ಕೋಲಾರ:- ಸಹಕಾರ ರಂಗದಲ್ಲಿ ಟೀಕೆಗಳು ಸಹಜ ಆದರೆ ನಾವು ಜನರ ಹಣಕ್ಕೆ ಕಾವಲುಗಾರರಂತೆ ಕೆಲಸ ಮಾಡುತ್ತಿದ್ದೇವೆಯೇ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಮೂಲಕ ಸಂಸ್ಥೆ ಕಟ್ಟುವ ಕೆಲಸ ಮಾಡಬೇಕು ಎಂದು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್,ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ, ಕಾರಂಜಿಕಟ್ಟೆಯ ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೬೯ನೇ ಅಖಿಲಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಹಕಾರ ರತ್ನ ಪುರಸ್ಕೃತರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಕೆಟ್ಟ ಹೆಸರು, ಒಳ್ಳೆಯ ಹೆಸರು ಎರಡೂ ಬರುತ್ತದೆ ಆದರೆ ಅದೆಲ್ಲವನ್ನು ಮೀರಿ ನಾವು ಸರಿಯಾಗಿದ್ದೇವೆಯೇ, ಸಹಕಾರ ತತ್ವಗಳಿಗೆ ಗೌರವ ನೀಡುತ್ತಿದ್ದೇವೆಯೇ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಂಡು ಸಹಕಾರಿಗಳು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಸ್ಮರಣೀಯರಾಗಿದ್ದ ಮಳ್ಳೂರು ಪಾಪಣ್ಣ ಅವರು ಸ್ಥಾಪಿಸಿದ್ದ ಸಹಕಾರಿ ಆಸ್ಪತ್ರೆ ಪುನಶ್ಚೇತನಕ್ಕೆ ಸಹಕಾರಿ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದ ಅವರು, ಟೀಕೆ ಮಾಡೋರು ನೂರಾರು ಮಂದಿ ಇದ್ದೇ ಇರುತ್ತಾರೆ ಆದರೆ ನಮ್ಮ ಆತ್ಮಸಾಕ್ಷಿಗೆ ವಂಚನೆ ಮಾಡದಂತೆ ಕೆಲಸ ನಿರ್ವಹಿಸೋಣ, ಸಹಕಾರ ರಂಗವನ್ನು ಕಟ್ಟೋಣ ಎಂದರು.
ಕೋಚಿಮುಲ್ ವಿಭಜನೆ ಧ್ವನಿಯೆತ್ತಲಿಲ್ಲ
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಘಟಾನುಘಟಿ ನಾಯಕರಿದ್ದರೂ ಸಹಾ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಒಕ್ಕೂಟ ಇನ್ನೂ ಅಸ್ಥಿತ್ವದಲ್ಲೇ ಇದೆ, ಇದರ ವಿರುದ್ದ ಯಾರೂ ಮಾತನಾಡುತ್ತಿಲ್ಲ ಕಾರಣ ರೈತರ ಹಿತ ಮುಖ್ಯವೆಂದು ಭಾವಿಸಿದ್ದಾರೆ ಆದರೆ ಕೋಲಾರ,ಚಿಕ್ಕಬಳ್ಳಾಪುರ ಒಕ್ಕೂಟ ಬೇರ್ಪಡಿಸಲು ನಡೆದ ಯತ್ನ ಖಂಡನೀಯ ಆದರೆ ಸಹಕಾರ ವ್ಯವಸ್ಥೆಯಲ್ಲಿ ಇರುವವರು ಇದರ ವಿರುದ್ದ ಧ್ವನಿಯೆತ್ತಲಿಲ್ಲ ಎಂದು ವಿಷಾದಿಸಿದರು.
ಸಹಕಾರಿ ವ್ಯವಸ್ಥೆಗೆ ಕೆ.ಶ್ರೀನಿವಾಸಗೌಡರ ನಂತರ ಹೆಸರು ತಂದವರು ಜಿಲ್ಲೆಯಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರು ಎಂದ ಅವರು, ಸಹಕಾರಿ ಅಭಿವೃದ್ದಿಯ ನಡುವೆಯೂ ೬೯ ವರ್ಷಗಳ ನಂತರವೂ ಇನ್ನೂ ಸಹಕಾರಿ ರಂಗದಲ್ಲಿ ಸರ್ವರಿಗೂ ಪಾಲು ಸಿಕ್ಕಿಲ್ಲ, ಕೆಲವೇ ಜನರ ಹಿಡಿತದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿ, ಹೊಸಬರಿಗೆ ಜವಾಬ್ದಾರಿ ಸಿಗಬೇಕು ಎಂದರು.
