ಹೊಸದಿಲ್ಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ‘ಡಾನಾ’ ಚಂಡಮಾರುತವು ಮುಂದಿನ 24 ಗಂಟೆಗಳಲ್ಲಿ ಅಂದರೆ ಗುರುವಾರ ರಾತ್ರಿ (ಅ.24) ಹಾಗೂ ಶುಕ್ರವಾರ (ಅ.25) ಒಡಿಶಾದ ಪುರಿ ಹಾಗೂ ಪಶ್ಚಿಮ ಬಂಗಾಳದ ಸಾಗರ ದ್ವೀಪ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
‘ಡಾನಾ’ ಚಂಡಮಾರುತ ಪ್ರಭಾವದಿಂದ ಬಿರುಗಾಳಿ ಸಹಿತ ದೇಶದ ಈ ವಿವಿಧ ರಾಜ್ಯಗಳಿಗೆ ಭರ್ಜರಿ ಮಳೆ ಆಗಲಿದೆ. ಪ್ರತಿ ಗಂಟೆಗೆ 100-110 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮುಂದಿನ ಎರಡು ದಿನದಲ್ಲಿ ಚಂಡಮಾರುತದ ವೇಗವೂ ಗಂಟೆಗೆ 120 ಕಿ.ಮೀ. ಹೆಚ್ಚಲಿದೆ. ಈ ಹವಾಮಾನ ವೈಪರೀತ್ಯ ತೀವ್ರಗೊಂಡು ಅ.24 25 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಲಿದೆ.
ಈ ಎರಡು ರಾಜ್ಯ ಸೇರಿ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಭಾರೀ ಮಳೆ ಆಗುತ್ತಿದೆ. ಇದೇ ಹವಾಮಾನ ವೈಪರೀತ್ಯ ಮುಂದಿನ ಮೂರು ದಿನವೂ ಮುಂದುವರಿಯಲಿದೆ ಹಾಗಾಗಿ ಬಂಗಾಳ ಕೊಲ್ಲಿಗೆ ಬುಧವಾರವೇ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಐಎಂಡಿ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಮಾತನಾಡಿ ಚಂಡಮಾರುತದಿಂದಾಗಿ ಭಾರೀ ಗಾಳಿ ಮಳೆಯು ಒಡಿಶಾಕ್ಕೆ ಹೆಚ್ಚು ಬಾಧೆಗೆ ಒಳಗಾಗಲಿದೆ ಎಂದು ಹೇಳಿದ್ದಾರೆ.
ಮಳೆ ಪ್ರವಾಹದಿಂದ ತೊಂದರೆ ಆಗಲಿರುವ ಸಂಭಾವ್ಯ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಎಲ್ಲ ನಿವಾಸಿಗಳ ಸ್ಥಳಾಂತರಿಸುವ’ಕಾರ್ಯ ಆರಂಭಿಸಬೇಕು ಎಂದು ಒಡಿಶಾ ಸರ್ಕಾರವು ಸೂಚಿಸಿದೆ. ಮುಂದಿನ ಮೂರು ದಿನಗಳಲ್ಲಿ ಡಾನಾ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳಲಿದೆ. ಅಲ್ಲಿಯವರೆಗೆ ಈ ಮೇಲಿನ ಎರಡು ರಾಜ್ಯಗಳಿಗೆ ವಿಪರೀತ ಮಳೆ ಆರ್ಭಟ ಕಂಡು ಬರಲಿದೆ ಎಂಬ ಮುನ್ಸೂಚನೆ ಇದೆ.
ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ 11 ಎನ್ಡಿಆರ್ಎಫ್ ತಂಡವನ್ನು ಒಡಿಶಾ ಹಾಗೂ 9 ತಂಡಗಳ ಪಶ್ಚಿಮ ಬಂಗಾಳಕ್ಕೆ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಸೇನೆ, ನೌಕದಳ, ಕರಾವಳಿ ಕಾವಲು ಪಡೆ ಹಡಗು, ಹೆಲಿಕಾಪ್ಟರ್ಗಳ ಸನ್ನದ್ಧವಾಗಿಡಲಾಗಿದೆ. ಹಾಗೆಯೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಒಡಿಶಾಕ್ಕೆ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ರಾಜ್ಯದ 14 ಜಿಲ್ಲೆಯ ಶಾಲೆ- ಕಾಲೇಜು, ಸಮೂಹ ಶಿಕ್ಷಣ ಇಲಾಖೆಯು ಬುಧವಾರದಿಂದ ಶುಕ್ರವಾರದವರೆಗೆ ರಜೆ ಘೋಷಿಸಲಾಗಿದೆ ಎಂದು ವಿಶೇಷ ವಿಪತ್ತು ನಿರ್ವಹಣಾ ಆಯುಕ್ತ ಡಿ.ಕೆ.ಸಿಂಗ್ ಮಾಹಿತಿ ನೀಡಿದ್ದಾರೆ.