ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಆರ್ಥಿಕ ವರ್ಷ ಮುಗಿಯಲು 3 ದಿನ ಬಾಕಿ ಇದೆ, ಹಗಲಿರುಳು ದುಡಿದು ಸಾಲ ವಸೂಲಾತಿ ಮಾಡಿ ಎನ್‍ಪಿಎ 2.5 ರಿಂದ 1.5ಕ್ಕೆ ಇಳಿಸಿದ್ದೆ ಆದರೆ ಇದು ದೇಶದ ಸಹಕಾರಿ ರಂಗದ ಇತಿಹಾಸದಲ್ಲೇ ಮೈಲಿಗಲ್ಲಾಗಲಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಅವಿಭಜಿತ ಜಿಲ್ಲೆಯ ಎಲ್ಲಾ ಡಿಸಿಸಿ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರೊಂದಿಗೆ ನಡೆಸಿದ ಈ ಆರ್ಥಿಕ ವರ್ಷದ ಕೊನೆಯ ಆನ್‍ಲೈನ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಮರ್ಕಕ ಸಾಲ ವಸೂಲಾತಿಗೆ ನಿಮಗೆ ನೀಡಿರುವ ಗುರಿ ಸಾಧಿಸಿ, ನಿಮಗೆ ಅನ್ನ ನೀಡಿರುವ ಬ್ಯಾಂಕನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಎದುರಾಗುವ ಟೀಕೆ,ವಿರೋಧಗಳಿಗೆ ಸೊಪ್ಪು ಹಾಕದಿರಿ ನಿಷ್ಕ್ರೀಯ ಆಸ್ತಿಯ ಮೌಲ್ಯ ಎನ್‍ಪಿಎ ಶೇ.1.5ಕ್ಕೆ ಇಳಿಸುವ ಮೂಲಕ ಇಡೀ ರಾಷ್ಟ್ರದಲ್ಲೇ ಸಿಕ್ಕಿರುವ ನಂ.1 ಬ್ಯಾಂಕ್ ಎಂಬ ಗೌರವ ಕಾಪಾಡಿಕೊಳ್ಳೋಣ ಎಂದು ತಾಕೀತು ಮಾಡಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲೇ ಹೊಸ ಆಯಾಮ
ಕಳೆದ ಏಳು ವರ್ಷಗಳ ಹಿಂದೆ ಕೇವಲ 15 ಕೋಟಿ ರೂ ಸಾಲ ನೀಡಿದ್ದ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಇಂದು 1500 ಕೋಟಿ ರೂ ಸಾಲ ನೀಡಿ ಎರಡೂ ಜಿಲ್ಲೆಯ ಬಡವರು,ರೈತರು, ತಾಯಂದಿರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ಬ್ಯಾಂಕಿಂಗ್ ಇತಿಹಾಸದಲ್ಲೇ ಹೊಸ ಆಯಾಮ ಸೃಷ್ಟಿಸಿದೆ ಎಂದರು.
ಕಳೆದ ವರ್ಷ ಎನ್‍ಪಿಎ 2.5ಕ್ಕೆ ಇಳಿದಾಗ ಇಡೀ ದೇಶವೇ ನಮ್ಮತ್ತ ನೋಡಿತ್ತು, ಸಹಕಾರಿ ರಂಗದ ಇತಿಹಾಸದಲ್ಲಿ ಕೋವಿಡ್ ನಡುವೆಯೂ ನಾವು ದಾಖಲೆ ಬರೆದಿದ್ದೆವು ಎಂದ ಅವರು, ಈ ಬಾರಿಯೂ ನಮ್ಮ ಸಾಧನೆಗೆ ಹಿನ್ನಡೆಯಾಗಬಾರದು ಎಂದರು.
