ತಮಿಳುನಾಡು:ಮಿಚಾಂಗ್ ಚಂಡಮಾರುತ ಅಬ್ಬರಕ್ಕೆ ತಮಿಳುನಾಡಿನ ಜನ ತತ್ತರಿಸಿದ್ದಾರೆ. ರಾಜಧಾನಿ ಚೆನ್ನೈ ಸೇರಿ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು ರಸ್ತೆಗಳೆಲ್ಲ ಜಲಾವೃತವಾಗಿದೆ. ಕೆರೆಯಂತೆ ಇಡೀ ನಗರ ಕಾಣ್ತಿದೆ. ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.ಹಲವರು ಜನ ಸಾವಿನ ಸುಳಿಯಲ್ಲಿ ಸಿಲುಕಿದ್ದಾರೆ. ಚಂಡಮಾರುತ ಗಂಟೆಗೆ 90 ರಿಂದ 100 ಕಿಲೋಮೀಟರ್ ವೇಗದಲ್ಲಿ ಮೈಚುಂಗ್ ಸಾಗುತ್ತಿದ್ದು ಎದುರಿಗೆ ಸಿಕ್ಕ ಎಲ್ಲವನ್ನೂ ನುಂಗಿ ನೀರು ಕುಡಿಯುತ್ತೀದೆ. ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಮಳೆಯ ನೀರಿನ ರಭಸಕ್ಕೆ ಚೆನ್ನೈನ ಮೆದವಕ್ಕಂನಲ್ಲಿ ಕಾರುಗಳು ಕೊಚ್ಚಿಕೊಂಡು ಹೋಗ್ತಿವೆ. ಪೆರುನುಗುಂಡಿ ಏರಿಯಾದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು ವಾಹನ ಸವಾರರು ಅಕ್ಷರಶಃ ಪರದಾಡಿದ್ರು. ಕೆಲವೆಡೆ ರಸ್ತೆ ಕುಸಿದು ಜಲಪಾತ ಸೃಷ್ಟಿಯಾಗಿದೆ.
ಮಳೆಯಿಂದಾಗಿ ಅನೇಕ ಕೆರೆಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆ ಪರಿಣಾಮ ಚೆನ್ನೈ ಏರ್ ಪೋರ್ಟ್ ಮಳೆಯ ನೀರಿನಿಂದ ಆವೃತವಾಗಿದೆ. ಇದರಿಂದ ಇಲ್ಲಿಂದ ವಿಮಾನಯಾನವನ್ನು ರದ್ದುಗೊಳಿಸಲಾಗಿದೆ. ಮಳೆಯಬ್ಬರಕ್ಕೆ ಅವಾಂತರಗಳು ಮಾತ್ರವಲ್ಲದೇ ಜೀವಭಯವೂ ಕಾಡ್ತಿದೆ. ಪ್ರವಾಹದ ಮಧ್ಯೆ ಮೊಸಳೆಗಳು ಹೊರಬಂದು ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದ್ದು ಆತಂಕ ಹೆಚ್ಚಿದೆ. ಹರಿಯುವ ಮಳೆ ನೀರಿನಲ್ಲಿ ಹೊರ ಬಂದ ಮೊಸಳೆಯನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ.
2-3 ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು ಹೆಚ್ಚು ಮಳೆಯಾದ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಚೆನ್ನೈನಲ್ಲಿ 162 ರಿಲೀಫ್ ಕ್ಯಾಂಪ್ಗಳನ್ನು ಸರ್ಕಾರ ತೆರೆದಿದೆ. ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗ್ತಿದೆ. ಚೆನ್ನೈನಲ್ಲಿ ಗೋಡೆ ಕುಸಿತದಿಂದಾಗಿ ಇಬ್ಬರು ದುರ್ಮರಣಕ್ಕೀಡಾಗಿದ್ದು ಈಸ್ಟ್ ಕೋಸ್ಟ್ ರೋಡ್ನಲ್ಲಿ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಇನ್ನು ಜನರ ನೆರವಿಗೆ 18 ಸಾವಿರ ಪೊಲೀಸ್ ಸಿಬ್ಬಂದಿ ಧಾವಿಸಿದ್ದಾರೆ. ಮಾತ್ರವಲ್ಲದೇ ಭಾರತೀಯ ಸೇನೆಯೂ ರಕ್ಷಣಾ ಕಾರ್ಯಾಚರಣೆಗೆ ಇಳಿದಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ. ತಮಿಳುನಾಡಿನ ಬಹುತೇಕ ರೈಲ್ವೇ ನಿಲ್ದಾಣ ಜಲಾವೃತ ಜೊತೆಗೆ ಗುಡ್ಡ ಕುಸಿತದಿಂದಾಗಿ ಕೆಲವೆಡೆ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ. ಹೀಗಾಗಿ ತಮಿಳುನಾಡಿಗೆ ರಾಜ್ಯದಿಂದ ತೆರಳಬೇಕಿದ್ದ 10ಕ್ಕೂ ಹೆಚ್ಚು ರೇಲ್ವೇ ಸೇವೆ ರದ್ದುಗೊಳಿಸಲಾಗಿದೆ. ಒಟ್ಟಾರೆ ಮಿಚುವಾಂಗ್ ಚಂಡಮಾರುತ ತಮಿಳುನಾಡಿನ ಕರಾವಳಿ ಪ್ರದೇಶವನ್ನು ತಲ್ಲಣಗೊಳಿಸಿದ್ದು ಜನ ಕಂಗಾಲಾಗಿದ್ದಾರೆ.