ಡಿಸಿಸಿ ಬ್ಯಾಂಕ್ ದೇಶದಲ್ಲೇ ನಂ.1 ಗೌರವದಿಂದಾಗಿ ಜವಾಬ್ದಾರಿ ಹೆಚ್ಚಳ ಬಡವರ ಕೆಲಸ ಇನ್ನಷ್ಟು ಮಾಡಿ: ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಡಿಸಿಸಿ ಬ್ಯಾಂಕ್ ಆಡಳಿತ ಇಡೀ ದೇಶದ ಗಮನ ಸೆಳೆಯುವಂತೆ ಮಾಡಿದ್ದೀರಿ, ಈಗ ಸಿಕ್ಕಿರುವ ನಂ.1 ಸ್ಥಾನ ನಿಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ, ರೈತರು,ಬಡವರ ಪರ ಇನ್ನೂ ಹೆಚ್ಚು ಕೆಲಸ ಮಾಡಿ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕಿವಿಮಾತು ಹೇಳಿದರು.
ತಾಲ್ಲೂಕಿನ ವೇಮಗಲ್ ಸೊಸೈಟಿ ಆಶ್ರಯದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ಕೆಸಿಸಿ ಸಾಲ ವಿತರಣೆ ಹಾಗೂ ದೇಶದಲ್ಲೇ ನಂ.1 ಸಾಧನೆಗಾಗಿ ಮತ್ತು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಶಾಸಕ ಶ್ರೀನಿವಾಸಗೌಡರು ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇನ್ನೇನು ಮುಳುಗಿ ಹೋಯಿತು ಎಂದು ಭಾವಿಸಿದ್ದೆ, ಗೋವಿಂದಗೌಡರು ಅಧ್ಯಕ್ಷರಾಗಲು ಮೊದಲಬಾರಿ ವಿರೋಧಿಸಿಯೂ ಇದ್ದೆ, ಆದರೆ ಇಂದು ಅವರ ನೇತೃತ್ವದಲ್ಲೇ ಬ್ಯಾಂಕ್ ದೇಶದಲ್ಲೇ ನಂ.1 ಆಗಿರುವುದು ಒಬ್ಬ ಸಹಕಾರಿಯಾಗಿ ನನಗೆ ಗರ್ವಪಡುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸುದರ್ಶನ್ ಮಾತನಾಡಿ, ಸಹಕಾರಿ ರಂಗ ಯಾವ ಪ್ರಮಾಣದಲ್ಲಿ ಬೆಳೆಯಬೇಕಿತ್ತೋ ಆ ರೀತಿ ಬೆಳೆಯಲಿಲ್ಲ, ಬಹುತೇಕ ಸಂಸ್ಥೆಗಳು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಲಾಗಲೇ ಇಲ್ಲ ಆದರೆ ಕೋಲಾರ ಡಿಸಿಸಿ ಬ್ಯಾಂಕ್ ಇಡೀ ದೇಶವೇ ಗುರುತಿಸುವ ಕೆಲಸ ಮಾಡಿದೆ, ಗ್ರಾಮೀಣಭಾಗದ ಒಂದೊಂದು ಸೊಸೈಟಿ ಮೂಲಕ 15 ಕೋಟಿ, 30 ಕೋಟಿ ಸಾಲ ನೀಡಿರುವುದು ಸಾಮಾನ್ಯದ ವಿಷಯವಲ್ಲ, ಇಷ್ಟೊಂದು ವೇಗವಾಗಿ ಬ್ಯಾಂಕ್ ಬೆಳೆಯಲು ಆಡಳಿತ ಮಂಡಳಿ ಪರಿಶ್ರಮವಿದೆ ಎಂದು ಅಭಿನಂದಿಸಿದರು.
ರಸ್ತೆ ದುರಸ್ಥಿಗೆಹಣ
ಬಿಡುಗಡೆ ಮಾಡಿಸಿ
ವೇಮಗಲ್‍ನಿಂದ ಕೋಲಾರಕ್ಕೆ ಹೋಗುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ, ರಸ್ತೆ ಅಭಿವೃದ್ದಿ ಕಾರ್ಯ ಶೀಘ್ರವಾಗಿ ನಡೆಯಬೇಕಾಗಿದ್ದು, ಈ ಬಾರಿಯ ಬಜೆಟ್‍ನಲ್ಲಿ ಅಗತ್ಯ ಪ್ರಮಾಣದ ಹಣ ಬಿಡುಗಡೆ ಮಾಡಿಸಿ ಎಂದು ಶಾಸಕರಿಗೆ ಸುದರ್ಶನ್ ಮನವಿ ಮಾಡಿದರು.
ಪ್ರಾಮಾಣಿಕವಾಗಿ
ಬಡವರ ಕೆಲಸ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಬ್ಯಾಂಕ್ ದೇಶಕ್ಕೆ ನಂ.1 ಆಗಿರುವುದು ಜವಾಬ್ದಾರಿ ಹೆಚ್ಚಿಸಿದೆ, ಇನ್ನು ಮುಂದೆಯೂ ಬಡವರು, ರೈತರು,ತಾಯಂದಿರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.
ರೈತರೊಬ್ಬರು ಬೆಳೆ ಸಾಲವನ್ನು ಒಂದೇ ಕಂತಿನಲ್ಲಿ ಡ್ರಾ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದಾಗ, ಉತ್ತರಿಸಿದ ಗೌಡರು, ಬೆಳೆಗಾಗಿ ಬೆಳೆ ಸಾಲ ಪಡೆಯುತ್ತೀರಿ, ಆರ್‍ಬಿಐ ನಿರ್ದೇಶನದಂತೆ ಭೂಮಿ ಸಿದ್ದತೆ, ನಾಟಿ ಮಾಡಲು ಮತ್ತು ಬೆಳೆ ಬೆಳೆದಂತೆ ಹಂತಹಂತವಾಗಿ ಎಟಿಎಂ ಮೂಲಕ ಒಂದು ಬಾರಿಗೆ 20 ಸಾವಿರ ಹಣ ಡ್ರಾಗೆ ಅವಕಾಶವಿದೆ, ಆದರೂ ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಿದ್ದೇವೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದು ಆ ಹಣವನ್ನು ವಾಣಿಜ್ಯ ಬ್ಯಾಂಕಿನಲ್ಲಿ ಠೇವಣಿ ಇಡುವ ಪಾಪದ ಕೆಲಸ ಮಾಡಬೇಡಿ ಎಂಪಿಸಿಎಸ್ ವಹಿವಾಟು ನಮ್ಮಲ್ಲೇ ನಡೆಸಿ, ಸಾಲ ನೀಡುವುದು ನಾವು ಠೇವಣಿ ಬೇರೆ ಬ್ಯಾಂಕಿನಲ್ಲಿ ಏಕೆ ಇಡುತ್ತೀರಿ ಎಂದು ಪ್ರಶ್ನಿಸಿದರು.
ಬ್ಯಾಂಕ್ ನಿರ್ದೇಶಕ ಅನಿಲ್‍ಕುಮಾರ್ ಮಾತನಾಡಿ, 7 ವರ್ಷಗಳ ಹಿಂದೆ ಐಸಿಯುನಲ್ಲಿದ್ದ ಡಿಸಿಸಿ ಬ್ಯಾಂಕ್ ಇಂದು ಮಾದರಿಯಾಗಿದೆ 44 ಕೋಟಿ ನಷ್ಟ ತುಂಬಿ ಲಾಭಕ್ಕೆ ತಂದಿದ್ದೇವೆ, ಸಾಲ ಮನ್ನಾದಿಂದ ರೈತರಿಗೆ 320 ಕೋಟಿ ರೂ ಲಾಭವಾಗಿದೆ, ವೈದ್ಯನಾಥನ್ ವರದಿ, ಆಡಳಿತ ಮಂಡಳಿ ಪ್ರಾಮಾಣಿಕ ಪರಿಶ್ರಮದಿಂದ ಬ್ಯಾಂಕ್ ಇಂದು ನಂ.1 ಆಗಿದೆ ಎಂದರು.
ನಿರ್ದೇಶಕ ನಾಗನಾಳ ಸೋಮಣ್ಣ, ವೇಮಗಲ್ ಸೊಸೈಟಿಯಿಂದ ಈಗಾಗಲೇ 6.50 ಕೋಟಿ ಸಾಲ ನೀಡಿದ್ದು, ಈಗ 1.32 ಕೋಟಿ ನೀಡುತ್ತಿದ್ದೇವೆ, ಬ್ಯಾಂಕ್ ವಿರುದ್ದ ಮಾಡುತ್ತಿರುವ ಟೀಕೆಗಳಿಗೆ ನಾವು ದಕ್ಷತೆ,ಪ್ರಾಮಾಣಿಕವಾಗಿ ರೈತರು,ತಾಯಂದಿರಿಗೆ ನೆರವಾಗುವ ಮೂಲಕ ಉತ್ತರ ನೀಡಿದ್ದೇವೆ, ಬ್ಯಾಂಕ್ ದೇಶದ ನಂ.1 ಆಗಿದ್ದು, ಇದೇ ಟೀಕಾಕಾರರಿಗೆ ನಮ್ಮ ಉತ್ತರ ಎಂದರು.
ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ರಾಮಸ್ವಾಮಿ, ಮುಖಂಡರಾದ ಬೈಚಪ್ಪ, ಬೆಳಮಾರನಹಳ್ಳಿ ಆನಂದ್‍ಕುಮಾರ್, ಮಾಜಿ ಅಧ್ಯಕ್ಷ ಪಿ.ವೆಂಕಟೇಶ್, ರವಿಕುಮಾರ್, ಸಂದಪ್ಪ,ಬೇರಾರೆಡ್ಡಿ, ಗ್ರಾ.ಪಂ ಸದಸ್ಯ ರಮೇಶ್, ಮುಖಂಡರು ಹಾಗೂ ಸೊಸೈಟಿ ನಿರ್ದೇಶಕರಾದ ಬೋಚಣ್ಣ, ಚೌಡಪ್ಪ, ರವೀಂದ್ರ, ರಾಮಚಂದ್ರಪ್ಪ, ಚಲಪತಿ, ವೀರೇಗೌಡ,ರಾಮಣ್ಣ,ಮುನಿವೆಂಕಟಪ್ಪ, ಶ್ರೀನಿವಾಸಪ್ಪ, ಮಂಜುನಾಥ್, ವೈ.ಎಂ.ಮಂಜುನಾಥ್, ಸೊಸೈಟಿ ಸಿಇಒ ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.