ಕೋವಿಡ್ ೪ ನೇ ಅಲೆಯನ್ನು ಎದುರಿಸಲು ಭಾ. ರೆಡ್ ಕ್ರಾಸ್ ಸಂಸ್ಥೆ ಸಾರ್ವಜನಿಕರಿಗೆ ೧೦ ಲಕ್ಷ ಮಾಸ್ಕ್ ವಿತರಿಸಲು ಸಿದ್ದತೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್-೧೯ರ ೪ ನೇ ಅಲೆಯನ್ನು ಎದುರಿಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರಿಗೆ ೧೦ ಲಕ್ಷ ಮಾಸ್ಕ್ ವಿತರಿಸಲು ಸಿದ್ದತೆ ನಡೆಸಿಕೊಂಡಿದ್ದು, ಇದರ ಜತೆಯಲ್ಲೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಡಾ.ಎನ್.ಗೋಪಾಲಕೃಷ್ಣೇಗೌಡ ತಿಳಿಸಿದರು

ನಗರದ ಪತ್ರಕರ್ತರ ಭವನದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರಿಗಾಗಿ ೫೫೦೦ ಮಾಸ್ಕ್ ಗಳನ್ಬು ವಿತರಿಸಿ ಅವರು ಮಾತನಾಡುತ್ತಿದ್ದರು.

ರೆಡ್ ಕ್ರಾಸ್ ಸಂಸ್ಥೆ ನಿಸ್ವಾರ್ಥ ಸೇವೆಗೆ ಮತ್ತೊಂದು ಹೆಸರಾಗಿದೆ. ಸಾರ್ವಜನಿಕರ ಸೇವೆಗೆ ಸರ್ಕಾರದೊಂದಿಗೆ ಕೈ ಜೋಡಿಸಿದ್ದು ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದರು.
ಕೋವಿಡ್ ಮಹಾಮಾರಿಯಿಂದ ಕಳೆದ ೩ ವರ್ಷಗಳಿಂದ ಅನುಭವಿಸಿದ ಸಮಸ್ಯೆಗಳು ಸುಧಾರಣೆಯಾಗಿದೆ ಎನ್ನುವಷ್ಟರಲ್ಲೇ ಮತ್ತೆ ೪ನೇ ಅಲೆ ಕಾಣಿಸಿ ಕೊಳ್ಳಲಿದೆ ಎಂಬ ಸರ್ಕಾರದ ಸೂಚನೆಗೆ ಮುನ್ನವೇ ರೆಡ್ ಕ್ರಾಸ್ ಸಂಸ್ಥೆಯಿಂದ ಬುಧವಾರವೇ ಜಿಲ್ಲಾ ಪಂಚಾಯಿತಿಯಲ್ಲಿ ಕೋವಿಡ್ ಕುರಿತು ಅರಿವು ಮೂಡಿಸಿ ಲಸಿಕೆ ಪಡೆದ ಪ್ರತಿಯೊಬ್ಬರು ಬೂಸ್ಟರ್ ಡೋಸ್ ಪಡೆಯಲು ಸೂಚಿಸಿ ಮಾಸ್ಕ್ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ೧೬ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು,ರೆಡ್ ಕ್ರಾಸ್ ಸಂಸ್ಥೆಯಿಂದ ೧೦ ಲಕ್ಷ ಮಾಸ್ಕ್ ವಿತರಿಸುವ ಗುರಿ ಹೊಂದಿರುವುದಾಗಿ ತಿಳಿಸಿದ ಅವರು ಈಗಾಗಲೇ ೭ ಲಕ್ಷ ಮಾಸ್ಕ್ ನಮ್ಮ ಬಳಿ ಸಿದ್ದವಿದೆ ಎಂದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಮತ್ತು ಪತ್ರಕರ್ತರ ಸಂಘದ ಧ್ಯೇಯಗಳು ನಿಸ್ವಾರ್ಥತೆಯಿಂದ ಕೂಡಿವೆ. ಯುದ್ದದ ಭೂಮಿಯಲ್ಲೂ ಸಹ ರೆಡ್‌ಕ್ರಾಸ್ ಸಂಸ್ಥೆ ಸೇವೆ ಸಲ್ಲಿಸಲು ಯಾರ ಅಡ್ಡಿ ಅತಂಕಗಳು ನಿರ್ಬಂಧನೆ ಇರುವುದಿಲ್ಲ. ವಿಶ್ವದ ಯಾವ ಮೂಲೆಗೆ ಹೋದರು ಗೌರವವಿದೆ. ಅದೇ ರೀತಿ ಪತ್ರಕರ್ತರು ಸಾರ್ವಜನಿಕರಿಗೆ ನೈಜ ವರದಿಗಳನ್ನು ಮಾಡಲು ಸಾಮಾನ್ಯ ಜನತೆಗಿಂತ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಗೌರವ ಪಡೆದಿದ್ದಾರೆ ಎಂದರು.
ಸಮಾಜಮುಖಿ ಆಲೋಚನೆ ಇರುವವರು ರೆಡ್‌ಕ್ರಾಸ್ ಸಂಸ್ಥೆ ಸದಸ್ಯತ್ವ ಪಡೆಯಬಹುದಾಗಿದ್ದು, ರೆಡ್ ಕ್ರಾಸ್ ಸಂಸ್ಥೆಯು ಮತ್ತಷ್ಟು ವಿಸ್ತರಿಸುವ ಮೂಲಕ ಸಮಾಜದ ಶಕ್ತಿಯಾಗಿ ಪರಿವರ್ತನೆಯಾಗಬೇಕೆಂದು ಆಶಿಸಿದರು.

ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಸಾಮಾಜಿಕ ಸೇವಾ ಕಾಳಜಿ ಅಭಿನಂದನೀಯ. ಪ್ರಥಮವಾಗಿ ನಗರ ಸ್ವಚ್ಚತೆಯ ಹೊಣೆ ಹೊತ್ತ ಪೌರಕಾರ್ಮಿಕರಿಗೆ, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರಿಗೂ ಮಾಸ್ಕ್ ವಿತರಿಸಬೇಕೆಂದರು.

ರೆಡ್ ಕ್ರಾಸ್ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಜಿ.ಶ್ರೀನಿವಾಸ್ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯ ಪ್ರಾರಂಭವಾಗಿ ಶತಮಾನೋತ್ಸವ ಅಂಗವಾಗಿ ಕೋವಿಡ್ ನಾಲ್ಕನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ವಾರಿರ‍್ಸ್ಗಳಿಗೆ ರಾಜ್ಯಾದ್ಯಂತ ಮಾಸ್ಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯು ಅರೋಗ್ಯ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುವ ಮೂಲಕ ವಿಶ್ವದಲ್ಲೇ ಪ್ರಚಲಿತದಲ್ಲಿದೆ ಎಂದರು.

ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಕೆ.ಎಸ್. ಗಣೇಶ್ ಮಾತನಾಡಿ, ಕೋವಿಡ್-೧೯ರ ಮೊದಲನೇ, ಎರಡನೇ ಹಂತದಲ್ಲಿ ಅನೇಕ ಮಂದಿ ಆತ್ಮೀಯರು, ಗಣ್ಯರು, ಸಮಾಜ ಸೇವಕರನ್ನು, ಬಂದು ಬಳಗವನ್ನು ಕಳೆದು ಕೊಂಡು ಮೂರನೇ ಹಂತದಲ್ಲಿ ಮುಂಜಾಗೃತೆ ಪಾಲನೆಯಿಂದ ಸುಧಾರಣೆ ಕಂಡು ಕೊಂಡ ನಂತರವೂ ೪ನೇ ಆಲೆಯು ಯಾರ ರೀತಿ ಪರಿಣಾಮ ಬೀರುವುದು ಎಂದು ನಿರೀಕ್ಷಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವುದರಿಂದ ಮಾಸ್ಕ್ ಬಳಕೆಯು ಮುಂಜಾಗೃತಿಯ ಸಾಧನವಾಗಿದೆ ಎಂದು ಅಭಿಪ್ರಾಯ ಪಟ್ಟರು.

ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಆರ್ ಶ್ರೀನಿವಾಸ್ ಮಾತನಾಡಿ ನಾವುಗಳ ಶೈಕ್ಷಣಿಕ ಸೇವೆಯ ಜತೆಗೆ ಸಾಮಾಜಿಕ ಕಾಳಜಿಯಿಂದ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲವೆ ಮಂದಿಯ ಕಪಿಮುಷ್ಠಿಗೆ ಸಿಲುಕಿದ್ದ ರೆಡ್‌ಕ್ರಾಸ್ ಸಂಸ್ಥೆ ಇಂದು ಸಾಮಾಜಿಕ ಚಟುವಟಿಕೆಗಳೊಂದಿಗೆ ಮನೆ ಮನೆ ಮಾತಾಗಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಉಪಸಭಾಪತಿ ಆರ್.ಶ್ರೀನಿವಾಸನ್ ಮಾತನಾಡಿ ಪೌರಕಾರ್ಮಿಕರಿಗೆ ವಿಶೇಷವಾದ ಮಾಸ್ಕ್ ತಯಾರಿಸಿದೆ. ನಾಳೆಯಿಂದಲೇ ಅದನ್ನು ವಿತರಿಸಲು ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.

ರೆಡ್ ಕ್ರಾಸ್ ಸಂಸ್ಥೆಯ ವೆಂಕಟಕೃಷ್ಣ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ನಿಸ್ವಾರ್ಥ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ ಬಂದಿದ್ದು ಅಂತರಾಷ್ಟಿçಯ ಮಟ್ಟದಲ್ಲೂ ಈ ಸಂಸ್ಥೆಗೆ ಹಲವಾರು ಸಂಸ್ಥೆಗಳು, ಸಂಘಟನೆಗಳು ಸಾಮಾಜಿಕ ಸೇವೆಗೆ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್, ರೆಡ್ ಕ್ರಾಸ್ ಸಂಸ್ಥೆಯ ನಾಗೇಂದ್ರ ಪ್ರಸಾದ್, ಗಾಜಲದಿನ್ನೆ ಸೀನಪ್ಪ ಸೇರಿದಂತೆ ಪತ್ರಕರ್ತರು‌ ಉಪಸ್ಥಿತರಿದ್ದರು.