ಶ್ರೀನಿವಾಸಪುರ: ವಿದ್ಯಾರ್ಥಿಗಳು ಕುತೂಹಲ ಉಳಿಸಿಕೊಳ್ಳಬೇಕು. ಕುತೂಹಲವೇ ಹೊಸ ಸಂಶೋಧನೆಗೆ ದಾರಿ ಮಾಡಿಕೊಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು.
ತಾಲ್ಲೂಕಿನ ಬೈರಪಲ್ಲಿ ಗ್ರಾಮದ ಭೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಭಾರತ ಸರ್ಕಾರದ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಟೆಕ್ನಾಲಜಿ ಕಮ್ಯುನಿಕೇಷನ್ ಸಹಕಾರದೊಂದಿಗೆ, ಕೆ.ಸಿ.ರೆಡ್ಡಿ ಸರೋಜಮ್ಮ ಕ್ಷೇಮಾಭಿವೃಧ್ಧಿ ಫೌಂಡೇಷನ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕು ಮಂಟ್ಟದ ಪ್ರೌಢ ಶಾಲಾ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಎಲ್ಲ ವರ್ಗದ ಜನರಲ್ಲೂ ಒಂದು ಮಟ್ಟದಲ್ಲಿ ಮೂಢನಂಬಿಕೆ ಮನೆಮಾಡಿದೆ. ಅರಿವಿಲ್ಲದೆ ಅದರ ಪಾಲನೆಯಾಗುತ್ತಿದೆ. ಆದ್ದರಿಂದ ಅರ್ಥವಾಗದ ವಿಷಯಗಳ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವಲ್ಲಿ ವಿದ್ಯಾವಂತ ಸಮುದಾಯ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಭೈರವೇಶ್ವರ ವಿದ್ಯಾ ಸಂಸ್ಥೆಗಳ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ಶಿಕ್ಷಣ ವ್ಯಕ್ತಿಗೆ ಶಕ್ತಿ ನೀಡುವ ಸಾಧನ. ಶಿಕ್ಷಣದ ಮೂಲಕ ಪಡೆದುಕೊಂಡ ಶಕ್ತಿ ಸಮಾಜದ ಒಳಿತಿಗೆ ಬಳಕೆಯಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಬದುಕಿಗೆ ಹೊಸ ಆಯಾಮ ನೀಡಿದೆ. ಆದರೆ ಕೆಲವರು ವಿಜ್ಞಾನದ ಸಂಶೋಧನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.
ಫೌಡೇಷನ್ ಅಧ್ಯಕ್ಷೆ ವಸಂತ ಕವಿತಾ ಮಾತನಾಡಿದರು.
ಪ್ರಾಂಶುಪಾಲ ಗಂಗಾಧರ ಗೌಡ, ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ, ಇಸಿಒಗಳಾದ ಅಮರನಾಥ್, ಲಕ್ಷ್ಮೀನಾರಾಯಣ, ಕೋದಂಡಪ್ಪ, ಸಂಯುಕ್ತ, ತಾಲ್ಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ ಇದ್ದರು.