ಸಾಲ ವಸೂಲಿ ಗುರಿ ಸಾಧಿಸಿದರೆ ಮಾತ್ರ ಡಿಎ ಮಂಜೂರು ಬ್ಯಾಂಕ್ ಉಳಿಸುವ ವಿಚಾರದಲ್ಲಿ ರಾಜೀ ಇಲ್ಲ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಬ್ಯಾಂಕ್ ಉಳಿಸುವ ವಿಚಾರದಲ್ಲಿ ರಾಜೀ ಇಲ್ಲ,ಠೇವಣಿ ಸಂಗ್ರಹ,ಸಾಲ ವಸೂಲಾತಿಯಲ್ಲಿ ನೀಡಿರುವ ಗುರಿ ಸಾಧಿಸಿದರೆ ಮಾತ್ರ ಡಿಎ ಮಂಜೂರು ಮಾಡುವುದಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಬ್ಬಂದಿಗೆ ತಾಕೀತು ಮಾಡಿದರು.
ಸೋಮವಾರ ಬೆಳಗ್ಗೆ 7-30 ಗಂಟೆಗೆ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಅವಿಭಜಿತ ಜಿಲ್ಲೆಯ ಎಲ್ಲಾ ತಾಲೂಕು ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿಯೊಂದಿಗಿನ ವಚ್ರ್ಯುವಲ್ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಬ್ಯಾಂಕಿನ ಋಣದಲ್ಲಿದ್ದೀರಿ, ಅದನ್ನು ತೀರಿಸಲು ಬದ್ದತೆಯಿಂದ ಕೆಲಸ ಮಾಡಿ, ಎನ್‍ಪಿಎ ಕಡಿಮೆ ಮಾಡುವಲ್ಲಿ ದೇಶದಲ್ಲೇ ನಾವು ಮೊದಲಿದ್ದೇವೆ, ಆ ಗೌರವಕ್ಕೆ ಚ್ಯುತಿ ತಾರದಿರಿ ಎಂದು ಕಿವಿಮಾತು ಹೇಳಿದರು.


ಮಾ.31ರವರೆಗೂ ಸಿಬ್ಬಂದಿಗೆ ರಜೆಇಲ್ಲ


ಆರ್ಥಿಕ ವರ್ಷದ ಕೊನೆ ವೇಳೆಯೊಳಗೆ ನಿಮಗೆ ನೀಡಿರುವ ಗುರಿ ಸಾಧಿಸಿ, ಆಗ ಮಾತ್ರ ನಿಮಗೆ ಈ ಸಾಲಿನ ಡಿಎ ಅಥವಾ ದಿನಭತ್ಯೆ ಮಂಜೂರು ಮಾಡುವುದಾಗಿ ತಿಳಿಸಿದ ಅವರು, ಸಿಬ್ಬಂದಿಗೆ ಬ್ಯಾಂಕ್ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿದೆ ಆದರೆ ನಿಮ್ಮಲ್ಲಿ ಬ್ಯಾಂಕ್ ಕೆಲಸ ನಮ್ಮ ಕೆಲಸ ಎಂದು ಭಾವಿಸಿ ಕೆಲಸ ಮಾಡುವ ಮನೋಭಾವ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರ್ಥಿಕ ವರ್ಷದ ಕೊನೆಯಾದ ಮಾ.31 ರವರೆಗೂ ನಿಮಗೆ ಯಾವುದೇ ರಜೆ ನೀಡುವುದಿಲ್ಲ, ಹಬ್ಬಗಳನ್ನು ಪಕ್ಕಕ್ಕಿಟ್ಟು ಬ್ಯಾಂಕಿಗಾಗಿ ಕೆಲಸ ಮಾಡಿ, ಸಾಲ ವಸೂಲಾತಿಯನ್ನು ಗಂಭೀರವಾಗಿ ಪರಿಗಣಿಸಿ ಎಂದು ತಿಳಿಸಿದರು.
