ಕೋಲಾರ,ಜು.3: ದಲಿತ ಚಳವಳಿ ಒತ್ತಡದ ಗುಂಪಾಗಿಯೇ ಬೆಳೆಯಬೇಕು. ಪ್ರತಿ ತಾಲ್ಲೂಕಿನಲ್ಲಿ 100 ಯುವಕರು ಇದ್ದರೆ ಇಡೀ ಜಿಲ್ಲೆಯನ್ನು ನೈತಿಕ ಶಕ್ತಿಯಿಂದ ನಿಯಂತ್ರಿಸಬಹುದು. ದಲಿತರು, ಬಡವರು, ಶೋಷಿತರಿಗೆ ನ್ಯಾಯ ಕಲ್ಪಿಸಬಹುದು ಎಂದು ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಅಭಿಪ್ರಾಯಪಟ್ಟರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ಗೆ ಭಾಜನರಾಗಿರುವ ಸಿ.ಎಂ.ಮುನಿಯಪ್ಪ ಅವರು ಸೋಮವಾರ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು ದಲಿತ ಚಳವಳಿ. ಹೋರಾಟಗಾರರಿಗೆ ನೈತಿಕ ಭಯ, ನೈತಿಕ ಎಚ್ಚರ ಇರಬೇಕು. ಆಗ ನಾವು ಭ್ರಷ್ಟರಾಗುವುದಿಲ್ಲ. ಅದೇ ದಿಕ್ಕಿನಲ್ಲಿ ನಾವು ಹೋರಾಟ ರೂಪಿಸಿದೆವು ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಗ್ರಾಮದಲ್ಲಿ ಹುಟ್ಟುತ್ತಲೇ ಮಗುವಿಗೆ ಜೀತದ ಪಟ್ಟ ಕಟ್ಟುವ ಪದ್ಧತಿ ಇದ್ದದ್ದು ಶೋಚನೀಯ. 150 ಮಂದಿ ಜೀತದಾಳರಾಗಿದ್ದರು. ಅಲ್ಲಿಂದ ದಲಿತ ಚಳವಳಿ ಹೋರಾಟ ಶುರುವಾಯಿತು ಎಂದರು.
ಚಳವಳಿಗೆ ಗೌರವ ಡಾಕ್ಟರೇಟ್ ಅರ್ಪಿಸುತ್ತೇನೆ. 1974ರಿಂದ ಧರ್ಮಯುತವಾಗಿ, ನ್ಯಾಯಯುತವಾಗಿ ನಡೆಯಲು ಕಾರಣರಾದ ನಾಯಕರಿಗೆ ಅರ್ಪಣೆ ಮಾಡುತ್ತೇನೆ. ನನಗೆ ಯಾವುದೇ ಹೋರಾಟದ ಹಿನ್ನೆಲೆ ಇಲ್ಲ. ನಾನು ದನ ಕಾಯುವ ವ್ಯಕ್ತಿಯ ಮಗ. ಕುಟುಂಬ ಜೀತದಾಳಾಗಿತ್ತು. ದಲಿತ ಚಳವಳಿ ನನಗೆ ನೈತಿಕ ಶಕ್ತಿ ತುಂಬಿತು. ದನ ಕಾಯುವ ಪುತ್ರ, ರಾಜ್ಯದ ಮುಖ್ಯಮಂತ್ರಿಯನ್ನು ಪ್ರಶ್ನಿಸುವ ಧೈರ್ಯ ತುಂಬಿದ್ದು ದಲಿತ ಚಳವಳಿ. ಇದು ನನ್ನೊಬ್ಬನ ಶ್ರಮ ಅಲ್ಲ. ಹಲವರ ಪರಿಶ್ರಮ ಇದೆ ಎಂದು ಹೇಳಿದರು.
ಈಗಿನ ಹೋರಾಟ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ. ಹೋರಾಟಗಾರರಿಗೆ ಕಣ್ಣು, ಕಿವಿ ಇಲ್ಲ. ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟಚಾರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದರು.
