸಿಬ್ಬಂದಿ ಪದ್ಮಮ್ಮ ಹ್ಯಾರೀಸ್, ಜಬ್ಬಾರ್ ಮತ್ತಿತರರಿದ್ದರು
.