ನಿರ್ಗಮಿತ ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ಆತ್ಮೀಯ ಬೀಳ್ಕೊಡುಗೆ ಕೋವಿಡ್ ಯಶಸ್ವಿನಿರ್ವಹಣೆ`ಬಂಗಾರದಗಣಿ’ ಗ್ರಾಮ ಸೃಜಿಸಿದ ಹರ್ಷ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೇವಲ 11 ತಿಂಗಳು ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಜನರ ಧ್ವನಿಯಾಗಿ, ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ಆತ್ಮತೃಪ್ತಿ ನನಗಿದೆ, ಜಿಲ್ಲೆಯ ಜನತೆ, ಅಧಿಕಾರಿಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ನೀಡಿದ ಸಹಕಾರಕ್ಕೆ ನಾನು ಋಣಿ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ನೌಕರರ ಸಂಘ, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಿ.ಸತ್ಯಭಾಮ, ಶಿವಲಿಂಗಯ್ಯ ದಂಪತಿಗಳಿಗೆ ನೀಡಿದ ಆತ್ಮೀಯ ಬೀಳ್ಕೊಡುಗೆಗೆ ಭಾವುಕವಾಗಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ 49 ದಿನ ಇಣುಕಿ ನೋಡದಂತೆ ಕಾಪಾಡುವಲ್ಲಿ ಪಟ್ಟ ಪರಿಶ್ರಮ, ಬಿಜಿಎಂಎಲ್‍ನ 600 ಎಕರೆ ಜಾಗ ವಶಪಡಿಸಿಕೊಂಡು ಅಭಿವೃದ್ದಿಗೆ ಒತ್ತು ನೀಡಿದ್ದು, ಬಂಗಾರದ ಗಣಿ ಎಂಬ ಗ್ರಾಮವನ್ನು ಸೃಜಿಸಿದ ಖುಷಿ ನನಗಿದೆ ಎಂದು ತಿಳಿಸಿದರು.
ಗ್ರಾ.ಪಂಗಳಿಗೆ ಘನತ್ಯಾಜ್ಯವಿಲೇವಾರಿಗೆ ಜಾಗ ಮಂಜೂರು, ಕಸಾಪಗೆ 1.8 ಎಕರೆ ಜಮೀನು ನೀಡಿದ್ದು, ಜಿಲ್ಲೆಯ ಖರಾಬು ಜಮೀನು ಒತ್ತುವರಿ ತೆರವುಗೊಳಿಸಿದ್ದು, ಸರ್ಕಾರಿ ನೌಕರರ ಭವನಕ್ಕೆ 5 ಎಕರೆ ಜಾಗ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು ಇಂತಹ ನೂರಾರು ಕೆಲಸಗಳನ್ನು ಕೇವಲ 11 ತಿಂಗಳಲ್ಲಿ ಮಾಡಿದ ಖುಷಿ ತಮಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯನ್ನು ಯಾವುದೇ ಗೊಂದಲಗಳಿಲ್ಲದೇ ಮುಗಿಸಿದ ತಮಗೆ ಜಿಲ್ಲೆಯ ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು, ರೈತ,ಜನಪರ,ಪ್ರಗತಿಪರ ಸಂಘಟನೆಗಳು ನೀಡಿದ ಸಹಕಾರ ಮರೆಯಲಾಗುವುದಿಲ್ಲ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ ಮಾತನಾಡಿ, ಜಿಲ್ಲೆಯ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಸದಾ ನಗುಮುಖ ಹೊಂದಿದ್ದ ಸತ್ಯಭಾಮಾ ಅವರು ಜಿಲ್ಲೆಗೆ ನೀಡಿದ ಕೊಡುಗೆ ಅಪಾರ ಎಂದರು.
ವಿಭಾಗಾಧಿಕಾರಿ ಸೋಮಶೇಖರ್, ಕೋವಿಡ್ ಸಂದರ್ಭದಲ್ಲಿ ಮಂಗಳೂರಿನಿಂದ ಆಂಧ್ರಕ್ಕೆ ಹೋಗಲು ಬಂದ 2 ಸಾವಿರ ಕಾರ್ಮಿಕರನ್ನು ಗಡಿಯಲ್ಲಿ ತಡೆದಾಗ ಎದುರಾದ ಸಮಸ್ಯೆಯನ್ನು ಖುದ್ದು ಸ್ಥಳದಲ್ಲಿದ್ದು ನಿರ್ವಹಿಸಿದ ಸತ್ಯಭಾಮ ಅವರ ಸಾಧನೆಯನ್ನು ಮರೆಯಲಾಗದು ಎಂದರು.