ಮಳ್ಳೂರಿನಲ್ಲಿ ಸಪ್ತಾಹ ಮಾಡಿ ಕ್ಷಮೆಯಾಚಿಸಿ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಸಹಕಾರ ಆಸ್ಪತ್ರೆ ಸ್ಥಾಪಿಸಿದ್ದು, ಮಳ್ಳೂರಿನಲ್ಲಿ ಪಾಪಣ್ಣ ಅವರು, ಆದರೆ ಇಂದು ಆಸ್ಪತ್ರೆ ಮುಚ್ಚಿದೆ, ಈ ಹಿನ್ನಲೆಯಲ್ಲಿ ಅಲ್ಲೇ ರಾಜ್ಯಮಟ್ಟದ ಸಹಕಾರಿ ಸಪ್ತಾಹ ಆಚರಿಸುವ ಮೂಲಕ ಆಸ್ಪತ್ರೆ ಪುನಶ್ಚೇತನಗೊಳಿಸಿ ಪಾಪಣ್ಣನವರ ಕ್ಷಮೆಯಾಚಿಸಬೇಕು ಎಂದರು.
ಸಪ್ತಾಹ ಕಾರ್ಯಕ್ರಮಕ್ಕೆ ಸೀಮಿತಬೇಡ, ಕಳೆದ ವರ್ಷದ ಬೆಳವಣಿಗೆ ಕುರಿತು ಚರ್ಚೆಯಾಗಲಿ, ಸಹಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು, ಜಿಲ್ಲೆಯಲ್ಲಿ ಆತ್ಮಹತ್ಯೆ ತಡೆಗೆ ಎಂಪಿಸಿಎಸ್ ಸಹಕಾರಿ ವ್ಯವಸ್ಥೆಯೇ ಆತ್ಮಸ್ಥೈರ್ಯ ತುಂಬಿದ್ದು, ಅಂತಹ ಕೋಚಿಮುಲ್ ವಿಭಜನೆಯಲ್ಲಿ ರಾಜಕೀಯ ಹಿತಾಸಕ್ತಿ ಕೆಲಸ ಮಾಡಿತು ಎಂದು ವಿಷಾದಿಸಿದರು.
ಸಣ್ಣಪುಟ್ಟ ದೋಷ ಸಾಮಾನ್ಯ, ವ್ಯಕ್ತಿ ಪ್ರತಿಷ್ಟೆ ಬಿಟ್ಟು ಸಮಾಜದ ಪ್ರತಿಯೊಬ್ಬರಿಗೂ ಸಹಕಾರಿ ಸದಸ್ಯತ್ವ ಸಿಗುವಂತೆ ಮಾಡಬೇಕು, ರಾಜಕೀಯ ಪಕ್ಷಗಳ ಸಾಲ ಮನ್ನಾ ಘೋಷಣೆಯಿಂದ ಸಹಕಾರಿ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ವಿ.ಮುನಿರಾಜು ಮಾತನಾಡಿ, ಸಹಕಾರಿ ಸಪ್ತಾಹ ಹಬ್ಬವಾಗಿ ಆಚರಿಸಬೇಕು, ಶಾಸ್ತ್ರಿಯವರಿಗೆ ಸಹಕಾರಿ ಖಾತೆಯೇ ಇಷ್ಟವಾಗಿತ್ತು ಎಂದ ಅವರು,ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕೆ.ಸಿ.ರೆಡ್ಡಿ, ಎಂ.ವಿ.ಕೃಷ್ಣಪ್ಪ, ಪಾಪಣ್ಣ, ನಾರಾಯಣಗೌಡ, ಸೀತಪ್ಪ, ಶಾಸಕ ಕೆ.ಶ್ರೀನಿವಾಸಗೌಡ ಮತ್ತಿತರ ಸೇವೆಯನ್ನು ಮರೆಯಲಾಗದು ಎಂದು ತಿಳಿಸಿ, ಹೊಸ ರೈತರಿಗೂ ಸಾಲ ನೀಡಲು ಡಿಸಿಸಿ ಬ್ಯಾಂಕ್ ಮುಂದಾಗಲಿ ಎಂದರು.
ಸಹಕಾರ ಕಾಯಿದೆ ಗೊಂದಲ ಪರಿಹರಿಸಿ
ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್ ಮಾತನಾಡಿ,೧೪೦ ಕೋಟಿ ಜನಸಂಖ್ಯೆಯಲ್ಲಿ ಕೇವಲ ೩೦ ಕೋಟಿ ಸಹಕಾರಿ ಸಂಘದ ಸದಸ್ಯರಿದ್ದಾರೆ, ಕೆಲವೇ ಮಂದಿಗೆ ಈ ಸಂಘಗಳು ಸೀಮಿತವಾಗಿದ್ದು, ಇದು ಬದಲಾವಣೆಯಾಗಬೇಕು,ಆಧಾರ್,ರೇಷನ್ ಕಾರ್ಡ್ ಕಡ್ಡಾಯದ ರೀತಿ ಸಹಕಾರ ಸಂಘದ ಸದಸ್ಯತ್ವ ಕಡ್ಡಾಯವಾಗಬೇಕು, ಪ್ರತಿ ಶಾಲೆ,ಕಾಲೇಜುಗಳಲ್ಲೂ ಸಹಕಾರ ಸಂಘ ರಚನೆಯಾಗಿ ಅಲ್ಲಿನ ಮಕ್ಕಳ ಕಲಿಕಾ ಸಾಮಗ್ರಿ ಪೂರೈಸುವ ಕೇಂದ್ರಗಳಾಗಬೇಕು ಎಂದರು.
ಅನುಮಾನ,ಗೊಂದಲಗಳಿಲ್ಲದಂತೆ ಸಹಕಾರಿ ಕಾಯಿದೆ ನಿಯಮ ಸರಳೀಕರಿಸಿ ಪರಿಷ್ಕರಿಸಬೇಕು, ಪೂರ್ಣ ಕಾಯಿದೆ ಅರಿವು ಯಾರಿಗೂ ಇಲ್ಲ. ಏಕ ರೂಪ ಸಾಫ್ಟ್‌ವೇರ್ ಅಭಿವೃದ್ದಿಪಡಿಸಿ ಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರವೇ ಒದಗಿಸುವ ಮೂಲಕ ಡಿಜಟಲೀಕರಣಕ್ಕೆ ಒತ್ತು ನೀಡಿ ಪಾರದರ್ಶಕತೆಗೆ ಅವಕಾಶ ಕಲ್ಪಿಸಬೇಕು ಎಂದರು.
ಸಹಕಾರ ರತ್ನ ಪುರಸ್ಕೃತರಾದ ಘಟ್ಟಕಾಮಧೇನಹಳ್ಳಿ ಶಾಂತಮ್ಮ, ಕ್ಯಾಲನೂರು ನೂಲು ಬಿಚ್ಚಾಣಿಕೆ ಕೈಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಷೇಕ್ ಅಹಮದ್ ಅವರನ್ನು ಹಾಗೂ, ಪತ್ರಕರ್ತರಾದ ಬಿ.ವಿ.ಗೋಪಿನಾಥ್, ಕೆ.ಎಸ್.ಗಣೇಶ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಮುನಿರಾಜು ಅವರನ್ನು ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಯೂನಿಯನ್ ಅಧ್ಯಕ್ಷ ಡಾ.ಇ.ಗೋಪಾಲಪ್ಪ ವಹಿಸಿದ್ದು, ಸಪ್ತಾಹದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಯೂನಿಯನ್ ಸಿಇಒ ಸಿಎಂ.ಲಕ್ಷ್ಮಿ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಯೂನಿಯನ್ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಪೆಮ್ಮಶೆಟ್ಟಿಹಳ್ಳಿ ಸುರೇಶ್,ಅರುಣಮ್ಮ,ಷೇಕ್ ಮೊಹಮದ್, ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಕೋ.ನಾ.ಮಂಜುನಾಥ್, ಸಿಇಒ ಜಿ.ಗಂಗಾಧರ್, ನರ್ಮದಾ ಮಹಿಳಾ ಪತ್ರಿನ ಸಹಕಾರ ಸಂಘದ ಕಾರ್ಯದರ್ಶಿ ಸುನಿತಾ, ಯೂನಿಯನ್ ರವಿ, ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.