ಶೀನಿವಾಸಪುರ: ದಲಿತ ಸಂಘಟನೆಗಳು ಪ್ರತಿರೋಧ ಶಕ್ತಿಯನ್ನು ಗಟ್ಟಿಗೊಳಿಸಬೇಕು ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ಈಚೆಗೆ ಕೊಲೆಯಾದ ಚಲ್ದಿಗಾನಹಳ್ಳಿ ಗ್ರಾಮದ ವಿದ್ಯಾರ್ಥಿ ಕೆ.ರಾಕೇಶ್ ಕೊಲೆ ಪ್ರಕರಣದ ಬಗ್ಗೆ ಚರ್ಚಿಸಲು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಸಮನ್ವಯ ಒಕ್ಕೂಟದ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಮುಖಂಡರಲ್ಲಿ ನಾಯಕತ್ವದ ಪ್ರಜ್ಞೆ ಸಾಯುತ್ತಿದೆ. ಆದ್ದರಿಂದಲೇ ಸಂಘಟನೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಚೆಲ್ಲಿದ ರಕ್ತಕ್ಕೆ ನ್ಯಾಯ ಸಿಗುತ್ತಿಲ್ಲ. ನ್ಯಾಯ ಸಿಗದಿದ್ದಾಗ ಪಡೆದುಕೊಳ್ಳಬೇಕು. ಅದಕ್ಕೆ ಸಾಂಘಿಕ ಪ್ರಯತ್ನದ ಅಗತ್ಯವಿದೆ. ಪಾರಂಪರಿಕ ಹಗೆತನ ಹೆಚ್ಚು ಅಪಾಯಕಾರಿ. ಯಾವುದೇ ಸಂದರ್ಭದಲ್ಲಿ ಹಗೆತನ ಮುಂದುವರಿಯದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ದಲಿತ ಮುಖಂಡರಾದ ರಾಮಾಂಜಮ್ಮ ಮಾತನಾಡಿ, ರಾಕೇಶ್ ಬಗ್ಗೆ ಪ್ರೀತಿಯ ಕತೆ ಹೆಣೆದು ಕೊಲೆ ಮಾಡಲಾಗಿದೆ. ಆದರೆ ಅದಕ್ಕೆ ಕಾರಣರಾದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಆದ್ದರಿಂದ ಸರ್ಕಾರ ಕೊಲೆ ಆರೋಪಿಗಳನ್ನು ಹಿಡಿದು ಬಂಧಿಸಲು ವಿಶೇಷ ತನಿಖಾ ತಂಡ ರಚಿಸಬೇಕು. ಈಗಿನ .ತನಿಖಾಧಿಕಾರಿಯನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಚಲ್ದಿಗಾನಹಳ್ಳಿ ಈರಪ್ಪ ಮಾತನಾಡಿ, ರಾಕೇಶ್ ಕೊಲೆ ಆರೋಪಿಗಳ ಮೇಲೆ ಇರುವ ಎಲ್ಲ ಆರೋಪಗಳನ್ನೂ ತನಿಖೆಗೆ ಒಳಪಡಿಸಬೇಕು. ಅವರನ್ನು ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಮೃತ ರಾಕೇಶ್ ಕುಟುಂಬಕ್ಕೆ ಪರಿಹಾರ ನೀಡಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.
ರಾಕೇಶ್ ಕೊಲೆ ಖಂಡಿಸಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಸಮನ್ವಯ ಒಕ್ಕೂಟದ ವತಿಯಿಂದ ಜು.31 ರಂದು ಬೆಳಿಗ್ಗೆ 10 ಗಂಟೆಗೆ, ಚಲ್ದಿಗಾನಹಳ್ಳಿ ಗ್ರಾಮದಿಂದ ಶ್ರೀನಿವಾಸಪುರದ ತಾಲ್ಲೂಕು ಕಚೇರಿ ವರೆಗೆ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ ಎಂದು ಹೇಳಿದರು.
ವಿವಿಧ ದಲಿತ ಸಂಘಟನೆಗಳ ಮಖಂಡರಾದ ವರ್ತನಹಳ್ಳಿ ವೆಂಕಟೇಶ್, ಮುನಿವೆಂಕಟಪ್ಪ, ವಿ.ಮುನಿಯಪ್ಪ, ನಾರಾಯಣಸ್ವಾಮಿ, ಕೂತ್ಸಂದ್ರ ರೆಡ್ಡಪ್ಪ, ಹೂವಳ್ಳಿ ಕೃಷ್ಣಪ್ಪ, ಸಿ.ಮುನಿಯಪ್ಪ, ಗೊರವಮಾಕಲಹಳ್ಳಿ ಶ್ರೀನಿವಾಸ್, ಚಲಪತಿ, ಸೀತಪ್ಪ, ಎಂ.ವೆಂಕಟೇಶ್, ರಾಮಕೃಷ್ಣ, ನರಸಿಂಹ, ಪ್ರಭಾಕರಗೌಡ, ಬೈರಾರೆಡ್ಡಿ ಇದ್ದರು.