ರೈತರ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾಡಳಿತವನ್ನು ಸರಿಪಡಿಸಿ, ರೈತಸಂಘದಿಂದ ಸಚಿವ ಮುನಿರತ್ನರವರಿಗೆ ಮನವಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ; ಮೇ.10: ರೈತರ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾಡಳಿತವನ್ನು ಸರಿಪಡಿಸಿ ರೈತರ ರಕ್ತ ಹೀರುವ ನಕಲಿ ರಸಗೊಬ್ಬರ ಮಾರಾಟ ದಂಧೆಗೆ ಕಡಿವಾಣ ಹಾಕಿ ಅಕಾಲಿಕ ಮಳೆಯಿಂದ ನಷ್ಟವಾಗಿರುವ ಪ್ರತಿ ಎಕರೆಗೆ 5 ಲಕ್ಷ ಪರಿಹಾg ನೀಡಬೇಕು. ಹಾಗೂ ಎ.ಪಿ.ಎಂ.ಸಿ ಮಾರುಕಟ್ಟೆಗೆ 50-100 ಎಕರೆ ಜಮೀನು ಮಂಜೂರು ಮಾಡುವಂತೆ ರೈತಸಂಘದಿಂದ ನಕಲಿ ಔಷಧಿ-ಗೊಬ್ಬರ ಸಮೇತ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಜಿಲ್ಲಾದ್ಯಂತ ಸರ್ಕಾರಿ ಕಚೇರಿಗಳು ದಲ್ಲಾಳಿಗಳ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಚಿನ್ನದ ಮೊಟ್ಟೆಯಿಡುವ ಇಲಾಖೆಗಳಾಗಿ ಜನಸಾಮಾನ್ಯರ ಪ್ರತಿ ಕೆಲಸಕ್ಕೂ ಲಂಚವಿಲ್ಲದೆ ಅಧಿಕಾರಿಯ ನೆರಳೂ ಸಹ ತಾಕುವಂತಿಲ್ಲ. ಅಷ್ಟರ ಮಟ್ಟಿಗೆ ಜಿಲ್ಲಾಡಳಿತ ಹದಗೆಟ್ಟಿದೆ. ಜೊತೆಗೆ ಪಿ ನಂಬರ್ ದಂಧೆ ಹೆಚ್ಚಾಗಿದ್ದು, ಪ್ರತಿ ಎಕರೆಗೆ 2 ರಿಂದ 4 ಲಕ್ಷ ಲಂಚ ನೀಡಬೇಕಾದ ಪರಿಸ್ಥಿತಿ ಕಂದಾಯ ಇಲಾಖೆಯಲ್ಲಿ ನಡೆಯುತ್ತಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.
ಸರ್ಕಾರಕ್ಕೆ ಸವಾಲಾಗಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಡಿ ಭಾಗದ ಆಂಧ್ರ ತಮಿಳುನಾಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆಯಲ್ಲಿ ನಕಲಿ ಕಂಪನಿಗಳ ದರ್ಬಾರಿಗೆ ಕಡಿವಾಣವಿಲ್ಲದಂತಾಗಿದೆ. ಬ್ರಾಂಡೇಡ್ ಕಂಪನಿಗಳ ಹೆಸರಿನಲ್ಲಿ ಡಿಎಪಿ, ಎಎಪಿ, 10-26 ಡ್ರಿಪ್ ಗೊಬ್ಬರಗಳು, ಔಷಧಿಗಳ ಮಾರಾಟ ದಂಧೆ ಹೆಚ್ಚಾಗಿದ್ದರೂ ಕ್ರಮಕೈಗೊಳ್ಳಬೇಕಾದ ಕೃಷಿ ಅಧಿಕಾರಿಗಳು ನೆಪ ಮಾತ್ರಕ್ಕೆ ತಪಾಸಣೆ ಮಾಡಿ ದಂಧೆಕೋರರ ಜೊತೆ ಶಾಮೀಲಾಗಿ ರೈತರ ಮರಣ ಶಾಸನ ಅಧಿಕಾರಿಗಳೇ ಬರೆಯುತ್ತಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿ ನಕಲಿ ಕಂಪನಿಗಳಿಂದ ರೈತರ ರಕ್ಷಣೆ ಮಾಡುವ ಜೊತೆಗೆ ದಂಧೆಕೋರರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಬೇಕು. ಅಲ್ಲದೆ ಅಕಾಲಿಕ ಮಳೆಯಿಂದ ನಷ್ಟವಾಗಿರುವ ಮಾವು ಸೇರಿದಂತೆ ಮತ್ತಿತರ ವಾಣಿಜ್ಯ ಬೆಳೆಗಳಿಗೆ ಸರ್ಕಾರದಿಂದ 5 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಚೆನ್ನೈ ಬೆಂಗಳೂರು ಕಾರಿಡಾರ್ ರಸ್ತೆ ಅಭಿವೃದ್ಧಿಗೆ ನಮ್ಮ ಅಭ್ಯಂತರವಿಲ್ಲ. ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘನೆ ಮಾಡಿ ಕೆರೆಯ ಸ್ವರೂಪ 30 ರಿಂದ 40 ಅಡಿ ಆಳ ಮಾಡಿ ನಾಶ ಮಾಡುವ ಜೊತೆಗೆ ರಸ್ತೆ ಅಭಿವೃದ್ಧಿ ಪಕ್ಕದಲ್ಲಿರುವ ರೈತರ ವಾಣಿಜ್ಯ ಬೆಳೆಗಳಿಗೆ ಧೂಳಿನ ಸಂಕಷ್ಟದಿಂದ ಸಂಪೂರ್ಣವಾಗಿ ಬೆಳೆ ಹಾನಿಯಾಗಿ ಕೋಟ್ಯಾಂತರರೂಪಾಯಿ ನಷ್ಟವಾಗುತ್ತಿದೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸುವಂತೆ ಆದೇಶ ಮಾಡಬೇಕು.
ಕಳೆದ ವರ್ಷ ಮುಂಗಾರು ಉತ್ತಮ ಮಳೆಯಿಂದ ರೈತರು ಬೆಳೆದಿರುವ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಣ್ಣ ಮತ್ತು ದೊಡ್ಡ ರೈತರು ಎಂದು ಭೇಧ ಭಾವ ಮಾಡಿ ಖರೀದಿಯಲ್ಲಿ ತಾರತಮ್ಯದಿಂದ ವಿಧಿ ಇಲ್ಲದೆ ರೈತರು ದಲ್ಲಾಳರಿಗೆ ಮಾರಬೇಕಾಗುತ್ತದೆ. ಇದರಿಂದ ಬೆಂಬಲ ಬೆಲೆ ಸಿಗದೆ ರೈತರು ನಷ್ಟವಾಗುತ್ತಾರೆ. ಷರತ್ತುಗಳಿಲ್ಲದೆ ರೈತರಿಗೆ ರಾಗಿ ಖರೀದಿ ಮಾಡುವ ಆದೇಶವನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಅಬಕಾರಿ ಇಲಾಖೆಯು ಕಾನೂನನ್ನು ಉಲ್ಲಂಘನೆ ಮಾಡಿ ಪ್ರತಿ ಹಳ್ಳಿಯಲ್ಲೂ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಮುಖಾಂತರ ಬಡವರ ಮಾಂಗಲ್ಯ ಕಸಿದುಕೊಳ್ಳುತ್ತಿದ್ದು, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಬಡವರ ಜೀವವನ್ನು ಉಳಿಸಬೇಕು.
ಜಿಲ್ಲಾದ್ಯಂತ ಆನ್‍ಲೈನ್ ಐಪಿಎಲ್ ಬೆಟ್ಟಿಂಗ್ ದಂಧೆ ಯುವ ಪೀಳಿಗೆಯನ್ನು ಸರ್ವ ನಾಶ ಮಾಡುತ್ತಿದ್ದು, ಅನೇಕರು ದಂಧೆಗೆ ದಾಸರಾಗಿ ಸಾಲದ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕಾದ ಕೆಲವು ಪೊಲೀಸ್ ಅಧಿಕಾರಿಗಳೇ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವುದು ದುರದೃಷ್ಟಕರವಾಗಿದ್ದು, ಇದನ್ನು ತಡೆಯಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ನೀವು ನೀಡಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ À ಭರವಸೆ ನೀಡಿದರು.
ಮನವಿ ನೀಡುವಾಗ ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಜಿಲ್ಲಾಧ್ಯಕ್ಷೆ ನಳಿನಿಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವ್ವಣ್ಣ, ಗೋವಿಂದಪ್ಪ, ಹರೀಶ್, ಕೆಜಿಎಫ್ ತಾಲೂಕು ಅಧ್ಯಕ್ಷ ರಾಮಸಾಗರ ವೇಣು, ಸಂದೀಪ್‍ಗೌಡ, ಸಂದೀಪ್‍ರೆಡ್ಡಿ, ಸುರೇಶ್‍ಬಾಬು, ಯಾರಂಘಟ್ಟ ಗೀರಿಶ್, ಮುದುವಾಡಿ ಚಂದ್ರಪ್ಪ, ತೆರ್ನಹಳ್ಳಿ ಆಂಜಿನಪ್ಪ ಮುಂತಾದವರಿದ್ದರು.