ಕೋಲಾರ : ಅಲ್ಪಸಂಖ್ಯಾತ ಸಮುದಾಯಗಳಲ್ಲಿ ವಿವಿಧ ಇಲಾಖೆಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತು ತಿಳುವಳಿಕೆ ಹಾಗೂ ಜಾಗೃತಿ ಬಗ್ಗೆ ಮೂಡಿಸುವ ಅಗತ್ಯವಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿಯಮಾನುಸಾರ ರೂಪಿಸಿರುವ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದ್ದು , ಈ ಬಗ್ಗೆ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಇಂದು ಉಪವಿಭಗಾಧಿಕಾರಿಗಳ ಕಂದಾಯ ನ್ಯಾಯಾಲಯ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನದ ತ್ರೈಮಾಸಿಕ ಅವಧಿಯ ಪ್ರಗತಿ ಪರಿಶೀಲನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಪ್ರತಿ ಇಲಾಖೆಗಳು ತಮಗೆ ಬರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನವನ್ನು ಸರ್ಕಾರ ನಿಗದಿಪಡಿಸಿರುವ ನಿಯಮಗಳ ಅನುಸಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರತ್ಯೇಕಿಸಿ, ಮೀಸಲಿಡಬೇಕು. ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಹಂತದಲ್ಲಿ ಸರ್ಕಾರಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮತ್ತು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಸೂಚಿಸಿದರು.
ಅರ್ಹರಿಗೆ ಯೋಜನೆಯ ಲಾಭ ಮುಟ್ಟಿಸಲು ಪ್ರಯತ್ನಿಸಿ
ಸರ್ಕಾರಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮತ್ತು ಜಾಗೃತಿ ಮೂಡಿಸಿ ಎಂದಿರುವ ಜಿಲ್ಲಾಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಗಳ ಲಾಭವನ್ನು ಮುಟ್ಟಿಸಲು ಪ್ರಯತ್ನಿಸಬೇಕು. ಆ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಉತ್ತಮವಾದ ಮೂಲಸೌಕರ್ಯಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಯಾವುದೇ ದೂರು ಬರದಂತೆ ಅಧಿಕಾರಿಗಳು ಕ್ರಮವಹಿಸಬೇಕು
ಸರ್ಕಾರದಿಂದ ಜಿಲ್ಲಾಮಟ್ಟದ ಸಮಿತಿಗೆ ನೇಮಕವಾದ ಜನಪ್ರತಿನಿಧಿಗಳು ತಮ್ಮ ಕಚೇರಿಗೆ ಬಂದು ಇಲಾಖೆಯಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳ ಕುರಿತು ಮಾಹಿತಿ ಕೇಳಿದಾಗ ಸಮಗ್ರ ಮಾಹಿತಿ ನೀಡಬೇಕು. ಈ ಕುರಿತು ಯಾವುದೇ ಸಮಿತಿಗಳ ಸದಸ್ಯರ ದೂರು ಬರದಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಅವರು ಸೂಚಿಸಿದರು.
ಅಧಿಕಾರಿಗಳು ಕ್ರಿಯಾಯೋಜನೆ ಅನುಸಾರ ಕ್ರಮ ಕೈಗೊಳ್ಳಬೇಕು.
‘ಸರ್ಕಾರದಿಂದ ಬಿಡುಗಡೆ ಆಗುವ ಅನುದಾನಕ್ಕೆ ಅನುಗುಣವಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಅಧಿಕಾರಿಗಳು ಕ್ರಿಯಾಯೋಜನೆ ಅನುಸಾರ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಸರ್ಕಾರದ ಅನುದಾನದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಜಿಲ್ಲಾ ಸಮಿತಿಯ ಪ್ರಮುಖರೆಲ್ಲರೂ, ಸರ್ಕಾರಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮತ್ತು ಜಾಗೃತಿ ಮೂಡಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಗಳ ಲಾಭವನ್ನು ಮುಟ್ಟಿಸಲು ಪ್ರಯತ್ನಿಸಬೇಕು ಎಂದುದ ಅಭಿಪ್ರಾಯ ಪಟ್ಟಿದ್ದಾರೆ.
ಈ ವೇಳೆ ವಿವಿಧ ಇಲಾಖೆಗಳ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವೆಚ್ಚ ಮಾಡಿರುವ ಅನುದಾನ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ವರದಿ ಮಂಡಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ ನಿಖಿಲ್, ಕೆ ಜಿ ಎಫ್ ಪೊಲೀಸ್ ಉಪಾಧಿಕ್ಷಕ ಪಾಂಡುರಂಗ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಸುಮಾ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಮೈಲಾರಪ್ಪ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.