ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ನಾಗರಿಕರ ಹಿತದೃಷ್ಟಿಯಿಂದ ರೂ. 1 ಕೋಟಿ ವೆಚ್ಚದಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್ ಸ್ಥಾಪಿಸಲಾಗಿದೆ. ಇದರಿಂದ ಕೊರೊನಾ ಸೋಂಕು ಪರೀಕ್ಷೆ ಫಲಿತಾಂಶ ಶೀಘ್ರವಾಗಿ ಸಿಗಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೋವಿಡ್ ಟೆಸ್ಟ್ ಲ್ಯಾಬನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಈ ಲ್ಯಾಬ್ ಸ್ಥಾಪನೆಗೆ ಐಸಿಎಂಸಿ ಅನುಮತಿ ದೊರೆತಿದೆ. ಇಲ್ಲಿ ದಿನವೊಂದಕ್ಕೆ 2 ಸಾವಿರ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿ 24 ಗಂಟೆಯೊಳಗೆ ಫಲಿತಾಂಶ ನೀಡಲಾಗುವುದು ಎಂದು ಹೇಳಿದರು.
ಕೊವಿಡ್ 2ನೇ ಅಲೆ ಸಾಕಷ್ಟು ಸಾವು ನೋವು ತಂದಿದೆ. 3ನೇ ಅಲೆ ಮಕ್ಕಳ ಪಾಲಿಗೆ ಮಾರಕವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದ್ದರಿಂದ ಪೋಷಕರು ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಕ್ಕಳು ಕ್ಷೇಮವಾಗಿದ್ದರೆ ಮಾತ್ರ ಕುಟುಂಬದಲ್ಲಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆಸ್ಪತ್ರೆ ಆವರಣದಲ್ಲಿ ಸರ್ಕಾರದಿಂದ ನಿರ್ಮಿಸಲಾಗುತ್ತಿರುವ ಆಮ್ಲಜನಕ ತಯಾರಿಕಾ ಘಟಕ ನಿಮಿಷವೊಂದಕ್ಕೆ 580 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರಿಗೆ ಅನುಕೂಲವಾಗುವಂತೆ ಆ.13 ರಂದು ಸುಸಜ್ಜಿತ ತೀವ್ರ ನಿಗಾ ಘಟಕ ಉದ್ಘಾಟಿಸಲಾಗುವುದು. 10 ವೆಂಟಿಲೇಟರ್‍ಗಳನ್ನು ಒದಗಿಸಲಾಗುವುದು. ಈಗಾಗಲೇ ತಾಲ್ಲೂಕಿನ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ.
ಸರ್ಕಾರ ಕೋವಿಡ್‍ನಿಂದ ಸಾವನ್ನಪ್ಪಿರುವ ವ್ಯಕ್ತಿಗಳ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು. ಜನರ ಆರ್ಥಿಕ ಸಂಕಷ್ಟಕ್ಕೆ ಸರಿಯಾದ ತೀತಿಯಲ್ಲಿ ಸ್ಪಂದಿಸಬೇಕು ಎಂದು ಆಗ್ರಹಪಡಿಸಿದರು.
ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಎಂಎಸ್‍ಐಎಲ್ ಮಾಜಿ ಅಧ್ಯಕ್ಷ ಅನಿಲ್ ಕುಮಾರ್. ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೋವಿಂದಸ್ವಾಮಿ, ಮ್ಯಾಕಲ ನಾರಾಯಣಸ್ವಾಮಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಗದೀಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಆಸ್ಪತ್ರೆ ಆಡಳಿತಾಧಿಕಾರಿ ಎಂ.ಶ್ರೀನಿವಾಸನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ವೆಂಕಟೇಶ್, ಸಂಜಯ್ ರೆಡ್ಡಿ, ಫಿರೋಜ್ ಖಾನ್, ವೇಣು ಇದ್ದರು.