ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಗ್ರಾಹಕರು ವಸ್ತುಗಳನ್ನು ಹಾಗೂ ಸೇವೆಗಳನ್ನು ಖರೀದಿಸುವಾಗ ಎಚ್ಚರಿಕೆಯನ್ನು ವಹಿಸಬೇಕು. ವಸ್ತುಗಳ ತೂಕ ಮತ್ತು ಅಳತೆ ಹಾಗೂ ಗುಣಮಟ್ಟವನ್ನು ಖಾತರಿ ಪಡಿಸಿಕೊಂಡು ಖರೀದಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ಯುಕೇಶ್ ಕುಮಾರ್ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ , ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಕಾನೂನು ಮಾಪನ ಶಾಸ್ತ್ರ ಇಲಾಖೆ , ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ , ರಾಷ್ಟ್ರೀಯ ಗ್ರಾಹಕರ ದಿನಾಚರಣೆ -2021 ನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಆರ್ಥಿಕತೆಯು ಗ್ರಾಹಕರ ಮೇಲೆ ನಿಂತಿದೆ.
ಗ್ರಾಹಕರು ವಸ್ತುಗಳನ್ನು ಖರೀದಿ ಮಾಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ವಸ್ತುಗಳನ್ನು ಖರೀದಿಸುವಾಗ ಅದರ ಕ್ವಾಲಿಟಿ ಮತ್ತು ಕ್ವಾಂಟಿಟಿಯನ್ನು ಪರೀಕ್ಷಿಸಿಕೊಳ್ಳಬೇಕು. ಹಲವು ಬಾರಿ ಗ್ರಾಹಕರಿಗೆ ಮೋಸ ಆಗುವ ಸಾದ್ಯತೆ ಇರುತ್ತದೆ. ಗ್ರಾಹಕರಿಗೆ ಮೋಸ ಆದರೆ ಗ್ರಾಹಕರ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾದೀಶರಾದ ಸಿ.ಹೆಚ್.ಗಂಗಾಧರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ 3 ಲಕ್ಷಕಿಂತ ಕಡಿಮೆ ಆದಾಯ ಇರುವ ಪ್ರತಿಯೊಬ್ಬರಿಗೂ ಉಚಿತ ಕಾನೂನು ಸಲಹೆ ಹಾಗೂ ಸೇವೆಯನ್ನು ನೀಡಲಾಗುತ್ತದೆ.
ಗ್ರಾಹಕರಿಗೆ ಮೋಸ ಉಂಟಾದರೆ ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿದರೆ ಉಚಿತ ಕಾನೂನು ಸೇವೆ ನೀಡಲಾಗುವುದು. ಗ್ರಾಹಕರು ವ್ಯವಹರಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಹಿರಿಯ ವಕೀಲರಾದ ಧನರಾಜ್ ಅವರು ಮಾತನಾಡಿ ರೈತರಿಗೆ ನೀಡುವ ಬಿತ್ತನೆ ಬೀಜಗಳಲ್ಲಿ ನ್ಯೂನ್ಯತೆ ಕಂಡುಬಂದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿ ಪರಿಹಾರ ಪಡೆಯಬಹುದು. ಆನ್ಲೈನ್ ವ್ಯವಹಾರದಲ್ಲಿ ಗ್ರಾಹಕರಿಗೆ ಮೋಸ ಉಂಟಾಗದಂತೆ ತಡೆಯಲು ಕೇಂದ್ರ ಸರ್ಕಾರವು 2021 ರಲ್ಲಿ ಇ – ಕಾಮರ್ಸ್ ರೂಲ್ಸ್ ಅನ್ನು ಜಾರಿಗೆ ತಂದಿದೆ ಎಂದು ಮಾಹಿತಿ ನೀಡಿದರು.
ವಕೀಲರಾದ ಕೆ.ವಿ.ಸುರೇಂದ್ರ ಕುಮಾರ್ ಅವರು ಮಾತನಾಡಿ ಹಣ ನೀಡಿ ವಸ್ತು ಮತ್ತು ಸೇವೆಯನ್ನು ಪಡೆಯುವವರನ್ನು ಗ್ರಾಹಕರು ಎಂದು ಕರೆಯುತ್ತೇವೆ . ಗ್ರಾಹಕರು ವಸ್ತುಗಳನ್ನು ಖರೀದಿಸಿದಾಗ ಕಡ್ಡಾಯವಾಗಿ ರಸೀದಿಯನ್ನು ಪಡೆಯಬೇಕು.
ಇದರಿಂದ ವಸ್ತುಗಳ ಗುಣಮಟ್ಟ ಮತ್ತು ಅಳತೆಯಲ್ಲಿ ಮೋಸ ಉಂಟಾದರೆ ಪರಿಹಾರವನ್ನು ಪಡೆಯಬಹುದು. ಗ್ರಾಹಕರಿಗೆ ಮೋಸ ಉಂಟಾದರೆ ವಸ್ತುವನ್ನು ಖರೀದಿಸಿದ 2 ವರ್ಷದೊಳಗೆ ದೂರುಗಳನ್ನು ಗ್ರಾಹಕರ ವ್ಯಾಜ್ಯಗಳ ಆಯೋದಲ್ಲಿ ಸಲ್ಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮತದಾರರ ನೋಂದಣಿ ಕುರಿತ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಸೋಮಶಂಕರಪ್ಪ , ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಎಂ.ಪಿ.ಪ್ರಭುದೇವ್ , ಶಿಕ್ಷಣ ಇಲಾಖೆಯ ಅಧಿಕಾರಿಯಾದ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.