ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ,ಜು.30: ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ(ಕ್ಯಾಮ್ಸ್)ನ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್ಸ್ ಆಫ್ ಸ್ಕೂಲ್ಸ್(ಕ್ಯಾಮ್ಸ್) ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ(ಕ್ಯಾಮ್ಸ್)ನ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ರವರು ದಿನಾಂಕ 29-07-2021 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಮನೆಯ ಬಳಿ ಕಾರು ನಿಲ್ಲಿಸಿ ಮನೆಯೊಳಗೆ ತೆರಳುವ ಸಮಯದಲ್ಲಿ 4 ಜನ ದುಷ್ಕರ್ಮಿಗಳು ಲಾಂಗು ಮತ್ತು ಮಚ್ಚುಗಳಿಂದ ಡಿ.ಶಶಿಕುಮಾರ್ ಅವರ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿ ಓಡಿ ಹೋಗಿರುತ್ತಾರೆ.
ಡಿ.ಶಶಿಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾಡುತ್ತಿರುವ ಹೈಬ್ರಿಡ್ ವಿದ್ಯಾ ಹಾಗೂ ಇನ್ನಿತರೆ ಯೋಜನೆಗಳನ್ನು ಹಮ್ಮಿಕೊಂಡಿರುತ್ತಾರೆ. ಇವರು ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾಡುತ್ತಿರುವ ಸೇವೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಇಂತಹ ನೀಚ ಕೃತ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಿದರು.
ಸಮಾಜಕ್ಕೆ ಒಳ್ಳೆಯ ಸೇವೆಯನ್ನು ಮಾಡುವವರ ಮೇಲೆ ಇಂತಹ ಹೀನ ದುಶ್ಕøತ್ಯ ಮಾಡಿರುವವರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಿಕೊಡಬೇಕು. ಕಿಡಿಗೇಡಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಿಯೋಗದಲ್ಲಿ ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್ಸ್ ಆಫ್ ಸ್ಕೂಲ್ಸ್(ಕ್ಯಾಮ್ಸ್)ನ ಜಿಲ್ಲಾಧ್ಯಕ್ಷ ಎ.ಸದಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಜಗದೀಶ್, ಜಿಲ್ಲಾ ಉಪಾಧ್ಯಕ್ಷ ಆರ್.ಸತೀಶ್‍ಕುಮಾರ್, ಜಿಲ್ಲಾ ಖಜಾಂಚಿ ಜಮೀರ್ ಅಹಮ್ಮದ್, ಹಿರಿಯ ಸಲಹೆಗಾರ ಜೋಸೆಫ್, ಕೋಲಾರ ತಾಲೂಕು ಅಧ್ಯಕ್ಷ ಬಿ.ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಎಲ್ ರಾಮಕೃಷ್ಣಪ್ಪ, ಕೆ.ಜಿ.ಎಫ್ ತಾಲೂಕು ಅಧ್ಯಕ್ಷ ಎಂ.ಕಿರಣ್‍ಕುಮಾರ್, ಶ್ರೀನಿವಾಸಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಗೋಪಾಲಗೌಡ, ಆರ್.ವಿ ಶಾಲೆಯ ಸಂಸ್ಥಾಪಕ ಸೋಮಣ್ಣ ಇನ್ನಿತರರು ಉಪಸ್ಥಿತರಿದ್ದರು.