ಸಾಲ ವಸೂಲಾತಿ ಅಗ್ನಿಪರೀಕ್ಷೆ
ಆರ್ಥಿಕ ವರ್ಷದ ಅಂತ್ಯಕ್ಕೆ ಕೇವಲ 3 ದಿನವಿದ್ದು, ಇದನ್ನು ಅಗ್ನಿ ಪರೀಕ್ಷೆ ಎಂದು ಭಾವಿಸಿರಿ, ಬ್ಯಾಂಕಿನ ಋಣದಲ್ಲಿ ನೀವಿದ್ದೀರಿ ಎಂಬುದನ್ನು ಮರೆಯದಿರಿ ನಿಮ್ಮ ಈ ಮೂರುದಿನಗಳ ಅವಿರತ ಶ್ರಮ ಬ್ಯಾಂಕಿನ ಗೌರವವನ್ನು ಇಡೀ ದೇಶವೇ ನೋಡುವಂತೆ ಮಾಡಬಹುದಾಗಿದೆ ಎಂದು ಕಿವಿಮಾತು ಹೇಳಿದರು.
ಸಾಲ ಪಡೆದವರ ಮನವೊಲಿಸಿ, ಅವರ ಮನೆ ಬಾಗಿಲಿಗೆ ಹೋಗಿ, ಪರಿಸ್ಥಿತಿಯ ಕುರಿತು ಮನಮುಟ್ಟುವಂತೆ ತಿಳಿಹೇಳಿ ಎಂದು ಸೂಚಿಸಿದ ಅವರು, ಸಾಲ ವಸೂಲಾತಿಯಲ್ಲಿ ಹಿನ್ನಡೆ ಹೊಂದಿರುವ ಕೆಲವು ಬ್ಯಾಂಕುಗಳ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.
ಯಾವುದೇ ದಲ್ಲಾಳಿಗಳಿಲ್ಲದೇ, ಲಂಚ,ಕಮಿಷನ್ ದಂಧೆಗಳಿಗೆ ಅವಕಾಶವಿಲ್ಲದಂತೆ ರೈತರು, ತಾಯಂದಿರ ಮನೆ ಬಾಗಿಲಿಗೆ ಸಾಲ ಸೌಲಭ್ಯವನ್ನು ಬದ್ದತೆಯಿಂದ ತಲುಪಿಸಿದ್ದೇವೆ ಆದ್ದರಿಂದ ಸಾಲ ವಸೂಲಾತಿಗೂ ಅಷ್ಟೇ ಬದ್ದತೆಯಿಂದ ಸಾಲಗಾರರನ್ನು ಕೇಳುವ ಶಕ್ತಿ ಉಳಿಸಿಕೊಂಡಿದ್ದೇವೆ ಎಂದರು.
ಪಾರದರ್ಶಕ ಆಡಳಿತಕ್ಕಾಗಿ ಶೇ.100 ಗಣಕೀಕರಣ, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ, ಮೈಕ್ರೋ ಎಟಿಎಂ ಅಳವಡಿಕೆ ಸಹಕಾರಿ ರಂಗದಲ್ಲಿ ಸುಲಭದ ಮಾತಲ್ಲ ಆದರೆ ನಾವು ಅದೆಲ್ಲಾ ಸಾಧನೆಯನ್ನು ಮಾಡಿ ತೋರಿಸಿದ್ದೇವೆ ಎಂದರು.
ಈಗ ನಮ್ಮ ಗುರಿ ಆರ್ಥಿಕ ವರ್ಷದ ಅಂತ್ಯಕ್ಕಿರುವ ಮೂರು ದಿನಗಳ ಕಾಲ ಬ್ಯಾಂಕ್ ಉಳಿಸಲು ಇಚ್ಚಾಶಕ್ತಿ,ಬದ್ದತೆಯಿಂದ ಕೆಲಸ ಮಾಡಿ, ಎನ್‍ಪಿಎ ಶೇ.1.5ಕ್ಕೆ ತನ್ನಿ ಇದು ನಿಮ್ಮ ಪ್ರಮಾಣಿಕತೆ,ಬ್ಯಾಂಕಿನ ಋಣ ತೀರಿಸಲು ನೀಡಿರುವ ಸವಾಲು ಎಂದು ತಿಳಿಯಿರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಎಜಿಎಂಗಳಾದ ಬೈರೇಗೌಡ, ಶಿವಕುಮಾರ್, ಖಲೀಮುಲ್ಲಾ, ವ್ಯವಸ್ಥಾಪಕರಾದ ಹುಸೇನ್ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.