ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ: ಪೆ.10: ಗಗನಕ್ಕೇರುತ್ತಿರುವ ಪಿವಿಸಿ ಪೈಪ್ ಬೆಲೆ ಹಾಗೂ ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ದಿನ ಬಳಕೆ ವಸ್ತುಗಳ ಬೆಲೆ ಕಡಿಮೆ ಮಾಡುವ ಜೊತೆಗೆ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ರೈತಸಂಘದಿಂದ ಮಡಿಕೆಗಳು, ಅಕ್ಕಿ ಬೇಳೆ, ಎಣ್ಣೆ, ಮತ್ತು ಕೃಷಿ ಸಲಕರಣೆಗಳಾದ ಪಿ.ವಿ.ಸಿ ಪೈಪ್ ಸಮೇತ ಪಲ್ಲವಿ ವೃತ್ತದಲ್ಲಿ ಹೋರಾಟ ಮಾಡಿ ಶಿರಸ್ತೇದಾರ್ ದಿವಾಕರ್‍ರವರ ಮೂಲಕ ರಾಷ್ಟ್ರಪತಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದ ಸರ್ಕಾರಗಳು ಜನಸಾಮಾನ್ಯರನ್ನು ಬೀದಿಗೆ ತಳ್ಳಿ ಶ್ರೀಮಂತರ ಜೇಬು ತುಂಬಿಸುವತ್ತ ಮುಖ ಮಾಡುತ್ತಿವೆ. ಮತ್ತೊಂದೆಡೆ ಜಿಲ್ಲೆಯ ಅಂತರ್ಜಲ ಪ್ರಮಾಣ ಸಂಪೂರ್ಣವಾಗಿ ಕುಸಿದಿರುವ ಕಾರಣ ಜಿಲ್ಲೆಯಲ್ಲಿ ಶೇ.80ರಷ್ಟು ರೈತರು ಹನಿನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದ ರೈತರಿಗೆ ಪಿವಿಸಿ ಪೈಪಿನ ಬೆಲೆ ಗಗನಕ್ಕೇರಿದ್ದು, ಇದರಿಂದ ರೈತಾಪಿ ವರ್ಗ ಕಂಗಾಲಾಗಿದೆ. ಸಾವಿರಾರು ಅಡಿ ಬೋರ್‍ವೆಲ್ ಕೊರೆದರೂ ನೀರು ಸಿಗದೆ ರೈತರು ಸಿಗುವ ಅಲ್ಪಸ್ವಲ್ಪ ನೀರಿನಲ್ಲಿ ವ್ಯವಸಾಯ ಮಾಡಲು ಹಾಗೂ ತೋಟಗಳಿಗೆ ಕಾಲುವೆ ಮುಖಾಂತರ ನೀರು ಹರಿಸಲು ಸಾಧ್ಯವಾಗದೆ ಹನಿನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಆದರೆ ಸರ್ಕಾರ ಏಕಾಏಕಿ ಪಿವಿಸಿ ಪೈಪ್ ಬೆಲೆ ಏರಿಕೆ ಮಾಡಿರುವುದರಿಂದ ರೈತರು ಹನಿನೀರಾವರಿ ಪದ್ಧತಿಯನ್ನು ಕೈಬಿಡಬೇಕಾದ ಪರಿಸ್ಥಿತಿಯಿದೆ.
