

ಕುಂದಾಪುರ, ಎ.30 ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ನ ಆಶ್ರಯದಲ್ಲಿ ಎ.27 ರಂದು ನಡೆದ ಆಲ್ಫ್ರೆಡ್ ಡಿಸೋಜಾ ಸ್ಮಾರಕ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ 13 ವರ್ಷ ವಯೋಮಿತಿಯ ಬಾಲಕರ ಡಬಲ್ಸ್ ವಿಭಾಗದಲ್ಲಿ ಯಶ್-ಆಯಾನ್ ಜೋಡಿ ಚಾಂಪಿಯನ್ ಪಟ್ಟ ಗೆದ್ದುಕೊಂಡರೆ, ಕುಂದಾಪುರ ಹಂಗಳೂರಿನ ಸೇಂಟ್ ಪಿಯೂಸ್ ಶಾಲೆಯ ಮೆಲ್ರಾನ್ ಕೋಥಾ ಹಾಗೂ ಶಯನ್ ಅವರು ರನ್ನರ್ಸ್ ಅಪ್ ಸ್ಥಾನ ಗಳಿಸಿದ್ದಾರೆ.
ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಯಶ್ ಹಾಗೂ ಆಯಾನ್ ಜೋಡಿ 21-17, 21-19 ಅಂತರದಲ್ಲಿ ಗೆದ್ದು ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಉತ್ತಮ ಪೈಪೋಟಿ ನೀಡಿದರೂ ಮೆಲ್ರಾನ್ ಹಾಗೂ ಶಯನ್ ಜೋಡಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
13 ವರ್ಷ ವಯೋಮತಿಯ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಇಶಾನ್ ಹೆಗ್ಡೆ 18-21, 21-19, 21-11 ಅಂತರದಲ್ಲಿ ಆಯಾನ್ ವಿರುದ್ಧ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು.
15 ವರ್ಷ ವಯೋಮಿತಿಯ ಬಾಲಕರ ಸಿಂಗಲ್ಸ್ ವಿಭಾಗಲ್ಲಿ ಮಂಗಳೂರಿನ ಗೌರವ್ 22-0,21-13 ಅಂತರದಲ್ಲಿ ಮಂಗಳೂರಿನ ರೆನ್ಸಿಲ್ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. 15 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಗೌರವ್ ಹಾಗೂ ರೆನ್ಸಿಲ್ ಜೋಡಿ 21-13, 19-21, 21-14 ಅಂತರದಲ್ಲಿ ಎಲ್ಡನ್ ಹಾಗೂ ಆದಿತ್ಯ ಜೋಡಿಯನ್ನು ಮಣಿಸಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
ವನಿತೆಯರ ವಿಭಾಗದಲ್ಲಿ ಮಂಗಳೂರಿನ ಅದಿತಿ ಆಚಾರ್ಯ ಹಾಗೂ ಅಲಿನಾ ಜೋಡಿ ಪ್ರಿಯಾ ಹಾಗೂ ರಮ್ಯ ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. 85+ ಜಂಬಲ್ಸ್ ವಿಭಾಗಲ್ಲಿ ಪ್ರತಾಪ್ ಹಾಗೂ ಪ್ರದೀಪ್ ಶೆಟ್ಟಿ ಜೋಡಿಯು ಸತೀಶ್ ಹಾಗೂ ಚೇತನ್ ಜೋಡಿಯನ್ನು ಮಣಿಸಿ ಅಗ್ರ ಸ್ಥಾನ ಗಳಿಸಿತು. ಮುಕ್ತ ವಿಭಾಗದಲ್ಲಿ ಚೇತನ್ ಹಾಗೂ ಕಾರ್ತಿಕ್ ಜೋಡಿಯನ್ನು ಮಣಿಸಿದ ಪ್ರಮೋದ್ ಹಾಗೂ ಶಶಾಂಕ್ ಜೋಡಿಯು ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
ಸಮಾರೋಪ ಸಮಾರಂಭ: ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದಿ. ಆಲ್ಫ್ರೆಡ್ ಡಿಸೋಜ ಅವರ ಪತ್ನಿ ಡೆನ್ಸಿಲ್ ಡಿಸೋಜ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ನ ಮಾಲೀಕರಾದ ಅಜಿತ್ ಡಿಕೋಸ್ಟಾ ಅವರ ತಾಯಿ ಕಾಸೆಸ್ ಡಿಕೋಸ್ಟಾ ಹಾಗೂ ಸೋಫಿಯಾ ಡಿ ಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುರಿಕಾರರಾದ ಲಾರೆನ್ಸ್ ಮೆನೇಜಸ್ ಅವರು ಈ ಕಾರ್ಯಕ್ರಮದ ಯಶಸ್ಸಿಗೆ ನೆರವಾದರು. ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ನ ಪ್ರಧಾನ ಕೋಚ್ ಸೋಮಣ್ಣ ನಂಜಪ್ಪ, ಕೇಂದ್ರದ ಆಡಳಿತಾಧಿಕಾರಿ ನಿಧೀಶ್ ಆಚಾರ್ಯ ಕಾರ್ಯಕ್ರಮವನ್ನು ಸಂಯೋಜಿಸಿದರು.
ಟೂರ್ನಿಯಲ್ಲಿ ತೀರ್ಪುಗಾರರಾಗಿ ಆರ್ಯ, ವಿಕಾಸ್, ರಿಹಾನ್, ರಿಯಾಜ್ ಹಾಗೂ ಜಾಯ್ಸನ್ ಸಹಕರಿಸಿದ್ದರು. ಟೂರ್ನಿಯ ವೇಳೆ ಅಕಾಡೆಮಿಯ ಇತರ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬೇಬಿ ಪೂಜಾರಿ ಹಾಗೂ ಲಕ್ಷ್ಮೀ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಟೂರ್ನಿಯ ವೇಳೆ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಎಲ್ಲ ಆಟಗಾರರು ಸ್ವಯಂ ಸೇವಕರಾಗಿ, ಲೈನ್ ಅಂಪೈರ್ ಆಗಿ ಕಾರ್ಯನಿರ್ವಹಿಸಿ ಯಶಸ್ಸಿನಲ್ಲಿ ತಮ್ಮದೇ ಅದ ಕೊಡುಗೆ ನೀಡಿದರು.
ಕುಂದಾಪುರ, ಮಂಗಳೂರು, ಸುರತ್ಕಲ್, ಕಾರ್ಕಳ, ಉಡುಪಿ, ಬ್ರಹ್ಮಾವರ ಹಾಗೂ ಶೃಂಗೇರಿಯಿಂದ ಸುಮಾರು 60ಕ್ಕೂ ಹೆಚ್ಚು ಬ್ಯಾಡ್ಮಿಂಟನ್ ಆಟಗಾರರು ಪಾಲ್ಗೊಂಡಿರುವುದು ವಿಶೇಷವಾಗಿತ್ತು.

























