ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ
ಕೋಲಾರ : ಹೆಣ್ಣು ಮಕ್ಕಳ ಮೇಲೆ ನಡೆದಿರುವ ಹಲ್ಲೆಯಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಲು ಹಿಂಜರಿಯುತ್ತಾರೆ . ಆದ್ದರಿಂದ ಯಾವುದೇ ಹೆಣ್ಣು ಮಕ್ಕಳು ನಿರ್ಭಯವಾಗಿ ಶಾಲಾ ಕಾಲೇಜಿಗೆ ಬರುವಂತಹ ವಾತಾವರಣ ಕಲ್ಪಿಸಿ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ನೆಹರು ಚ ಓಲೇಕಾರ ಅವರು ಅಧಿಕಾರಿಗಳಿಗೆ ಸೂಚಿಸಿದರು .
ಇಂದು ಶ್ರೀನಿವಾಸಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ಥರ ಯೋಗಕ್ಷೇಮ ವಿಚಾರಿಸಿ ಅವರಿಗೆ ಧೈರ್ಯ ತುಂಬಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು .
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದಿರುವ ಹಲ್ಲೆಯಿಂದ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳುಹಿಸಲು ಭಯ ಪಡುವಂತಹ ಸಂದರ್ಭ ನಿರ್ಮಾಣವಾಗಿದೆ .
ಇದು ಅಹಿತಕಾರಕ ಘಟನೆ . ಇಂತಹ ಘಟನೆಗಳು ಮರುಕಳಿಸಬಾರದು , ಈ ಘಟನೆಯನ್ನು ಗಂಭೀರವಾಗಿ ಪರಿಗಣಿಲಾಗಿದೆ ಎಂದು ಅವರು ತಿಳಿಸಿದರು . ಹಲ್ಲೆಗೊಳಗಾದ 5 ಜನ ಸಂತ್ರಸ್ಥರಿಗೆ ತಲಾ 50 ಸಾವಿರ ಪರಿಹಾರ ಧನವನ್ನು ಜಿಲ್ಲಾಡಳಿತ ವತಿಯಿಂದ ನೀಡಲಾಗಿದೆ . ಉಳಿದ 3 ಜನ ಸಂತ್ರಸ್ಥರಿಗೆ ಶೀಘ್ರದಲ್ಲಿ ಪರಿಹಾರ ಧನ ನೀಡಲಾಗುವುದು .
ಈ ಘಟನೆಯಲ್ಲಿ 11 ಜನರ ಮೇಲೆ ಪ್ರಕರಣ ದಾಖಲಾಗಿದ್ದು 7 ಜನರನ್ನು ಅರೆಸ್ಟ್ ಮಾಡಲಾಗಿದೆ . ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು .
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾದ ವೆಂಕಟೇಶ ದೊಡೇರಿ , ಕಾರ್ಯದರ್ಶಿಗಳಾದ ಜಯಪಾಲಯ್ಯ , ಜಿಲ್ಲಾಧಿಕಾರಿಗಳಾದ ಡಾ | ಆರ್ , ಸೆಲ್ವಮಣಿ , ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕ ಕಿಶೋರ್ ಬಾಬು , ತಶೀಲ್ದಾರ್ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .