ಕೋಲಾರ:- ಕೃಷಿ,ತೋಟಗಾರಿಕೆಗೆ ಸಂಬಂಧಿಸಿದಂತೆ ರೈತರಿಗೆ ಅಗತ್ಯವಾದ ಎಲ್ಲಾ ಸಲಕರಣೆಗಳು ಒಂದೆಡೆ ಸಿಗುವಂತೆ ಬೃಹತ್ ಮಳಿಗೆ ಆರಂಭಿಸಿ, ಖಾಸಗಿಯವರಿಂದ ರೈತರಿಗಾಗುತ್ತಿರುವ ವಂಚನೆ ತಪ್ಪಿಸಿ ಎಂದು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಶಾಸಕ ಕೆ.ಆರ್.ರಮೇಶ್‍ಕುಮಾರ್ ಸಲಹೆ ನೀಡಿದರು.
ತಾಲ್ಲೂಕಿನ ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಡಿಸಿಸಿ ಬ್ಯಾಂಕಿನಿಂದ 54 ಮಹಿಳಾ ಸಂಘಗಳಿಗೆ ಸಾಲ ಹಾಗೂ 86 ಮಂದಿ ರೈತರಿಗೆ ಸುಮಾರು 5 ಕೋಟಿ ರೂಗಳ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಬಿತ್ತನೆ ಬೀಜದಿಂದ ಕೀಟನಾಶಕ,ಗೊಬ್ಬರ,ಕೃಷಿಗೆ ಸಂಬಂಧಿಸಿದ ಎಲ್ಲಾ ಸಲಕರಣೆಗಳು ಒಂದೇ ಸೂರಿನಡಿ ಸಿಗಬೇಕು, ನೇರ ಕಂಪನಿಗಳೊಂದಿಗೆ ಸಂಪರ್ಕ ಪಡೆದು ಖಾಸಗಿಯವರಿಗಿಂತ ಕಡಿಮೆ ಬೆಲೆಗೆ ರೈತರಿಗೆ ಸಿಗುವಂತೆ ಮಾಡಿ, ರೈತರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಕಲ್ಪಿಸಿ ಜತೆಗೆ ರೈತರ ತರಕಾರಿ ಉತ್ಪನ್ನಗಳ ಸಂಗ್ರಹಣೆಗೆ ಶೀಥಲೀಕರಣ ಘಟಕಗಳನ್ನು ಸ್ಥಾಪಿಸಲು ಆಲೋಚನೆ ನಡೆಸಿ ಎಂದು ಸೂಚಿಸಿದರು.
ಕೃಷ್ಣಪ್ಪ ಹೆಸರಲ್ಲಿ ಕೌಶಲ್ಯ ಕೇಂದ್ರ
ಉತ್ತಮ ಸಹಕಾರಿಯಾಗಿದ್ದ ಅಣ್ಣಿಹಳ್ಳಿ ಕೃಷ್ಣಪ್ಪ ಅವರ ನೆನಪಿನಲ್ಲಿ ಮುಂದಿನ ಯುಗಾದಿ ಒಳಗಾಗಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು,ಯುವಕರಿಗೆ ವಿವಿಧ ಉದ್ಯೋಗಗಳಿಗೆ ಅಗತ್ಯವಾದ ಕೌಶಲ್ಯ ತರಬೇತಿ ನೀಡುವ ಕೇಂದ್ರವನ್ನು ಅವರೇ ಸೊಸೈಟಿಗೆ ಒದಗಿಸಿರುವ 4 ಎಕರೆ ಜಾಗದಲ್ಲಿ ನಿರ್ಮಿಸಿ ಎಂದು ಸಲಹೆ ನೀಡಿ, ಆರಂಭದ ಶೂರತ್ವಬೇಡ ಕೃಷ್ಣಪ್ಪ ಅವರ ಋಣ ತೀರಿಸಿ ಎಂದರು.
ಶೂಟ್,ಕಾರು,ಇಂಗ್ಲೀಷ್ ಬಲ್ಲವರಿಗೆ,ಟೋಪಿ ಹಾಕುವವರಿಗೆ ಕೋಟಿಕೋಟಿ ಸಾಲವನ್ನು ವಾಣಿಜ್ಯ ಬ್ಯಾಂಕುಗಳು ನೀಡುತ್ತವೆ, ಅಂತಹ ಬ್ಯಾಂಕುಗಳಲ್ಲಿ ಸರ್ಕಾರದ 4 ಸಾವಿರ ಕೋಟಿ ವಿವಿಧ ಇಲಾಖೆಗಳ ಹಣ ಇಡುತ್ತಾರೆ, ಸಣ್ಣ ರೈತರ ಬದುಕು ಹಸನು ಮಾಡುವ ಸಹಕಾರಿ ವ್ಯವಸ್ಥೆಯನ್ನು ನಂಬುವುದಿಲ್ಲ ಎಂದು ಕಿಡಿಕಾರಿದರು.
ವೈಜ್ಞಾನಿಕ ಸಾಲನೀತಿ ಆಲೋಚನೆಯೇ ಇಲ್ಲ
ಕುರಿ,ಕೋಳಿ,ಹಂದಿ ಸಾಕಾಣಿಕೆಯನ್ನು ವೈಜ್ಞಾನಿಕವಾಗಿ,ವ್ಯವಸ್ಥಿತವಾಗಿ ಪ್ರೋತ್ಸಾಹಿಸಿದ್ದೇ ಆದರೆ ಕೋಲಾರ ಜಿಲ್ಲೆ ಡೆನ್ಮಾರ್ಕ್ ಮಾದರಿಯಾಗುತ್ತದೆ ಎಂದು ತಿಳಿಸಿ, ಇದಕ್ಕೆ ಅಗತ್ಯ ಸಾಲ ಸೌಲಭ್ಯ ಒದಗಿಸಬೇಕು ಎಂದರು.
ಸಾಲ ನೀತಿ ವಿಚಾರದಲ್ಲಿ ಸರ್ಕಾರಗಳಿಗೆ ಜವಾಬ್ದಾರಿಯೇ ಇಲ್ಲ,ಸಾಲ ತೆಗೆದುಕೊಳ್ಳೋರು ಯಾರು? ಏತಕ್ಕಾಗಿ? ಸಾಲ ಯಾರು ತಗೋತಾರೆ? ಯಾವ ಯೋಜನೆಗೆ ಎಷ್ಟು ಸಾಲ ನೀಡಬೇಕು ಎಂಬ ವೈಜ್ಞಾನಿಕ ಆಲೋಚನೆ, ಸಾಲ ನೀತಿಯೇ ಇಲ್ಲ ಎಂದರು.
ವಾಣಿಜ್ಯ ಬ್ಯಾಂಕುಗಳಲ್ಲಿ ಕೇವಲ ದೊಡ್ಡಮನುಷ್ಯರು ಯಾವುದೋ ಪ್ರಾಜೆಕ್ಟ್ ಹೆಸರಲ್ಲಿ ಸಾಲ ಪಡೆದು ಆ ಪ್ರಾಜೆಕ್ಟ್ ಅವರೇ ಮುಳುಗಿಸಿ ಬ್ಯಾಂಕಿಗೆ ನಾಮ ಹಾಕುತ್ತಾರೆ ಅಂತೋರಿಗೆ ಸಾಲ ಸಿಗೋದು ಎಂದು ಟೀಕಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಶ್ರೀನಿವಾಸಗೌಡ, ಅಣ್ಣಿಹಳ್ಳಿ ಸೊಸೈಟಿಯಿಂದ ತಾವು ಅಂತರರಾಷ್ಟ್ರೀಯ ಸಹಕಾರ ಸಂಸ್ಥೆವರೆಗೂ ಬೆಳೆದದ್ದನ್ನು ತಿಳಿಸಿ, ಕೃಷ್ಣಪ್ಪ ಅವರು ಸಾಧನೆಯನ್ನು ಸ್ಮರಿಸಿದರು. ಜತೆಗೆ ಮಹಿಳೆಯರಷ್ಟೇ ಪುರುಷರೂ ಪಡೆದ ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡುವ ಬದ್ದತೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೃಷ್ಣಪ್ಪರ ನಿಸ್ವಾರ್ಥತೆ ಸಹಕಾರಿಗಳಿಗೆ ಆದರ್ಶ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಅಣ್ಣಿಹಳ್ಳಿ ಕೃಷ್ಣಪ್ಪ ಅವರು ಕಟ್ಟಿದ ಸೊಸೈಟಿ ಇದು, ಇಂದು 45 ಕೋಟಿ ಸಾಲ ನೀಡಿದ್ದೇವೆ, ಓರ್ವ ಮಹಿಳಾ ಸಂಘ ಅಥವಾ ರೈತರು ಯಾರೂ ಸಾಲ ಬಾಕಿ ಉಳಿಸಿಕೊಂಡಿಲ್ಲ, 40 ಹಳ್ಳಿಯ ಪ್ರತಿ ಕುಟುಂಬಕ್ಕೂ ಸಾಲ ತಲುಪಿಸುವ ಬದ್ದರೆ ನಮಗಿದೆ, ಎಂದರು.
