

ಕಾರ್ಕಳ: “ದೇವರಿಗೆ ಮಹಿಮೆ ನೀಡುವ ಬದುಕು ನಿಜಕ್ಕೂ ಸಾರ್ಥಕ”: ಬಿಷಪ್ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್
“ಪ್ರಭು ಯೇಸುಕ್ರಿಸ್ತರ ಮುಖಾಂತರ ಕಾಲಪೂರ್ಣತೆಯಲ್ಲಿ ಪ್ರಕಟವಾದ ದೇವರ ಸುವಾರ್ತೆಯಲ್ಲಿ ನಂಬಿಕೆ ಇಟ್ಟು, ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿ, ಅದರಂತೆ ಬಾಳಲು ಪಣತೊಡುವವರು ತಮ್ಮ ಜೀವನದಲ್ಲಿ ದೇವರಿಗೆ ಮಹಿಮೆ ನೀಡುತ್ತಾರೆ. ಸುವಾರ್ತೆಯ ಸಂದೇಶ ಸದ್ಗುಣಗಳನ್ನು ಬೆಳೆಸಲು ಮತ್ತು ಸಮಾಜಮುಖಿಯಾಗಿ ಬಾಳಲು ಆಧಾರ. ಇದರಂತೆ ಬಾಳುವ ವಿಶ್ವಾಸಿಗಳ ಬದುಕು ನಿಜಕ್ಕೂ ಸಾರ್ಥಕ” ಎಂದರು ಪುತ್ತೂರು ಸೀರೊ ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಎರಡನೇ ದಿನ ಸೋಮವಾರದಂದು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಪ್ರಬೋಧನೆಯನ್ನು ನೀಡುತ್ತಿದ್ದರು.
ಜನವರಿ 22 ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವವು ಎರಡನೇ ದಿನವಾದ ಸೋಮವಾರದಂದು ಭಕ್ತಾದಿಗಳ ನಿರಂತರ ಆಗಮನದಿಂದ ಕಳೆಗಟ್ಟಿತ್ತು. ಸಂತ ಲಾರೆನ್ಸರ ಪವಾಡ ಮೂರ್ತಿಯ ಬಳಿ ಭಕ್ತಿಯಿಂದ ತಮ್ಮ ಕೋರಿಕೆಗಳಿಗಾಗಿ ಪ್ರಾರ್ಥಿಸಿ, ತಮ್ಮ ಹರಕೆಯನ್ನು ಸಲ್ಲಿಸಿದರು.
ದಿನದ ಪ್ರಮುಖ ಏಕೈಕ ಬಲಿಪೂಜೆಯನ್ನು ಪುತ್ತೂರು ಸೀರೊ ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್ ನೆರವೇರಿಸಿ ಪ್ರಬೋಧನೆ ನೀಡಿದರು. ಮಹೋತ್ಸವದ ಎರಡನೇ ದಿನ ಸುವಾರ್ತಾ ಪ್ರಸಾರಕರಿಗಾಗಿ ವಿಶೇಸ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ದಿನದ ಬಲಿಪೂಜೆಗಳನ್ನು ವಂದನೀಯ ಸುನಿಲ್ ಡೊಮಿನಿಕ್ ಲೋಬೊ, ಪೆರಂಪಳ್ಳಿ; ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್, ಕುಲಶೇಕರ, ವಂದನೀಯ ಪ್ರದೀಪ್ ಕಾರ್ಡೋಜಾ, ಮೂಡುಬೆಳ್ಳೆ; ವಂದನೀಯ ಆಲ್ಬರ್ಟ್ ಕ್ರಾಸ್ತಾ, ಪಿಯುಸ್‍ನಗರ, ವಂದನೀಯ ಸಂತೋಶ್ ರೊಡ್ರಿಗಸ್, ಮಂಗಳೂರು ಇವರು ನೆರವೇರಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ವಂದನೀಯ ಡೊ. ಲೆಸ್ಲಿ ಡಿಸೋಜಾ, ಶಿರ್ವಾ ಸಂಜೆ 8 ಗಂಟೆಗೆ ನೆರವೇರಿಸಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಿದರು.
ಮಹೋತ್ಸವದ ಮೂರನೇ ದಿನ ಮಂಗಳವಾರ ಬೆಳಿಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4, 6 ಮತ್ತು 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ.
ಮಂಗಳವಾರದಂದು ಸಂಜೆ 6 ಗಂಟೆಗೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಲೋರೆನ್ಸ್ ಮುಕುಝಿ ಇವರು ಕನ್ನಡದಲ್ಲಿ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ.






















ವರದಿ ಮತ್ತು ಚಿತ್ರಗಳು : ಫಾದರ್ ರೊಯ್ಸನ್ ಫೆರ್ನಾಂಡಿಸ್ ನಿರ್ದೇಶಕರು, ಸಂಪರ್ಕ ಕೇಂದ್ರ, ಉಡುಪಿ ಧರ್ಮಪ್ರಾಂತ್ಯ