ಹೈಕೋರ್ಟ್ ಸೂಚಿಸಿರುವ ಆಡಳಿತಾತ್ಮಕ ಕ್ರಮಗಳನ್ನು ಸರಿಪಡಿಸಿ,ಜನರ ಹಿತದೃಷ್ಟಿ ಪರಿಗಣಿಸಿ, ಪ.ಪಂ ಪ್ರಕ್ರಿಯೆ ಮುಗಿಸಿ-ಸುದರ್ಶನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಹೈಕೋರ್ಟ್ ಸೂಚಿಸಿರುವ ಆಡಳಿತಾತ್ಮಕವಾಗಿ ಸೂಚಿಸಿರುವ ವಿಷಯಗಳನ್ನು ಸರಿಪಡಿಸಿ ವೇಮಗಲ್ ಸುತ್ತಮುತ್ತಲ 20 ಗ್ರಾಮಗಳ ಜನರ ಹಿತದೃಷ್ಟಿ ಪರಿಗಣಿಸಿ ತ್ವರಿತವಾಗಿ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ರಚನೆ ಪ್ರಕ್ರಿಯೆ ಅಂತಿಮಗೊಳಿಸುವಂತೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸರ್ಕಾರವನ್ನು ಆಗ್ರಹಿಸಿದರು.
ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಅವರು, ಹೈಕೋರ್ಟ್ ಅಂತಿಮ ಅಧಿಸೂಚನೆಗೆ ತಡೆ ನೀಡಿ,ಆಕ್ಷೇಪಣೆಗಳ ಕುರಿತು ಪೌರಾಡಳಿತ ನಿರ್ದೇಶನಾಲಯ ಸಾರ್ವಜನಿಕರನ್ನು ಕರೆಸಿ ಮಾತನಾಡಿಸಿಲ್ಲ ಎಂದು ಆಕ್ಷೇಪಿಸಿದೆ, ಸಂವಿಧಾನದ ತಿದ್ದುಪಡಿ 74 ರಡಿ ಸೆಕ್ಷನ್ 9ರ ಪ್ರಕಾರ ಡಿಸಿಯವರ ಬದಲು ಪೌರಾಡಳಿತ ನಿರ್ದೇಶಕರ, ಸರ್ಕಾರದ ಹಂತದಲ್ಲಿ ಆಕ್ಷೇಪ ಪರಿಶೀಲಿಸಬೇಕು ಎಂಬುದಾಗಿದೆ ಎಂದು ತಿಳಿಸಿದರು.
ಆದರೆ ಪಟ್ಟಣ ಪಂಚಾಯಿತಿಯ ರಚನೆಯ ಪ್ರಾಥಮಿಕ ಆದೇಶನ್ನು ರದ್ದು ಮಾಡಿಲ್ಲ ಎಂದು ಸ್ವಷ್ಟಪಡಿಸಿದ ಅವರು, ಸರ್ಕಾರ ಕೂಡಲೇ ಹೈಕೋರ್ಟ್ ಆಕ್ಷೇಪಗಳ ಕುರಿತು ಗಮನಹರಿಸಿ ಪಟ್ಟಣ ಪಂಚಾಯಿತಿ ರಚನೆಗೆ ಇರುವ ಅಡ್ಡಿ ನಿವಾರಿಸಬೇಕು ಎಂದರು.
ಪ್ರಕ್ರಿಯೆ ವಿಳಂಬವಾಗಿರುವುದರಿಂದ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿದೆ, ಪಟ್ಟಣ ಪಂಚಾಯಿತಿಗೆ ಸಿಬ್ಬಂದಿ ನೇಮಕವಾಗಿದ್ದು, ಅವರಿಗೆ 5 ತಿಂಗಳಿಂದ ಸಂಬಳವಿಲ್ಲ, ಕುಡಿಯುವ ನೀರು, ಜನನ,ಮರಣ ಪ್ರಮಾಣ, ಖಾತಾ, ದೀಪ, ಮನೆ ಕಟ್ಟಲು ಪರವಾನಗಿ, ಕೋವಿಡ್ ಆತಂಕದಲ್ಲಿ ಸ್ವಚ್ಚತಾ ಕಾರ್ಯಗಳಿಗೂ ಅಡ್ಡಿಯಾಗಿದೆ.