ಡಾಕ್ಟರೇಟ್ ಪದವಿ ಬಗ್ಗೆ ಮುಜುಗರ ನನಗೆ ಇದೆ. ಅದರ ಗೌರವ ಕಳೆದು ಹೋಗಿದೆ. ಯಾರು ಬೇಕಾದರೂ ಡಾಕ್ಟರೇಟ್ ಪದವಿ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಉತ್ತಮರಿಗೆ ಸಿಕ್ಕರೂ ಅದಕ್ಕೆ ಗೌರವ ಇಲ್ಲವಾಗಿದೆ ಎಂದು ತಿಳಿಸಿದರು.
ಲೋಕಸಭೆ ಸ್ಪರ್ಧೆ ವಿಚಾರವಾಗಿ ನಾನು ಹಿಂದೆ ಹೋಗಲ. ಆಸೆ ಇಲ್ಲ. ಅದಾಗಿಯೇ ಬಂದರೆ ನೋಡೋಣ. ಬಹಳಷ್ಟು ನಿರೀಕ್ಷೆಇಲ್ಲ. ಅದಕ್ಕೆ ಬೇಕಾಗುವ ಹಣವೂ ಇಲ್ಲ. ಒತ್ತಡದ ಗುಂಪಾಗಿ ನಡೆಸಿಕೊಂಡು ಹೋಗಲು ಇಷ್ಟ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಮುನಿಯಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿರುವುದು ಇಡೀ ಪತ್ರಕರ್ತರಿಗೆ ಸಂತೋಷದ ವಿಚಾರ. ಪತ್ರಕರ್ತರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ವಿರಳ ಎಂದರು.
ದಲಿತ ಚಳವಳಿಗೆ ಮೂಲ ಕಾರಣರಲ್ಲಿ ಮುನಿಯಪ್ಪ ಕೂಡ ಒಬ್ಬರು. 1994ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಕೋಲಾರಕ್ಕೆ ಜನತಾ ದರ್ಶನಕ್ಕೆ ಬಾರದಂತೆ ತಡೆಯೊಡ್ಡುವುದಾಗಿ ಹೇಳಿದ್ದ ಪ್ರಕರಣ ಹಾಸ್ಟೆಲ್ನಲ್ಲಿ ಮಕ್ಕಳ ಸಂಖ್ಯೆ ಕಡಿತಗೊಳಿಸುವುದಾಗಿ ಹೇಳಿದ್ದ ಅಂದಿನ ಜಿ.ಪಂ ಸಿಇಒ ಬಿ.ಎಚ್.ಅನಿಲ್ ಕುಮಾರ್ ಅವರನ್ನು ಕಚೇರಿ ಒಳಗೆ ಹೋಗಲು ಬಿಡದ್ದು ಸೇರಿದಂತೆ ವಿವಿಧ ಹೋರಾಟ ಉಲ್ಲೇಖಿಸಿದರು. ನೇರ ಹೋರಾಟ ಅವರದ್ದು. ಸಂಚಿಕೆ ಎಂಬುದು ಹೋರಾಟಗಳ ಉಗಮ ಸ್ಥಳ ಎಂದು ನುಡಿದರು.
ನಚಿಕೇತ ನಿಲಯ ಟಿ.ಚನ್ನಯ್ಯ ಕನಸಿನ ಕೂಸು. ಅದನ್ನು ಸಂಪನ್ಮೂಲ ಕೇಂದ್ರವನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಮುನಿಯಪ್ಪ ಪ್ರಯತ್ನಿಸಬೇಕು. ರಾಜ್ಯಾಧಿಕಾರ ಸಿಗುವ ಅವಕಾಶ ಬಳಸಿಕೊಳ್ಳಬೇಕು ಎಂದು ಕೋರಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವಿ.ಮುನಿರಾಜು, ಹಿಂದಿನ ಹೋರಾಟ ಪ್ರಭಾವಕಾರಿಯಾಗಿತ್ತು. ಹೋರಾಟ ನಡೆದರೆ ಅಧಿಕಾರಿಗಳು ಬೆದರುತ್ತಿದ್ದರು. ಅಂಥ ಹೋರಾಟ ನಡೆಸಿದವರು ಮುನಿಯಪ್ಪ. ಸರ್ವ ಜನಾಂಗದವರಿಗೆ ನಾಯಕತ್ವ ನೀಡಿದವರು. ಈಗ ಸ್ವಾರ್ಥಕ್ಕೆ, ವೈಯಕ್ತಿಕ ಲಾಭಕ್ಕೆ ಹೋರಾಟ ನಡೆಸಲಾಗುತ್ತದೆ ಎಂದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರ ಚಳವಳಿಗಳ ತವರೂರು. ನಾಲ್ಕು ದಶಕಗಳ ಹೋರಾಟ. ಹೋರಾಟದ ಫಲವಾಗಿ ಅನೇಕ ಹಾಸ್ಟೆಲ್ ಆರಂಭವಾಯಿತು. ಶೋಷಿತರು, ಬಡವರಿಗೆ ಭೂಮಿ ಸಿಕ್ಕಿತು. ನಾಯಕತ್ವದ ಗುಣ ಕರಗತವಾಗಿದೆ ಎಂದು ತಿಳಿಸಿದರು.
ಹೊಸ ಪೀಳಿಗೆಯನ್ನು ಹೋರಾಟಕ್ಕೆ ತರಲು ಪ್ರಯತ್ನಿಸಿದರು. ಈಗಿನ ಕಾಲಘಟ್ಟದಲ್ಲಿ ಆಗಿನ ರೀತಿ ಹೋರಾಟ ನಡೆಸಿದ್ದರೆ ಬದುಕಿ ಉಳಿಯುತ್ತಿರಲಿಲ್ಲವೇನೋ? ಎಂದರು.
ರಾಜ್ಯಾಧಿಕಾರ ಪಡೆಯುವಲ್ಲಿ ಹೋರಾಟ ಯಶಸ್ವಿಯಾಗಿಲ್ಲ. ಆದರೆ, ಒತ್ತಡ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುನಿಯಪ್ಪ ಒಂದು ಶಕ್ತಿ ಎಂದು ನುಡಿದರು.
ಸಂಘದ ಖಜಾಂಚಿ ಸುರೇಶ್ ಕುಮಾರ್ ನಿರೂಪಿಸಿದರು. ಸದಸ್ಯ ಆಸೀಫ್ ಪಾಷ ಸ್ವಾಗತಿಸಿದರು. ಹಿರಿಯ ಪತ್ರಕರ್ತರಾದ ಕೋ.ನಾ.ಮಂಜುನಾಥ್, ಸಿ.ವಿ.ನಾಗರಾಜ್, ಬಿ.ಸುರೇಶ್ ಮಾತನಾಡಿದರು.
ಹಿರಿಯ ಪತ್ರಕರ್ತರಾದ ಅಬ್ಬಣಿ ಶಂಕರ್, ಓಂಕಾರಮೂರ್ತಿ, ಕೆ.ಬಿ.ಜಗದೀಶ್, ಸ್ಕಂದಕುಮಾರ್, ಎನ್.ಶಿವಕುಮಾರ್, ಮದನ್, ಮಾಮಿ ಪ್ರಕಾಶ್, ಸಿ.ವಿ.ನಾಗರಾಜ್, ಎನ್.ಸತೀಶ್, ಕಾರಂಗುಂಟೆ ನಾರಾಯಣಸ್ವಾಮಿ, ವಿಜಿಕುಮಾರ್, ಪ್ರಕಾಶ್, ವೆಂಕಟೇಶ್ಬಾಬಾ, ರಾಜೇಂದ್ರಸಿಂಹ, ಎಸ್.ರವಿಕುಮಾರ್, ಸಮೀರ್ ಅಹಮದ್, ಸೈಯದ ತಬ್ರೇಜ್, ಈಶ್ವರ್, ವೆಂಕಟೇಶ್, ಮಂಜುನಾಥ್, ಕಿರಣ್, ಅಮರ್, ಪುರುಷೋತ್ತಮ, ಸಿ.ಅಮರೇಶ,
ಗಂಗಾಧರ್, ಗೋಪಿ, ಪವನ್, ಕುಮಾರ್, ನಾಗೇಶ್ ಹಾಗೂ ಪತ್ರಕರ್ತರು ಇದ್ದರು.