ಹನಿ ನೀರಾವರಿ ಪದ್ಧತಿಗೆ ಅಳವಡಿಸುವ ಒಂದೂ ಕಾಲು ಇಂಚಿನ 20 ಅಡಿ ಉದ್ಧದ ಪೈಪಿನ ಬೆಲೆ ಕಳೆದ ವರ್ಷ 160ರೂ ಈಗ ಅದೇ ಪೈಪಿನ ಬೆಲೆ 250ರೂ ಆಗಿದೆ. ಇನ್ನು ಒಂದು ರೋಲ್ ಡ್ರಿಪ್ ಪೈಪ್ 1600 ಇದ್ದದ್ದು ಈಗ 2600ಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದು ಎಕರೆಗೆ ಹನಿ ನೀರಾವರಿ ಅಳವಡಿಸಲು 20 ಸಾವಿರ ಬೇಕಾಗಿತ್ತು. ಆದರೆ ಈಗ 1 ಎಕರೆಗೆ 40 ಸಾವಿರ ಬೇಕಾಗಿರುವುದರಿಂದ ರೈತರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಕೃಷಿಯನ್ನೇ ಕೈಬಿಡುವ ಯೋಚನೆಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಭದ್ರತೆಗೆ ರೈತರನ್ನು ಸಂಬಳ ಕೊಟ್ಟು ಸರ್ಕಾರವೇ ನೇಮಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಎಂದು ಅಸಮಾದಾನ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಜನಸಾಮಾನ್ಯರ ಅಗತ್ಯ ದಿನ ಬಳಕೆ ವಸ್ತುಗಳಾದ ಅಡುಗೆ ಅನಿಲ, ಆಹಾರ ಧಾನ್ಯ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಸದ್ದಿಲ್ಲದೆ ಗಗನಕ್ಕೇರಿದೆ. ಇದಕ್ಕೆ ಸವಾಲೆಸೆಯುವಂತೆ ಪ್ರಯಾಣ ಧರ, ಹೋಟೆಲ್ ತಿಂಡಿ ತಿನಿಸುಗಳ ಧರಗಳನ್ನು ಏರಿಕೆ ಮಾಡುತ್ತಿರುವ ಜೊತೆಗೆ ತೊಗರಿಬೇಳೆ 90 ರಿಂದ 110ರೂಗೆ ಏರಿಕೆಯಾಗಿದೆ, ಉದ್ದಿನಬೇಳೆ 80 ರಿಂದ 120ರೂ ಆಗಿದೆ, ಅಕ್ಕಿ 60 ರಿಂದ 77, ಅಡುಗೆ ಎಣ್ಣೆ 125ರಿಂದ 160ರೂ ಆಗಿದೆ. ಇದರ ಜೊತೆಗೆ ರಾತ್ರೋರಾತ್ರಿ ಜನರ ಜೇಬು ಸುಡುವ ಪೆಟ್ರೋಲ್, ಡೀಸೆಲ್ ಸೆಂಚುರಿ ಬಾರಿಸಿ ಗಿನ್ನೀಸ್ ದಾಖಲೆಯತ್ತ ಮುಖ ಮಾಡುತ್ತಿರುವುದರಿಂದ ಜನಸಾಮಾನ್ಯರ ಜೀವನ ಅಧೋಗತಿಯಾಗುತ್ತಿದೆ. ಒಟ್ಟಾರೆಯಾಗಿ ಕೃಷಿ ಕ್ಷೇತ್ರವನ್ನು ನಾಶ ಮಾಡಿ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುವ ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ ಧೋರಣೆಯನ್ನು ಕೈಬಿಟ್ಟು, ಬೆಂಕಿಯಲ್ಲಿ ಬೇಯುತ್ತಿರುವ ದೇಶದ ಜನಸಾಮಾನ್ಯರನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಶಿರಸ್ತೆದಾರ್‍ರಾದ ದಿವಾಕರ್‍ರವರು ನಿಮ್ಮ ಈ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಐತಾಂಡಹಳ್ಳಿ ಮುನ್ನಾ, ಸುಪ್ರೀಂಚಲ, ಚಲಪತಿ, ಚಾಂದ್‍ಪಾಷ, ಜಾವೇದ್‍ಪಾಷ, ಕಿರಣ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಪ್ಪ, ಆಶ್ವತಪ್ಪ, ಸಹದೇವಪ್ಪ, ಚಂದ್ರಪ್ಪ, ಸಂವಾದ ಚಂದ್ರಶೇಖರ್, ಶಾಂತಮ್ಮ, ನವೀನ್ ಕುಮಾರ್, ಭರತ್, ಹರೀಶ್, ಲಕ್ಷಣ್, ಜಗದೀಶ್, ವಿನೋದ್, ವಡಗೂರು ಮಂಜುನಾಥ್, ಮುಂತಾದವರಿದ್ದರು.