ಇಲಾಖೆ, ಸರ್ಕಾರ ಜನರ ಸಮಸ್ಯೆ ಬಗೆಹರಿಸಬೇಕು, ಹೈಕೋರ್ಟ್ ಸೂಚನೆಯಂತೆ ಅಗತ್ಯ ಕ್ರಮ ಕೈಗೊಂಡು ಶೀಘ್ರ ಸಮಸ್ಯೆ ಬಗೆಹರಿಸಿ, ಪಟ್ಟಣ ಪಂಚಾಯಿತಿ ರಚನೆ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಮಾಡಿದ ಮನವಿಗೆ ಸ್ಪಂದಿಸಿ ಪಟ್ಟಣ ಪಂಚಾಯಿತಿ ಮಾಡಿದ್ದಾರೆ, ಕೈಗಾರಿಕಾ ಪ್ರದೇಶವೂ ಆಗಿದೆ, ಕೆಐಡಿಬಿ 2ನೇ ಹಂತದ ಕೈಗಾರಿಕಾ ವಲಯ ಸ್ಥಾಪನೆಯಾದರೆ ವೇಮಗಲ್-ಕುರಗಲ್ ಈಗಾಗಲೇ ಬೆರೆತಿದ್ದು, ಮುಂದೆ ಎಲ್ಲಾ ಹಳ್ಳಗಳು ಬೆರೆತು ಹೋಗಲಿದೆ ಎಂದರು.


ಮಗು ಕತ್ತುಹಿಸುಕಿ ಕೊಲ್ಲೋದು ಬೇಡ


ಪಟ್ಟಣ ಪಂಚಾಯಿತಿ ಹಸುಗೂಸು ಹುಟ್ಟಿದೆ, ಅದಕ್ಕೆ ನಾಮಕರಣವೂ ಆಗಿದೆ, ಈಗ ಕತ್ತು ಹಿಸುಕುವ ಕೆಲಸ ಬೇಡ ಎಂದು ಹೈಕೋರ್ಟ್‍ಗೆ ಹೋದ ಸ್ನೇಹಿತರಿಗೆ ಸಲಹೆ ನೀಡುತ್ತಿರುವುದಾಗಿ ತಿಳಿಸಿದ ಅವರು, ಕಂದಾಯ ಇಲಾಖೆ, ಆಸ್ಪತ್ರೆ, ಶಾಲೆ, ಪೊಲೀಸ್ ಠಾಣೆ,ಬ್ಯಾಂಕ್, ಅಂಚೆ ಕಚೇರಿ ಮೇಲ್ದರ್ಜೆಗೆ ಏರಿದೆ, ಇದಕ್ಕೆ ವಿರೋಧ ಇಲ್ಲ, ಗ್ರಾಮ ಪಂಚಾಯಿತಿ ಮೇಲ್ದರ್ಜೆಗೆ ಏರಿದರೆ ಏಕೆ ವಿರೋಧ ಎಂದು ಪ್ರಶ್ನಿಸಿದರು.
ವೇಮಗಲ್ 1967 ರಲ್ಲಿ ವಿಧಾನಸಭಾ ಕ್ಷೇತ್ರವಾಯಿತು, ನಾರಾಯಣಗೌಡ, ಸಿ.ಬೈರೇಗೌಡರನ್ನು ಕೊಡುಗೆ ನೀಡಿದೆ, ಈ ಮುಂದಿನ ಕ್ಷೇತ್ರ ಪುನರ್‍ವಿಂಗಡಣೆ ಸಂದರ್ಭದಲ್ಲಿ ಮತ್ತೆ ವೇಮಗಲ್ ಕ್ಷೇತ್ರವಾಗುವ ಸಾಧ್ಯತೆಗಳೂ ಇಲ್ಲದಿಲ್ಲ, ಜತೆಗೆ ತಾಲ್ಲೂಕಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳು ಇದ್ದು, ತಾಲ್ಲೂಕು ಕೇಂದ್ರವಾಗಲು ಅವಕಾಶವಿದೆ, ಇದು 65 ಹಳ್ಳಿಗಳ ದೊಡ್ಡ ಹೋಬಳಿಯಾಗಿದೆ ಎಂದರು.
ದೂರದೃಷ್ಟಿಯಿಂದ ಮೂಲಭೂತ ಸೌಲಭ್ಯಗಳ ಅಭಿವೃದ್ದಿಗಾಗಿ ಪಟ್ಟಣ ಪಂಚಾಯಿತಿ ರಚನೆಗೆ 28-12-2020 ರಂದು ಈ ವ್ಯಾಪ್ತಿಗೆ ಬರುವ ವೇಮಗಲ್,ಕುರಗಲ್ ಗ್ರಾ.ಪಂಗೆ 1994 ರ ನಂತರ ಅಧ್ಯಕ್ಷರಾಗಿದ್ದವರು, ಚೌಡದೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ 4 ಗ್ರಾಮಗಳು, ಶೆಟ್ಟಿಹಳ್ಳಿ ಗ್ರಾ.ಪಂ ನ ಒಂದು ಗ್ರಾಮ ಪುರಹಳ್ಳಿಯ ಹಾಲಿ ಗ್ರಾ.ಪಂ ಸದಸ್ಯರು ಒಪ್ಪಿಗೆ ನೀಡಿ ಪೌರಾಡಳಿತ ನಿರ್ದೇಶಕರಿಗೆ ಪತ್ರ ನೀಡಿದ್ದಾರೆ.
ಈ ಕಾರ್ಯ ಪಕ್ಷಾತೀತವಾಗಿದ್ದು, ಸಂಸದ ಎಸ್.ಮುನಿಸ್ವಾಮಿ, ಅಂದಿನ ಉಸ್ತುವಾರಿ ಸಚಿವರಾಗಿದ್ದ ಹೆಚ್.ನಾಗೇಶ್ ಅವರು ಸರ್ಕಾರ, ಮುಖ್ಯಮಂತ್ರಿಗಳಿಗೆ ಪಟ್ಟಣ ಪಂಚಾಯಿತಿ ರಚನೆ, ಸೌಲಭ್ಯ ಒದಗಿಸಲು ಮನವಿ ಮಾಡಿದ್ದಾರೆ, ಹಾಲಿ ಶಾಸಕರಾದ ಕೆ.ಶ್ರೀನಿವಾಸಗೌಡರು, ಎಂಎಲ್‍ಸಿ ಗೋವಿಂದರಾಜು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಉದಯಶಂಕರ್, ಬಿಜೆಪಿ ವೇಮಗಲ್ ಘಟಕದ ಅಧ್ಯಕ್ಷ ರಾಮಚಂದ್ರೇಗೌಡ ಎಲ್ಲರೂ ಪಟ್ಟಣ ಪಂಚಾಯಿತಿ ರಚನೆಗೆ ಸ್ವಾಗತಿಸಿ ಪತ್ರ ಬರೆದಿದ್ದಾರೆ ಎಂದು ವಿವರಿಸಿದರು.


ವಕೀಲರಿಂದಲೂ ತಪ್ಪು ಮಾಹಿತಿ


ಹೈಕೋರ್ಟ್‍ಗೆ ಪಿಎಲ್‍ಐ ಹಾಕಿರುವವರ ಪರ ವಕೀಲರು ತಪ್ಪು ಮಾಹಿತಿ ನೀಡಿದ್ದಾರೆ, ವೇಮಗಲ್‍ನಲ್ಲಿ ಪದವಿ ಕಾಲೇಜಿಲ್ಲ ಎಂದು ತಿಳಿಸಿದ್ದಾರೆ, ಆದರೆ ಇಲ್ಲಿ ಪದವಿ ಕಾಲೇಜು ಇದೆ, ಈ ವರ್ಷದಿಂದ ಸ್ನಾತಕೋತ್ತರ ತರಗತಿಯೂ ಆರಂಭವಾಗುತ್ತಿದೆ, ಕುರಗಲ್-ವೇಮಗಲ್‍ಗೆ ಬಸ್ಸಿಲ್ಲ ಎಂದು ತಿಳಿಸಿದ್ದಾರೆ ಆದರೆ ಇದು ರಾಜ್ಯ ಹೆದ್ದಾರಿಯಾಗಿದೆ, 15 ನಿಮಿಷಕ್ಕೆ ಬಸ್ಸು ಸಂಚರಿಸುತ್ತಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗವೂ 4-12-2020 ರಲ್ಲಿ ಪಿಲಮನರಿ ಅಧಿಸೂಚನೆಯಂತೆ ವೇಮಗಲ್ ಜಿಪಂ ಚುನಾವಣೆ ಘೋಷಿಸಿಲ್ಲ, ಗ್ರಾ.ಪಂ ಚುನಾವಣೆಯಿಂದ ಕೈಬಿಡಲಾಗಿದೆ, ಪಟ್ಟಣ ಪಂಚಾಯಿತಿ ಎಂದು ಚುನಾವಣೆ ಪ್ರಕ್ರಿಯೆಯಿಂದ ಹೊರಗಿಟ್ಟಿದೆ ಎಂದರು.
ಪಟ್ಟಣ ಪಂಚಾಯಿತಿ ಆದರೆ ಆಸ್ತಿ ತೆರಿಗೆ, ಕೈಗಾರಿಕಾ ತೆರಿಗೆ ಸೂಕ್ತ ರೀತಿಯಲ್ಲಿ ವಿತರಣೆಯಾಗಲಿದೆ,20 ಹಳ್ಳಿಗಳಿಗೂ ಇದು ಸಮನಾಗಿ ಹಂಚಿಕೆಯಾಗಲಿದೆ ಎಂದ ಅವರು, ನರೇಗಾ ಕಾರ್ಯಕ್ರಮ ಹೋಗುತ್ತೆ ಎನ್ನುವ ಆತಂಕ ಕೆಲವರದ್ದಾಗಿದೆ ಆದರೆ ಇಂತಹ ಹತ್ತಾರು ಕಾರ್ಯಕ್ರಮ ಬರಲಿದೆ, ಜತೆಗೆ ನರೇಗಾ ಮಾದರಿಯಲ್ಲಿ ನಗರಾಭಿವೃದ್ದಿಗೆ ಯೋಜನೆ ಜಾರಿ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ ಎಂದರು.
ಕುರಗಲ್ ಸಮೀಪ ಸರ್ವೇ ನಂ.51 ರಲ್ಲಿ 10 ಎಕರೆ ಜಾಗವನ್ನು ಪಟ್ಟಣ ಪಂಚಾಯಿತಿಗೆ ಮೀಸಲಿಡಲು ನಿರ್ಧರಿಸಲಾಗಿದೆ, ಇದರಿಂದ ವೇಮಗಲ್-ಕುರಗಲ್ ಎರಡೂ ಗ್ರಾಮಗಳ ನಡುವೆ ಪಟ್ಟಣ ಪಂಚಾಯಿತಿ ಕಚೇರಿ ಇರಲಿದೆ ಎಂದರು.
ಪಟ್ಟಣ ಪಂಚಾಯಿತಿ ರಚನೆಯಿಂದ ಕೃಷಿ,ಹೈನುಗಾರಿಕೆ ಯಾವುದಕ್ಕೂ ತೊಂದರೆ ಇಲ್ಲ ಎಂದರು.
ಕುಡಿಯುವ ನೀರು ಸರಬರಾಜು ಜಲಮಂಡಳಿ ವ್ಯಾಪ್ತಿಗೆ ಬರಲಿದೆ, ಬಿಬಿಎಂಪಿಯಲ್ಲಿ 110 ಹಳ್ಳಿಗಳು ಸೇರಿ ಬೃಹತ್ ಮಹಾನಗರಪಾಲಿಕೆ ಆಗಲಿಲ್ಲವೇ, ಕೋಲಾರ ವ್ಯಾಪ್ತಿಯಲ್ಲಿ ಟಮಕ ಗ್ರಾ.ಪಂ ಸೇರಿಯೇ ನಗರಸಭೆ ಆಗಲಿಲ್ಲವೇ ಎಂದು ಪ್ರಶ್ನಿಸಿ,ಮುಂದೆ ಕೋಲಾರವೂ ಮಹಾನಗರಪಾಲಿಕೆ ಆಗಬಹುದು, ನಮ್ಮ ಸ್ನೇಹಿತರು ಆತಂಕದಿಂದ ಪಿಎಲ್‍ಐ ಹಾಕಿರಬಹುದು,ಅದು ಅವರ ಹಕ್ಕು ಎಂದು ತಿಳಿಸಿ, ಪಟ್ಟಣ ಪಂಚಾಯಿತಿ ರಚನೆ ಹಿಂದೆ ಪಕ್ಷಾತೀತವಾಗಿ ಹಲವಾರು ಮಂದಿಯ ಪ್ರಯತ್ನವಿದೆ ಎಂದರು.
ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ಪಟ್ಟಣ ಪಂಚಾಯಿತಿ ರಚನೆಗೆ ಇರುವ ಅಡ್ಡಿ ನಿವಾರಿಸಬೇಕು, ಹೈಕೋರ್ಟ್ ಸೂಚನೆಯಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುದರ್ಶನ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೈಸೂರು ಮಿನರಲ್ಸ್ ನಿರ್ದೇಶಕ ಆರ್.ಕಿಶೋರ್‍ಕುಮಾರ್, ನಿವೃತ್ತ ತಹಸೀಲ್ದಾರ್ ಮುನಿಯಪ್ಪ, ವೇಮಗಲ್ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ನಾಗರಾಜ್, ಕುರಗಲ್ ಸದಸ್ಯ ಕೆ.ಎಸ್.ರಮೇಶ್, ಪಾಪಣ್ಣ, ಮುಖಂಡರಾದ ಮಲ್ಲಪ್ಪನಹಳ್ಳಿ ನಾರಾಯಣಸ್ವಾಮಿ, ವಿಶ್ವನಗರ ಎಂ.ಮುನಿಯಪ್ಪ, ಕೆ.ಎನ್.ಮಂಜುನಾಥ್, ಕೆ.ಬಿ.ಶಿವಕುಮಾರ್,ಪ್ರಶಾಂತ್ ಮತ್ತಿತರರಿದ್ದರು.