ಶಕ್ತಿದೇವತೆಯಾಗಿಮಾತೃವಾಗಿ ಕೆಲಸ


ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಸಂಘದಿಂದ ಧನ್ಯವಾದ ಸಲ್ಲಿಸಿ, ಬಂಗಾರಪೇಟೆ ತಹಸೀಲ್ದಾರ್ ಕೊಲೆ ಪ್ರಕರಣದಲ್ಲಿ ಮಾತೃಮೂರ್ತಿಯಾಗಿ ಮೃತರ ಮಗನಿಗೆ ಸಬ್‍ರಿಜಿಸ್ಟ್ರಾರ್ ಹುದ್ದೆ ಕೊಡಿಸುವಲ್ಲಿ ತೋರಿದ ಬದ್ದತೆ, 25 ಲಕ್ಷ ಪರಿಹಾರ ಕೊಡಿಸಿದ್ದು ಶ್ಲಾಘನೀಯ ಎಂದು ತಿಳಿಸಿ, ಜಿಲ್ಲಾ ನೌಕರರ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದನ್ನು ಮರೆಯಲಾಗದು ಎಂದರು.
ಅದೇ ರೀತಿ ಶಕ್ತಿದೇವತೆಯಾಗಿ ಕೋವಿಡ್ ಮಾರಿಯನ್ನು ಜಿಲ್ಲೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದ ಸತ್ಯಭಾಮಾ ಅವರು, ಕೇವಲ 11 ತಿಂಗಳಲ್ಲಿ ವರ್ಗಾವಣೆಯಾಗಿದ್ದಾರೆ, ಮತ್ತೊಮ್ಮೆ ಅವರು ಜಿಲ್ಲೆಗೆ ಜಿಲ್ಲಾಧಿಕಾರಿಗಳಾಗಿ ಬರಲಿ ಎಂದು ಆಶಿಸಿದರು.


ಕಾರ್ಯಕ್ರಮದಲ್ಲಿ ಸರ್ವೇ ಇಲಾಖೆ ಉಪನಿರ್ದೇಶಕ ಗೋಪಾಲಯ್ಯ ಜಿಲ್ಲೆಯಲ್ಲಿ ಅತಿಕ್ರಮವಾಗಿದ್ದ ಖರಾಬು ಜಮೀನು ಉಳಿಸಿದ ಕೀರ್ತಿ ಮೇಡಂ ಅವರಿಗೆ ಸಲ್ಲುತ್ತದೆ, ಯಾರಿಗೂ ತಿಳಿಯದ ರೀತಿಯಲ್ಲಿದ್ದ ಬಿಜಿಎಂಎಲ್‍ನ 600 ಎಕರೆ ಜಮೀನನ್ನು ಸರ್ಕಾರಕ್ಕೆ ಉಳಿಸಿದ್ದಾರೆ ಅವರಿಗೆ ಜಿಲ್ಲೆಯ ಪರವಾಗಿ ಧನ್ಯವಾದ ಎಂದರು.
ಈ ಸಂದರ್ಭದಲ್ಲಿನೌಕರರ ಸಂಘದ ಪದಾಧಿಕಾರಿಗಳಾದ ಚೌಡಪ್ಪ, ವಿಜಯ್, ರವಿಚಂದ್ರ, ಅಜಯ್, ಗೌತಮ್, ಹರಿಪ್ರಸಾದ್, ತಹಸೀಲ್ದಾರ್ ನಾಗವೇಣಿ, ಸಂದೀಪ್, ನಂದೀಶ್, ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ನಾಗರಾಜ್, ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು
.