ಸ್ವಾರ್ಥತೆ ತುಂಬಿರುವ ಸಮಾಜದಲ್ಲಿ ಕೃಷ್ಣಪ್ಪ ಅವರು ಗ್ರಾಮದ ಶಾಲೆಗೆ 20 ಎಕರೆ ಹಾಗೂ ಸೊಸೈಟಿಗೆ 4 ಎಕರೆ ಜಾಗ ಮಂಜೂರು ಮಾಡಿಸಿ ಹೋಗಿದ್ದಾರೆ, ಅಂತಹವರ ನೆನಪು ಚಿರಸ್ಥಾಯಿಯಾಗಿ ಉಳಿಯಲು ಶಾಶ್ವತವಾದ ಕೆಲಸ ಮಾಡಬೇಕಾಗಿದ್ದು, ಉತ್ತಮ ಕಾರ್ಯವೊಂದನ್ನು ಶಾಸಕದ್ವಯರು ಸೂಚಿಸಲಿ ಎಂದು ಕೋರಿದರು.
ಸೊಸೈಟಿ ಸಾಲ ನೀಡುತ್ತಿರುವುದರಿಂದ ಹೊರಗಿನ ಮೀಟರ್ ಬಡ್ಡಿ ದಂಧೆಕೋರರಿಗೆ ಇಂದು ಗ್ರಾಮಗಳಲ್ಲಿ ಕೆಲಸವಿಲ್ಲವಾಗಿದೆ,ತಾಯಂದಿರೂ ಸಹಾ ಪಡೆದ ಸಾಲವನ್ನು ಅಷ್ಟೇ ಬದ್ದತೆಯಿಂದ ಮರುಪಾವತಿ ಮಾಡಿದ್ದಾರೆ ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ, 10 ವರ್ಷಗಳ ಹಿಂದೆ ದಿವಾಳಿಯಾಗಿದ್ದ ಸೊಸೈಟಿ ಇಂದು 45 ಕೋಟಿ ಸಾಲ ನೀಡುವ ಶಕ್ತಿ ಗಳಿಸಿದೆ, ಅದೇ ರೀತಿ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ನಂ.1 ಆಗಿದೆ ಇದಕ್ಕೆ ಕಾರಣರಾದ ಬ್ಯಾಲಹಳ್ಳಿ ಗೋವಿಂದಗೌಡರ ಕಾರ್ಯ ಶ್ಲಾಘನೀಯ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, 1200 ಕೋಟಿ ಸಾಲ ನೀಡಿರುವ ಬ್ಯಾಂಕ್ ಕುರಿತು ಟೀಕಾಕಾರರಿಗೆ ಸಮರ್ಪಕ ಮಾರುಪಾವತಿಯ ಮೂಲಕ ತಾಯಂದಿರು ಉತ್ತರ ನೀಡಿದ್ದಾರೆ, ಮಹಿಳೆಯರೇ ಡಿಸಿಸಿ ಬ್ಯಾಂಕಿನ ಶಕ್ತಿ ಎಂದರು.
ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‍ಕುಮಾರ್, ಕಳೆದ 10 ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕಿನ ವಹಿವಾಟೇ 45 ಕೋಟಿ ಇರಲಿಲ್ಲ, ಆದರೆ ಇಂದು ಅಣ್ಣಿಹಳ್ಳಿ ಸೊಸೈಟಿ 45 ಕೋಟಿ ವಹಿವಾಟು ನಡೆಸುತ್ತಿದೆ, ಅಂತರರಾಷ್ಟ್ರೀಯ ಸಹಕಾರಿಯಾದ ಶ್ರೀನಿವಾಸಗೌಡರನ್ನು ಸಹಕಾರ ವಿಶ್ವದ ಸಹಕಾರ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹೆಗ್ಗಳಿಕೆ ಈ ಸೊಸೈಟಿಯದ್ದು ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಯೂನಿಯನ್ ನಿರ್ದೇಶಕ ಚೆಂಜಿಮಲೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‍ರೆಡ್ಡಿ,ರೈತ ಚಂದ್ರಶೇಖರ್, ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್,ಉಪಾಧ್ಯಕ್ಷೆ ವನಿತಾ, ಮುಖಂಡರಾದ ಅಗ್ನಿಹಳ್ಳಿ ನಾಗರಾಜ್, ನಿರ್ದೇಶಕರಾದ ಮುನಿವೆಂಕಟಪ್ಪ, ವಿ.ಬ್ಯಾಟಪ್ಪ,ವಿ.ಸುಬ್ರಮಣಿ,ಲಕ್ಷ್ಮಮ್ಮ, ಸಿಇಒ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
