

ಉಡುಪಿ: ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಕುದ್ರುಮಲೆ ಬೆಟ್ಟದಲ್ಲಿರುವ ಖಾಸಗಿ ಸ್ಥಳದಲ್ಲಿ ನಿರ್ಮಿಸಿದ್ದ ಪವಿತ್ರ ಶಿಲುಬೆಯನ್ನು ಅಪರಿಚಿತ ವ್ಯಕ್ತಿಗಳು ಹಾನಿ ಮಾಡಿರುವುದನ್ನು ಕಥೊಲಿಕ್ ಸಭಾ ಉಡುಪಿ ಹಾಗೂ ಮಂಗಳೂರು ಪ್ರದೇಶ ಕೇಂದ್ರ ಸಮಿತಿಗಳು ಖಂಡಿಸಿವೆ.
ಖಾಸಗಿ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಕ್ರಿಸ್ತರ ಶಿಲುಬೆಯನ್ನು ಯಾವುದೋ ದುರುದ್ದೇಶವಿಟ್ಟುಕೊಂಡು ವಿರೂಪಗೊಳಿಸಿರುವುದು ಜಿಲ್ಲೆಯ ಶಾಂತಿ ಸೌಹಾರ್ಧತೆಯನ್ನು ಕೆಡಿಸುವ ಹುನ್ನಾರವಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಧರ್ಮಿಯರು ಸಾಮರಸ್ಯದಿಂದ ಬದುಕುತ್ತಿದ್ದು ಅದನ್ನು ಕೆಡಿಸುವ ನಿಟ್ಟಿನಲ್ಲಿ ಇಂತಹ ವರ್ತನೆಯನ್ನು ತೋರಿದ್ದಾರೆ.
ಶಿಲುಬೆ ಕ್ರೈಸ್ತ ಸಮುದಾಯದಕ್ಕೆ ಗೌರವ ಹಾಗೂ ಪಾವಿತ್ರ್ಯತೆಯ ಸಂಕೇತವಾಗಿದ್ದು ಘಟನೆಯಿಂದ ಜಿಲ್ಲೆಯ ಕ್ರಿಶ್ಚಿಯನ್ ಭಾಂಧವರ ಭಾವನೆಗಳಿಗೆ ನೋವಾಗಿದೆ. ಪೊಲೀಸ್ ಇಲಾಖೆಗೆ ಈಗಾಗಲೇ ಘಟನೆ ಕುರಿತು ದೂರು ದಾಖಲಿಸಿದ್ದು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಪೊಲೀಸರು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ಹಾಗೂ ಮಂಗಳೂರು ಪ್ರದೇಶ ಅಧ್ಯಕ್ಷರಾದ ಆಲ್ವಿನ್ ಡಿಸೋಜಾ ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.