ಮಹಿಳಾ ಸ್ವಸಹಾಯ ಸಂಘಗಳು, ಕೆಸಿಸಿ ಸಾಲ ಸೇರಿದಂತೆ ಸಾಲದ ಕಂತುಗಳು ಸಕಾಲಕ್ಕೆ ಪಾವತಿಯಾಗಿರಬೇಕು, ಶುಕ್ರವಾರ ಒಂದು ಜಿಲ್ಲೆಗೆ ಎಂಡಿ ಶಿವಕುಮಾರ್ ಹಾಗೂ ಒಂದು ಜಿಲ್ಲೆಗೆ ನಾನು ಖುದ್ದಾಗಿ ಪ್ರತಿ ಶಾಖೆಗೆ ಭೇಟಿ ನೀಡಿ ನಿಮ್ಮ ಪ್ರಗತಿ ಪರಿಶೀಲಿಸುತ್ತೇವೆ, ತಪ್ಪುಗಳು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಸಿದರು.
ಬ್ಯಾಂಕ್ ಉಳಿಸಲು ನಡೆಸುವ ಸಭೆಗಳಿಗೆ ಸಕಾಲಕ್ಕೆ ಬಾರದಿರುವ ಸಿಬ್ಬಂದಿಗೆ ಗೈರು ನಮೂದಿಸಿ ವೇತನ ಕಟ್ ಮಾಡಿ ಎಂದು ಎಂಡಿ ಶಿವಕುಮಾರ್ ಅವರಿಗೆ ಸೂಚಿಸಿದ ಅವರು,ಬ್ಯಾಂಕ್ ಉಳಿಸುವುದು ಪ್ರತಿಯೊಬ್ಬರ ಬದ್ದತೆಯಾಗಬೇಕು ಎಂದರು.
ಮಹಿಳಾ ಸ್ವಸಹಾಯ ಸಂಘಗಳ ಸಾಲ ಮರುಪಾವತಿ ಕುರಿತ ನಿರ್ವಹಣೆಗೆ ಪ್ರತಿ ಶಾಖೆಗೂ ಒಬ್ಬರನ್ನು ನೇಮಿಸಿ, ಕಾಲಕಾಲಕ್ಕೆ ಮಾಹಿತಿ ಅಪ್‍ಡೇಟ್ ಆಗುವಂತೆ ಮಾಡಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಬ್ಯಾಂಕಿನ ಎಂಡಿ ಶಿವಕುಮಾರ್, ಅಧಿಕಾರಿಗಳಾದ ಹುಸೇನ್ ಸಾಬ್ ದೊಡ್ಡಮನಿ, ವ್ಯವಸ್ಥಾಪಕರಾದ ಬೇಬಿ ಶ್ಯಾಮಿಲಿ, ಅಮ್ಜದ್‍ಖಾನ್, ಸಿಬ್ಬಂದಿ ಅರುಣ್‍ಕುಮಾರ್,ಅಬ್ದುಲ್ ಹ್ಯಾರಿಸ್, ಪದ್ಮಮ್ಮ, ತಿಮ್ಮಯ್ಯ,ಯಲ್ಲಪ್ಪರೆಡ್ಡಿ, ಸಿ.ಎನ್.ಶುಭಾ, ವೈ.ಆರ್.ಸೌಮ್ಯ, ಮಮತ, ಕೆ.ಎನ್.ಮಮತ, ಭಾನುಪ್ರಕಾಶ್, ಬಾಲಾಜಿ, ನವೀನ್, ವಿನಯ್ ಪ್ರಸಾದ್, ಅಂಬರೀಶ್, ಕೋಲಾರ ಶಾಖೆ ವ್ಯವಸ್ಥಾಪಕ ಅಮರೇಶ್, ಸಿಬ್ಬಂದಿ ಅಮೀನ್, ದೀಪಿಕ ಎನ್.ಕಿಶೋರ್, ಮಂಗಳ, ಚಂದ್ರಶೇಖರ್, ಗಣಕೀಕರಣದ ನೇತೃತ್ವ ವಹಿಸಿರುವ ವಿಸಾಫ್ಟ್‍ನ ಫರ್ನಾಂಡೀಸ್, ವಂದನ ಮತ್ತಿತರರಿದ್ದರು.