ಶಿಕ್ಷಕರು ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಸ್ವಚ್ಚತೆ,ಸಾಮಾಜಿಕ ಅಂತರ,ಮಾಸ್ಕ್ ಧರಿಸಿ-ವಾಣಿ ಕಿವಿಮಾತು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸ್ವಚ್ಚತೆ, ಸಾಮಾಜಿಕ ಅಂತರ,ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಅನುಸರಿಸಿದರೆ ಕೊರೋನಾ ತಡೆ ಸಾಧ್ಯ ಎಂದು ತಾಲ್ಲೂಕಿನ ನರಸಾಪುರ ಪ್ರಾಥಮಿಕ ಆರೋಗ್ಯಸ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಹೆಚ್.ವಿ.ವಾಣಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲೆಗಳು ಜ.1 ರಿಂದ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶಾಲೆಯ ಆವರಣದಲ್ಲೇ ನರಸಾಪುರ ಪಿಹೆಚ್‍ಸಿಯಿಂದಕೋವಿಡ್ ಟೆಸ್ಟ್ ನಡೆಸಿ ಅವರು ಮಾತನಾಡುತ್ತಿದ್ದರು.
ಶಾಲೆಗಳು ನಡೆಯದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ, ಅದಕ್ಕಾಗಿ ಶಿಕ್ಷಕರು ಆನ್‍ಲೈನ್ ತರಗತಿ ನಡೆಸುತ್ತಿದ್ದರೂ, ಗ್ರಾಮೀಣ ಮಕ್ಕಳು,ಪೋಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಬರುತ್ತಿಲ್ಲ ಎಂದರು.
ಕೋವಿಡ್ ಟೆಸ್ಟ್‍ಗೆ ಅಂಜಿ ಹಲವಾರು ವಿದ್ಯಾರ್ಥಿಗಳು ಶಾಲೆಯತ್ತ ಬಂದಿಲ್ಲ ಎಂಬ ಶಿಕ್ಷಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಟೆಸ್ಟ್‍ನಿಂದ ಯಾವುದೇ ಸಮಸ್ಯೆ ಇಲ್ಲ, ನೀವು,ನಿಮ್ಮ ಕುಟುಂಬ ಹಾಗೂ ಸಮಾಜವನ್ನು ಕೋವಿಡ್‍ನಿಂದ ರಕ್ಷಿಸಲು ಪ್ರತಿಯೊಬ್ಬರೂ ಪರೀಕ್ಷೆಗೆ ಒಳಗಾಗಿ, ಸೋಂಕಿದ್ದರೆ ಹೆದರುವ ಅಗತ್ಯವಿಲ್ಲ,ಮನೆಯಲ್ಲೇ ಪ್ರತ್ಯೇಕವಾಗಿ ಇದ್ದು ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದರು.
ಸರ್ಕಾರವೂ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸಾಸೌಲಭ್ಯ ಒದಗಿಸಿದೆ, ಯಾವುದೇ ಆತಂಕದ ಅಗತ್ಯವಿಲ್ಲ, ಅದರಲ್ಲೂ ಯುವಕರಾದ ನಿಮಗೆ ವೈರಸ್ ಏನೂ ಮಾಡದು ಆದರೆ ನಿಮ್ಮೊಂದಿಗೆ ನಿಮ್ಮ ಮನೆಯಲ್ಲಿ ತಂದೆತಾಯಿ, ವಯಸ್ಸಾದ ಅಜ್ಜ,ಅಜ್ಜಿ ಇರುವುದರಿಂದ ಅವರ ಜೀವ ರಕ್ಷಣೆಗೆ ನೀವು ಒತ್ತು ನೀಡಬೇಕು ಎಂದರು.
ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ಎಲ್ಲರೊಂದಿಗೂ ಕೂಡಿ ಊಟ ಮಾಡುವುದು ಬೇಡ, ನಿಮ್ಮ ಸ್ನೇಹಿತರೊಂದಿಗೆ ಕಾಲ ಕಳೆಯುವಾಗ ದೂರದಿಂದಲೇ ಮಾತನಾಡಿಸಿ, ಅಂತರ ಕಾಪಾಡಿದರೆ ಅದು ನಿಮಗೆ ಒಳ್ಳೆಯದು ಎಂದರು.


ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಸಚ್ಚಿದಾನಂದಮೂರ್ತಿ ಮಾತನಾಡಿ, ಗ್ರಾಮೀಣ ಬಡ ಮಕ್ಕಳು ಕೋವಿಡ್ ಟೆಸ್ಟ್‍ಗಾಗಿ ಕೋಲಾರದ ಜಿಲ್ಲಾಸ್ಪತ್ರೆಗೆ ಹೋಗಬೇಕಾಗಿತ್ತು ಮತ್ತು ಅನೇಕ ಪೋಷಕರು ಟೆಸ್ಟ್‍ಗೆ ಹೆದರಿ ಮಕ್ಕಳನ್ನು ಶಾಲೆಗೆ ಕಳುಹಿಸಲೂ ಧೈರ್ಯ ಮಾಡಿರಲಿಲ್ಲ ಎಂದರು.
ಇದೀಗ ಶಾಲೆಯ ಆವರಣದಲ್ಲೇ ಟೆಸ್ಟ್ ಸೌಲಭ್ಯ ಒದಗಿಸಿದ್ದಕ್ಕಾಗಿ ಎಲ್ಲಾ ಮಕ್ಕಳು ಪರೀಕ್ಷೆಗೆ ಒಳಗಾಗಲು ಅನುಕೂಲವಾಗಿದೆ, ಇದಕ್ಕಾಗಿ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ,ಸಿಬ್ಬಂದಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಕೋವಿಡ್ ಪರೀಕ್ಷೆಗೆ ಹೆದರಿ ಮಾಹಿತಿ ನೀಡಿದ್ದರೂ ಶಾಲೆಗೆ ಬಾರದ 12ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಿಕ್ಷಕರೇ ಹೋಗಿ ಪೋಷಕರ ಮನವೊಲಿಸಿ ಶಾಲೆಗೆ ಕರೆತಂದರು.
ಶಿಕ್ಷಕರು ಹಾಗೂ ಹಲವು ವಿದ್ಯಾರ್ಥಿಗಳು ಮೊದಲಿಗೆ ಟೆಸ್ಟ್‍ಗೆ ಒಳಗಾಗಿ ಧೈರ್ಯ ತುಂಬಿದ್ದರಿಂದಾಗಿ ಇತರೆಲ್ಲಾ ವಿದ್ಯಾರ್ಥಿಗಳು ನಿರಾತಂಕದಿಂದ ಪರೀಕ್ಷೆಗೆ ಒಳಗಾದರು.
ಈ ಸಂದರ್ಭದಲ್ಲಿ ನರಸಾಪುರ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಾಂತ್ರಿಕರಾದ ಮನೋಹರ್ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕೋವಿಡ್ ಟೆಸ್ಟ್ ನಡೆಸಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಅರುಣಮ್ಮ, ಚಂದ್ರಮ್ಮ, ಶಿಕ್ಷಕರಾದ ಲೀಲಾ, ಶ್ರೀನಿವಾಸಲು, ಫರೀದಾ, ರಾಮಸಂದ್ರ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್,ಅರಾಭಿಕೊತ್ತನೂರು ಪ್ರಾಥಮಿಕ ಶಾಲಾ ಶಿಕ್ಷಕರಾದ ಸುಮ, ಹೇಮಲತಾ, ವಸಂತಮ್ಮ ಮತ್ತಿತರರು ಉಪಸ್ಥಿತರಿದ್ದರು
.