ರಾಜ್ಯದಲ್ಲಿ ಮುಖ್ಯ ಮಂತ್ರಿ ಬದಲಾವಣೆ ವಿಚಾರ ವಿರೋಧ ಪಕ್ಷಗಳ ಸೃಷ್ಟಿ:ಸಚಿವ ಡಾ. ಎಂ.ಸಿ.ಸುಧಾಕರ್

ಶ್ರೀನಿವಾಸಪುರ: ರಾಜ್ಯದಲ್ಲಿ ಮುಖ್ಯ ಮಂತ್ರಿ ಬದಲಾವಣೆ ವಿಚಾರ ವಿರೋಧ ಪಕ್ಷಗಳ ಸೃಷ್ಟಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದರು.
ಪಟ್ಟಣದಲ್ಲಿ ಈಚೆಗೆ ಕೊಲೆಯಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷಗಳ ಮುಖಂಡರು ಮುಖ್ಯ ಮಂತ್ರಿ ಬದಲಾವಣೆ ಕುರಿತು ಅನಗತ್ಯ ಗೊಂದಲ ಉಂಟುಮಾಡುತ್ತಿದ್ದಾರೆ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಮಾರ್ಗದರ್ಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲಾಗುವುದು. ಈ ಕ್ಷೇತ್ರದಲ್ಲಿ ಸೋಲು ಗೆಲುವು ಸಾಮಾನ್ಯ. ರಮೇಶ್ ಕುಮಾರ್ ಅವರು ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದರೂ ಚುನಾವಣೆಯಲ್ಲಿ ಹಿನ್ನಡ ಉಂಟಾಯಿತು. ಆದರೂ ಪಕ್ಷ ಅವರ ಸೇವೆ ಬಳಸಿಕೊಳ್ಳಲಿದೆ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಒಳ್ಳೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಗೆಲುವು ಸಾಧಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಅವರ ಕೊಲೆ ಖಂಡನೀಯ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳಲಾಗದು. ನ್ಯಾಯಾಲಯ ನೀಡುವ ತೀರ್ಪಿಗೆ ಬದ್ಧರಾಗಿರಬೇಕಾಗುತ್ತದೆ. ಶ್ರೀನಿವಾಸನ್ ಕೊಲೆ ಸಂಬಂಧ ಗೃಹ ಸಚಿವರೊಂದಿಗೆ ಮಾತನಾಡಿದ್ದೇನೆ. ಶ್ರೀನಿವಾಸನ್ ಗೃಹ ಸಚಿವರಿಗೂ ಆಪ್ತರಾಗಿದ್ದರು. ಆರೋಪಿಗಳ ವಿರುದ್ಧ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಮುಖಂಡರಾದ ಸಂಜಯ್ ರೆಡ್ಡಿ, ಕೆ.ಕೆ.ಮಂಜುನಾಥರೆಡ್ಡಿ, ಪುರಸಭಾ ಸದಸ್ಯರಾದ ಭಾಸ್ಕರ್, ನಾಗರಾಜ್, ಹರೀಶ್ ಯಾದವ್ ಇದ್ದರು.