ರೈತರ ಕೃಷಿ ಕಾರ್ಯಕ್ಕೆ ಡಿಸಿಸಿ ಬ್ಯಾಂಕ್ ತಲಾ ರೂ.5 ಲಕ್ಷ ಬಡ್ಡಿರಹಿತ ಸಾಲ ನೀಡಬೇಕು: ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರೈತರು ಕೃಷಿ ಕಾರ್ಯಕ್ಕೆ ಬಳಸಿಕೊಳ್ಳಲು ಡಿಸಿಸಿ ಬ್ಯಾಂಕ್ ವತಿಯಿಂದ ತಲಾ ರೂ.5 ಲಕ್ಷ ಬಡ್ಡಿರಹಿತ ಸಾಲ ನೀಡಬೇಕುಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ 96 ಸ್ತ್ರೀ ಶಕ್ತಿ ಸಂಘಗಳಿಗೆ ರೂ.4.80 ಕೋಟಿ ಸಾಲ ವಿತರಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿ ಇನ್ನಷ್ಟು ಸ್ತ್ರೀ ಶಕ್ತಿ ಸಂಘಗಳನ್ನು ಪ್ರಾರಂಭಿಸಬೇಕು. ಅವರು ಆರ್ಥಿಕ ಚಟುವಟಿಕೆ ಕೈಗೊಳ್ಳಲು ಪೂರಕವಾಗಿ ಬಡ್ಡಿ ರಹಿತ ಸಾಲ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಮಹಿಳೆಯರ ಟನ್‍ಗಟ್ಟಲೆ ಚಿನ್ನ, ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳ ದಾಸ್ತಾನಿನಲ್ಲಿದೆ. ಅದೆಷ್ಟೋ ಮಹಿಳೆಯರು ಬಡ್ಡಿ ಪಾವತಿಸಲಾಗದೆ ಚಿನ್ನದ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಬಡ್ಡಿ, ಚಕ್ರಬಡ್ಡಿ ನೀಡಲಾಗದ ಎಷ್ಟೋ ಮಂದಿ ಖಾಸಗಿ ಲೇವಾದೇವಿಗಾರರ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಇಂಥ ಪರಿಸ್ಥಿತಿಯಿಂದ ಬಡವರನ್ನು ಪಾರುಮಾಡಲು ಬಡ್ಡಿರಹಿತ ಸಾಲ ವ್ಯವಸ್ಥೆ ಜಾರಿಗೆ ತರಲಾಯಿತು ಎಂದು ಹೇಳಿದರು.
ಸ್ತ್ರೀ ಶಕ್ತಿ ಸಂಘದ ಸದಸ್ಯರು ಡಿಸಿಸಿ ಬ್ಯಾಂಕ್‍ನಲ್ಲಿ ಖಾತೆ ತೆರೆದು ಹಣ ಉಳಿತಾಯ ಮಾಡುವುದರ ಮೂಲಕ ಬ್ಯಾಂಕ್ ಬೆಳೆಯಲು ಸಹಕರಿಸಬೇಕು. ಸಾಲ ಪಡೆದುಕೊಳ್ಳುವುದು ಮಾತ್ರವಲ್ಲದೆ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗಲು ಖಾತೆದಾರರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಉಪಾಧ್ಯಕ್ಷ ಸುಬ್ಬರೆಡ್ಡಿ, ನಿರ್ದೇಶಕರಾದ ಮೋಹನ್, ಶಂಕರ್ ಪ್ರಸಾದ್, ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ರಾಮಾಂಜಲಸ್ವಾಮಿ, ನರೇಂದ್ರಬಾಬು, ರಮೇಶ್, ರಿಯಾಜ್ ಖಾನ್, ಸತ್ಯಣ್ಣ, ಕವಿತಮ್ಮ, ಈರಪ್ಪ ಇದ್ದರು.